ನಗರ ಪ್ರದೇಶದಲ್ಲಿ ಅಲ್ಪಸಂಖ್ಯಾತರು ಹೆಚ್ಚು ವಾಸಿಸುತ್ತಿರುವ ಹಿಂದುಳಿದ ಕಾಲೊನಿಗಳ ಅಭಿವೃದ್ಧಿಗೆ 389 ಕೋಟಿ ರು. ಕಾಮಗಾರಿಗಳಿಗೆ ಒಪ್ಪಿಗೆ ಸೇರಿ ಹಲವು ಯೋಜನೆಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಬೆಂಗಳೂರು (ಸೆ.05): ರಾಜ್ಯದ 14 ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ 20 ವಿದ್ಯಾರ್ಥಿ ನಿಲಯಗಳನ್ನು 15.45 ಕೋಟಿ ರು. ವೆಚ್ಚದಲ್ಲಿ ಹೊಸದಾಗಿ ಪ್ರಾರಂಭಿಸಲು, ನಗರ ಪ್ರದೇಶದಲ್ಲಿ ಅಲ್ಪಸಂಖ್ಯಾತರು ಹೆಚ್ಚು ವಾಸಿಸುತ್ತಿರುವ ಹಿಂದುಳಿದ ಕಾಲೊನಿಗಳ ಅಭಿವೃದ್ಧಿಗೆ 389 ಕೋಟಿ ರು. ಕಾಮಗಾರಿಗಳಿಗೆ ಒಪ್ಪಿಗೆ ಸೇರಿ ಹಲವು ಯೋಜನೆಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ರಾಜ್ಯದ ವಿವಿಧ 22 ವಿಧಾನಸಭಾ ಕ್ಷೇತ್ರಗಳಲ್ಲಿ (40 ಕಾಮಗಾರಿಗಳು) ಅಲ್ಪಸಂಖ್ಯಾತರು ವಾಸಿಸುತ್ತಿರುವ ನಗರ ಪ್ರದೇಶಗಳಲ್ಲಿನ ಅತೀ ಹಿಂದುಳಿದ ಕಾಲೋನಿಗಳನ್ನು ಮಾದರಿ ಕಾಲೋನಿಗಳನ್ನಾಗಿ ಅಭಿವೃದ್ಧಿಪಡಿಸಲು 2024-25ನೇ ಸಾಲಿನಲ್ಲಿ ಬಿಡುಗಡೆ ಮಾಡಲಾದ 160 ಕೋಟಿ ರು. ಸೇರಿ ಒಟ್ಟು 398 ಕೋಟಿ ರು. ಅಂದಾಜು ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.
ಆಶಾಕಿರಣ ಎಲ್ಲ ಜಿಲ್ಲೆಗಳಿಗೆ ವಿಸ್ತರಣೆ: ಆರೋಗ್ಯ ಇಲಾಖೆಯ ಉಚಿತ ಸಮಗ್ರ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕ ವಿತರಿಸುವ ‘ಆಶಾಕಿರಣ’ ಯೋಜನೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲು ಸಂಪುಟ ಸಮ್ಮತಿಸಿದೆ. ಆಶಾಕಿರಣ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 52.85 ಕೋಟಿ ರು. ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದಲ್ಲಿ ರೂ.100 ಕೋಟಿಗಳ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಒಪ್ಪಿಗೆ ದೊರಕಿದೆ ಎಂದು ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಅದೇ ರೀತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಯಡಿಯ ಜಿಲ್ಲಾ, ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅನುಸರಣೀಯ ಆಸ್ಪತ್ರೆ ನಿರ್ವಹಣಾ ವ್ಯವಸ್ಥೆ (ಎಬಿಡಿಎಂ-ಎಚ್‌ಎಂಎಸ್) ತಂತ್ರಾಂಶದ ಹಂತವಾರು ಅನುಷ್ಠಾನಕ್ಕಾಗಿ ತಾತ್ವಿಕ ಅನುಮೋದನೆ ನೀಡಲಾಗಿದೆ.
ಜೊತೆಗೆ ವಿವಿಧ ಸೇವಾ ಪೂರೈಕೆದಾರರೊಂದಿಗೆ ಪ್ರತಿ ವಹಿವಾಟಿನ ಪಾವತಿ ಆಧಾರದ ಮೇಲೆ ಮೊದಲನೇ ಹಂತದ ಅನುಷ್ಠಾನಕ್ಕೆ (ವಾರ್ಷಿಕ ಅಂದಾಜು ವೆಚ್ಚ 20.60 ಕೋಟಿಗಳು) ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ 24.22 ಕೋಟಿ ರು. ವೆಚ್ಚದಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ತೀವ್ರ ನಿಗಾ ಘಟಕ ನಿರ್ಮಾಣ ಕಾಮಗಾರಿ ಕೈಗೊಳ್ಳುವುದು, ಕೇಂದ್ರ ಸರ್ಕಾರದ ಸಿಟಿಆರ್‌ಎವಿ ಯೋಜನೆ 2025 ಅಡಿ ಅಪಘಾತ ಪೀಡಿತ ಪ್ರತಿ ಫಲಾನುಭವಿಗೆ 1.5 ಲಕ್ಷ ಸಹಾಯಧನ ನಿಡುವ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ 1 ಲಕ್ಷ ನೆರವು ಒದಗಿಸುವ ರಾಜ್ಯ ಅಪಘಾತ ಪೀಡಿತರ ಯೋಜನೆಗೆ ತಿದ್ದುಪಡಿ ತರಲು ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ಜೀವ ವಿಮಾದಾರರಿಗೆ ಸಾವಿರ ರು.ಗೆ 80 ರು. ಬೋನಸ್ ಘೋಷಿಸಲು ಸಂಪುಟ ಒಪ್ಪಿದೆ. ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯ ವಿಮಾದಾರರಿಗೆ 2020ರ ಏಪ್ರಿಲ್ 1ರಿಂದ 2022ರ ಮಾರ್ಚ್ 31ರ ದ್ವೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರು.ಗಳಿಗೆ ಪ್ರತಿ ವರ್ಷಕ್ಕೆ 80 ರು.ನಂತೆ ಲಾಭಾಂಶ ಘೋಷಿಸಲು ಮತ್ತು ಅವಧಿ ಪೂರ್ಣ, ಮರಣಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ 2022 ಏಪ್ರಿಲ್ 1ರಿಂದ 2024ರ ಮಾರ್ಚ್ 31ರ ಅವಧಿಯಲ್ಲಿ ಪ್ರತಿ ಸಾವಿರ ರು.ಗಳಿಗೆ ಪ್ರತಿ ವರ್ಷಕ್ಕೆ 80 ರು. ನಂತರ ಮಧ್ಯಂತರ ಲಾಭಾಂಶ ಘೋಷಿಸಲು ಕೂಡ ಸಂಪುಟ ನಿರ್ಧರಿಸಿದೆ.
ಮಾಗಡಿಯ ಸೋಲೂರು ಹೋಬಳಿ ಬೆಂಗ್ಳೂರು ಉತ್ತರ ಜಿಲ್ಲೆಗೆ ಸೇರ್ಪಡೆ: ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಹೋಬಳಿಯನ್ನು ಮಾಗಡಿ ತಾಲೂಕಿನಿಂದ ಬೇರ್ಪಡಿಸಿ ಬೆಂಗಳೂರು ಉತ್ತರ ಜಿಲ್ಲೆಯ ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಲು ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ 107 ಕೆರೆಗಳಿಗೆ ಬೇಡ್ತಿ ನದಿ ನೀರು ತುಂಬಿಸುವ 179.50 ಕೋಟಿ ರು. ಯೋಜನೆ, ವಿಜಯಪುರ ಜಿಲ್ಲೆಯ ಸಿಂಧಗಿ ಪುರಸಭೆ, ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಪುರಸಭೆ, ಬೀದರ್ ಜಿಲ್ಲೆಯ ಹುಮನಾಬಾದ್ ಪುರಸಭೆಗಳನ್ನು ನರಸಭೆಗಳಾಗಿ ಮೇಲ್ದರ್ಜೆಗೇರಿಸಲು ಸಂಪುಟ ಸಮ್ಮತಿಸಿದೆ.
