ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರು ನಗರದಲ್ಲಿ ಸಂಚಾರಕ್ಕಾಗಿ ವಿದ್ಯುತ್ ಚಾಲಿತ (ಇವಿ) ಕಾರು ನೀಡಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಬೆಂಗಳೂರು (ಅ.07): ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರು ನಗರದಲ್ಲಿ ಸಂಚಾರಕ್ಕಾಗಿ ವಿದ್ಯುತ್ ಚಾಲಿತ (ಇವಿ) ಕಾರು ನೀಡಲಾಗುವುದು ಎಂದು ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರದಲ್ಲಿ ಪರಿಸರ ಮಾಲಿನ್ಯ ಅದರಲ್ಲೂ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಸಾರ್ವಜನಿಕರು ಸಾಮಾನ್ಯ ಕಾರುಗಳ ಬದಲಾಗಿ ಮುಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ಕಾರು ಬಳಸುವಂಥ ಸಂದೇಶ ಹೋಗಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರಿಗೆ ಉತ್ತಮ ಇವಿ ಕಾರನ್ನು ಮಂಡಳಿಯಿಂದ ನೀಡಲಾಗುವುದು ಎಂದರು. ಜತೆಗೆ ಇಲಾಖೆ ಸಚಿವರಿಗೂ ಇವಿ ಕಾರು ನೀಡಲಾಗುವುದು. ಜತೆಗೆ ಸರ್ಕಾರ ಇನ್ನು ಮುಂದೆ ಇವಿ ಕಾರುಗಳನ್ನಷ್ಟೇ ಖರೀದಿಸುವಂತೆ, ಸಚಿವರಿಗೆ, ಅಧಿಕಾರಿಗಳಿಗೆ ಇವಿಯನ್ನೇ ನೀಡುವಂತೆ ಮನವಿ ಮಾಡಲಿದ್ದೇವೆ ಎಂದು ಹೇಳಿದರು.
ನಾನೂ ಸಚಿವ ಸ್ಥಾನದ ಆಕಾಂಕ್ಷಿ
ಸಚಿವ ಸಂಪುಟ ವಿಸ್ತರಣೆ ಆಗುವುದಾದರೆ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಸಿಎಂ ಬದಲಾವಣೆ ವಿಚಾರದಲ್ಲಿ ನಮಲ್ಲಿ ಯಾವುದೇ ಪ್ರಶ್ನೆ ಇಲ್ಲ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಹೇಳಿದ್ದಾರೆ. ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ದರಾಗಿದ್ದೇವೆ.
ರಾಷ್ಟ್ರದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಬಲಪಡಿಸುವುದು ನಮ್ಮ ಮೊದಲ ಆದ್ಯತೆ. ಪಕ್ಷದಲ್ಲಿ, ಆಡಳಿತದಲ್ಲಿ ಹಿರಿಯನಾಗಿ ಸಹಜವಾಗಿ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಹೈಕಮಾಂಡ್ ನನ್ನ ಕೊಡುಗೆ ಪರಿಗಣಿಸುತ್ತದೆ ಎಂಬ ನಂಬಿಕೆ ನಮಗಿದೆ. ಆದರೆ, ಇನ್ನು ಸಿಎಂ ಬದಲಾವಣೆ ಬಗ್ಗೆ ನಮ್ಮ ಯಾವುದೇ ಪ್ರಶ್ನೆಯೆ ಇಲ್ಲ. ಯಾರಿಗೂ ಇದನ್ನು ಪ್ರಶ್ನಿಸಲು ಅವಕಾಶವೂ ಇಲ್ಲ. ಎಲ್ಲದಕ್ಕೂ ಹೈಕಮಾಂಡ್ ಉತ್ತರಿಸುತ್ತದೆ ಎಂದರು.
