ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒದಗಿಸುವುದು ಸರ್ಕಾರದ ಯೋಜನೆಯಾಗಿದೆ. ಈಗಾಗಲೇ 22 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಬೆಳಗಾವಿ (ಅ.05): ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒದಗಿಸುವುದು ಸರ್ಕಾರದ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ 22 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗಿದೆ. ಉಳಿದ ಕಡೆಗಳಲ್ಲೂ ಶೀಘ್ರ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ನಗರದ ಬಿಮ್ಸ್ ಆವರಣದಲ್ಲಿ ಶುಕ್ರವಾರ ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ, ಗೃಹವೈದ್ಯರ ವಸತಿ ನಿಲಯ ನಿರ್ಮಾಣಕ್ಕೆ ಶಿಲಾನ್ಯಾಸ, ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ನಗರ ಬಸ್ ನಿಲ್ದಾಣ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಿಎಂ-ಉಷಾ(ಮೇರು) ಕಟ್ಟಡ ಕಾಮಗಾರಿಗಳು ಮತ್ತು ಹೆದ್ದಾರಿಯಿಂದ ವಿಶ್ವವಿದ್ಯಾಲಯದ ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕಾರಣಾಂತರಗಳಿಂದ ಕುಂಟುತ್ತ ಸಾಗಿದ್ದ ಬಿಮ್ಸ್ ಆಸ್ಪತ್ರೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಇದೀಗ ಆರಂಭಿಸಲಾಗಿದೆ. ಹಂತ ಹಂತವಾಗಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು. ಕೆಎಲ್ಇ ಸಂಸ್ಥೆಯಿಂದ ವೈದ್ಯರನ್ನು ನಿಯೋಜಿಸಿ ಉಚಿತ ಸೇವೆ ಒದಗಿಸಿರುವುದರಿಂದ ಸರ್ಕಾರದ ವತಿಯಿಂದ ಧನ್ಯವಾದ ತಿಳಿಸಿದರು. ಬಡವರು, ತಳ ಸಮುದಾಯದ ಜನರಿಗೆ ಹಾಗೂ ಅಸಮಾನತೆ ನಿರ್ಮೂಲನೆ ಮಾಡಲು ಅವಕಾಶ ವಂಚಿತರಿಗೆ ಉತ್ತಮ ಸೌಲಭ್ಯ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ.
ಸಮ ಸಮಾಜ ನಿರ್ಮಾಣಕ್ಕಾಗಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಗಾಂಧೀಜಿಯವರು ಸಮಾಜದ ಕಟ್ಟಕಡೆಯ ಜನರನ್ನು ಸ್ವಾವಲಂಬಿಯಾಗಿಸಬೇಕು ಎಂಬುದಕ್ಕೆ ಶ್ರಮಿಸಿದವರು. ಅಸಮಾನತೆ ತೊಡೆದು ಹಾಕಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು. ಬಡವರಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವುದು ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಲಕ್ಷಾಂತರ ಜನರಿಗೆ ನೆರವು ನೀಡಲಾಗುತ್ತಿದೆ. ಇಂತಹ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಿಂದ ಉಚಿತವಾಗಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಬೆಳಗಾವಿ ನಗರಕ್ಕೆ ನೂರು ಎಲೆಕ್ಟ್ರಿಕ್ ಬಸ್: ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿ ನಗರ ಬಸ್ ನಿಲ್ದಾಣ ನಿರ್ಮಿಸಲಾಗಿದೆ. 700 ಬಸ್‌ಗಳು ಜನ ಸೇವೆಗೆ ಅಣಿಯಾಗಿವೆ. ಅಲ್ಲದೇ, ಶೀಘ್ರದಲ್ಲಿಯೇ 100 ವಿದ್ಯುತ್ ಚಾಲಿತ ಬಸ್‌ಗಳನ್ನು ಬೆಳಗಾವಿ ನಗರಕ್ಕೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ರಾಜ್ಯದಲ್ಲಿ ಹತ್ತು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಖುಷ್ಕಿ ಬೆಳೆಹಾನಿ ₹8.5 ಸಾವಿರ ಪರಿಹಾರದಂತೆ ಹಾಗೂ ಎನ್‌ಡಿಆರ್‌ಎಫ್ ಮಾರ್ಗಸೂಚಿ ₹8.5 ಸಾವಿರ ಸೇರಿಸಿ ಒಟ್ಟು ₹17 ಸಾವಿರ ಪರಿಹಾರ ನೀಡಲಾಗುತ್ತಿದೆ. ನೀರಾವರಿ ಬೆಳೆಹಾನಿಗೆ ₹21,500 ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇನ್ನೂ ಅನೇಕ ಕಡೆ ಮಳೆಯಾಗುತ್ತಿದ್ದು, ಬೆಳೆಹಾನಿ ಸಮೀಕ್ಷೆ ಬಳಿಕ ಪರಿಹಾರ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಸಚಿವರಾದ ಸತೀಶ್ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶರಣ ಪ್ರಕಾಶ್ ಪಾಟೀಲ, ರಾಮಲಿಂಗಾ ರೆಡ್ಡಿ ಮಾತನಾಡಿದರು. ಈ ವೇಳೆ ಶಾಸಕ ಆಸಿಫ್(ರಾಜು) ಸೇಠ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಭರಮಗೌಡ ಕಾಗೆ, ಶಾಸಕ ಬಾಬಾಸಾಹೇಬ್ ಪಾಟೀಲ, ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಉಪಸ್ಥಿತರಿದ್ದರು.
