ಅಭಿವ್ಯಕ್ತಿ ಸ್ವಾತಂತ್ರಕ್ಕೆ ನಾನು ಮತ್ತು ನಮ್ಮ ಸರ್ಕಾರ ಎಂದೆಂದಿಗೂ ಬದ್ಧವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇರಲೇಬೇಕು. ಅದನ್ನು ಮೊಟಕು ಮಾಡುವ ಕಾರ್ಯವನ್ನು ನಾವು ಎಂದೂ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಹುಬ್ಬಳ್ಳಿ (ಸೆ.16): ಅಭಿವ್ಯಕ್ತಿ ಸ್ವಾತಂತ್ರಕ್ಕೆ ನಾನು ಮತ್ತು ನಮ್ಮ ಸರ್ಕಾರ ಎಂದೆಂದಿಗೂ ಬದ್ಧವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇರಲೇಬೇಕು. ಅದನ್ನು ಮೊಟಕು ಮಾಡುವ ಕಾರ್ಯವನ್ನು ನಾವು ಎಂದೂ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಗರದ ಗೋಕುಲ್‌ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಸಂಜೆ ನೂತನವಾಗಿ ಆರಂಭವಾದ ‘ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್’ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಊಹೆ ಮಾಡಿ ಸುದ್ದಿ ಮಾಡಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಪಡೆದು ಸುಳ್ಳು ಸುದ್ದಿ ಹರಡಬೇಡಿ. ಸುದ್ದಿ ಮಾಡುವಾಗ ವಿಷಯದ ಸತ್ಯಾಸತ್ಯತೆ ಅರಿತು, ಮೂಲ ಪರಿಶೀಲಿಸಿ, ನೈಜ ಸಂಗತಿಯನ್ನು ಜನರ ಮುಂದಿಡಬೇಕು. ಆ ಮೂಲಕ ಸಾರ್ವಜನಿಕರು ಮಾಧ್ಯಮಗಳ ಮೇಲಿಟ್ಟಿರುವ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಯೂಟ್ಯೂಬ್, ಡಿಜಿಟಲ್ ಮಾಧ್ಯಮಕ್ಕೆ ಲೈಸೆನ್ಸ್ ನೀಡುವ ಬಗ್ಗೆ ಮತ್ತು ಸುಳ್ಳು ಸುದ್ದಿ ತಡೆ ಕಾಯ್ದೆ ಜಾರಿಗೆ ಸರ್ಕಾರ ಪರಿಶೀಲನೆ ನಡೆಸಲಿದೆ.

ಜೊತೆಗೆ, ಸರ್ಕಾರ ತಾಲೂಕುಮಟ್ಟದ ಪತ್ರಕರ್ತರಿಗೆ ಪಾಸ್‌, ಆರೋಗ್ಯ ಸಂಜೀವಿನಿ, ನಿವೃತ್ತ ಪತ್ರಕರ್ತರಿಗೆ ಮಾಶಾಸನ ನೀಡುವ ಮೂಲಕ ಅನುಕೂಲ ಕಲ್ಪಿಸಿದೆ ಎಂದು ತಿಳಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮಾಧ್ಯಮ ಪತ್ರಕರ್ತರಿಗೆ ಸಾಂಕೇತಿಕವಾಗಿ ಅಪಘಾತ ವಿಮೆಯ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು. ಈ ವೇಳೆ ಸಂಘದ ಲೋಗೋ ಅನಾವರಣ ಮಾಡಲಾಯಿತು. ಸಚಿವರಾದ ಸಂತೋಷ ಲಾಡ್‌, ಚಲುವರಾಯಸ್ವಾಮಿ, ಶಾಸಕರಾದ ಎನ್.ಎಚ್.ಕೋನರಡ್ಡಿ, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಉಪಸ್ಥಿತರಿದ್ದರು.

ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಏಕೆ ಮತಾಂತರಗೊಳ್ಳುತ್ತಿದ್ದರು?

ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಎಲ್ಲರಿಗೂ ಸಮಾನ ಅವಕಾಶಗಳಿದ್ದರೆ ಜನ ಯಾಕೆ ಮತಾಂತರಗೊಳ್ಳುತ್ತಿದ್ದರು ಎಂದು ಪ್ರತಿಪಾದಿಸಿದ್ದಾರೆ. ಮತಾಂತರದ ಬಗ್ಗೆ ಪ್ರತಿಕ್ರಿಯಿಸಿ, ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಎಲ್ಲರಿಗೂ ಸಮಾನ ಅವಕಾಶಗಳಿದ್ದರೆ ಜನ ಯಾಕೆ ಮತಾಂತರಗೊಳ್ಳುತ್ತಿದ್ದರು. ಅಸ್ಪೃಶ್ಯತೆ ಏಕೆ ಬಂತು? ಅದನ್ನು ನಾವು ಹುಟ್ಟು ಹಾಕಿದ್ದೇವೆಯೇ? ಎಂದು ಪ್ರಶ್ನಿಸಿದರು. ಅಸಮಾನತೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಎಲ್ಲಾ ಧರ್ಮದಲ್ಲಿ ಇದ್ದರೂ, ಮತಾಂತರ ಆಗಿ ಎಂದು ಹೇಳಿಲ್ಲ. ಆದರೂ ಮತಾಂತರವಾಗಿದ್ದಾರೆ. ಅದು ಅವರ ಹಕ್ಕು ಎಂದು ಹೇಳಿದರು.

ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಜಾತಿಗಣತಿಯಲ್ಲಿ ಹೊಸ ಜಾತಿಗಳನ್ನು ಸೇರ್ಪಡೆ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಕೈಗೊಂಡಿರುವ ಜಾತಿ ಗಣತಿ ಬಗ್ಗೆ ಅವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ಯಾರಾದರೂ ಮತಾಂತರಗೊಂಡಿದ್ದರೆ ಅವರ ಈಗಿನ ಜಾತಿಯನ್ನೇ ಮುಂಬರುವ ಜನಗಣತಿ ವೇಳೆ ಪರಿಗಣಿಸಲಾಗುವುದು. ಮತಾಂತರವಾಗುವುದು ಬೇಡ ಎಂದರೂ ವ್ಯವಸ್ಥೆಯ ಪರಿಣಾಮವಾಗಿ ಜನ ಮತಾಂತರಗೊಳ್ಳುತ್ತಾರೆ. ನಾನು ಮುಸ್ಲಿಂ ಆಗಿ ಮತಾಂತರ ಆದರೆ ನನ್ನ ಜಾತಿಯೂ ಆ ಧರ್ಮದ ಜೊತೆ ಸೇರುತ್ತೆ ಅಲ್ವಾ? ನಾನೇನು ಮುಸ್ಲಿಂ ಆಗಿ ಮತಾಂತರ ಆಗಲ್ಲ. ಸುಮ್ಮನೆ ಉದಾಹರಣೆ ಆಗಿ ಹೇಳಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.