ಸಾರ್ವಜನಿಕ ಸ್ಥಳಗಳಲ್ಲಿ ಪಥ ಸಂಚಲನ, ಸಭೆ-ಸಮಾವೇಶಗಳಿಗೆ ನಿರ್ಬಂಧ ಹೇರಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್‌ ಪೀಠ ತಾತ್ಕಾಲಿಕ ತಡೆ ನೀಡಿದ್ದನ್ನು ರಾಜ್ಯ ಬಿಜೆಪಿ ನಾಯಕರು ಸ್ವಾಗತಿಸಿದೆ.

ಬೆಂಗಳೂರು (ಅ.29): ಸಾರ್ವಜನಿಕ ಸ್ಥಳಗಳಲ್ಲಿ ಪಥ ಸಂಚಲನ, ಸಭೆ-ಸಮಾವೇಶಗಳಿಗೆ ನಿರ್ಬಂಧ ಹೇರಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್‌ ಪೀಠ ತಾತ್ಕಾಲಿಕ ತಡೆ ನೀಡಿದ್ದನ್ನು ರಾಜ್ಯ ಬಿಜೆಪಿ ನಾಯಕರು ಸ್ವಾಗತಿಸಿದ್ದು, ‘ಈ ತೀರ್ಪು ಸಂವಿಧಾನವನ್ನು ಎತ್ತಿ ಹಿಡಿದಿದೆ. ಇದು ಕಾಂಗ್ರೆಸ್‌ಗೆ ಆದ ಕಪಾಳಮೋಕ್ಷ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಸರ್ಕಾರದ ಕುತಂತ್ರ, ಷಡ್ಯಂತ್ರಕ್ಕೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಇದನ್ನು ಸ್ವತಃ ಗೃಹ ಸಚಿವರೇ ಒಪ್ಪಿಕೊಂಡಿದ್ದಾರೆ. ಜನರು ಈ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಇವರ ಒಳ ಜಗಳದಿಂದ ರಾಜ್ಯದ ಖಜಾನೆಗೆ ಬೀಗ ಹಾಕಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಆಗುತ್ತಿಲ್ಲ. ಇವರ ಜಗಳದಿಂದ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಕಿಡಿಕಾರಿದರು.

ಕಪಾಳಮೋಕ್ಷ: ಛಲವಾದಿ: ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಈ ತೀರ್ಪು ಕಾಂಗ್ರೆಸ್ ನಾಯಕರ ಅವಿವೇಕದ ನಡೆಗೆ ಮಾಡಿದ ಕಪಾಳ ಮೋಕ್ಷ. ಹಗೆತನದ ರಾಜಕೀಯ ಮಾಡಿದ್ದೀರಿ. ಇದು ನ್ಯಾಯಾಲಯದಲ್ಲಿ ನಿಲ್ಲಲ್ಲ ಎಂದು ನಾವು ಮೊದಲೇ ಹೇಳಿದ್ದೇವೆ. ಈಗ ಅವರಿಗೆ ಉತ್ತರ ಸಿಕ್ಕಿದೆ. ಈ ದೇಶದಲ್ಲಿ ಕಾನೂನು ಒಂದೇ ಎಂದು ಹೇಳಿದ್ದೆವು. ಕಾಂಗ್ರೆಸ್ ಈಗ ಬುದ್ದಿ ಕಳೆದುಕೊಂಡಿದೆ. ಈ ತೀರ್ಪಿನಿಂದ ಕಾಂಗ್ರೆಸ್‌ ಕಪಾಳ ಮೋಕ್ಷವಾಗಿದೆ’ ಎಂದರು.

ಸಂವಿಧಾನದ ಮೌಲ್ಯಕ್ಕೆ ಸಿಕ್ಕ ಜಯ-ಜೋಶಿ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ‘ಆರ್‌ಎಸ್‌ಎಸ್‌ ಗುರಿಯಾಗಿಸಿಕೊಂಡು ರಾಜ್ಯ ಕಾಂಗ್ರೆಸ್‌ ಸರ್ಕಾರ ಮಾಡಿದ್ದ ಆದೇಶ ಕುರಿತು ಕೋರ್ಟ್‌ ರ್ಪು ಸಂವಿಧಾನದ ಮೌಲ್ಯಕ್ಕೆ ಸಿಕ್ಕ ಜಯವಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಪಾಠವನ್ನು ಸರ್ಕಾರಕ್ಕೆ ಹೇಳಿದೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಸಂವಿಧಾನದ ಮೂಲ ಆಶಯಗಳ ವಿರುದ್ಧವಾಗಿ ನಡೆಯುತ್ತಿದೆ ಎಂಬುದಕ್ಕೆ ಹೈಕೋರ್ಟ್‌ ಪೀಠ ನೀಡಿದ ಈ ಮಹತ್ವದ ತೀರ್ಪೇ ಸಾಕ್ಷಿ. ‎ಸಂವಿಧಾನ ವಿರೋಧಿ ಕ್ರಮಗಳನ್ನು ಅನುಸರಿಸುವ ಸರ್ಕಾರಕ್ಕೆ ನ್ಯಾಯಾಲಯದ ಈ ತೀರ್ಪು ಎಚ್ಚರಿಕೆಯ ಗಂಟೆ. ಈ ಸರ್ಕಾರ ಇನ್ನಾದರೂ ‎ಸಂವಿಧಾನದ ಮೂಲ ಆಶಯ ಗೌರವಿಸುವ ಕಾರ್ಯ ಪಾಲಿಸಲಿ’ ಎಂದು ಸಲಹೆ ನೀಡಿದರು.

ಇದು ನಮ್ಮ ಹಕ್ಕು ರಕ್ಷಿಸುವ ತೀರ್ಪು-ರವಿ

ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಮಾತನಾಡಿ, ನ್ಯಾಯಾಲಯದ ಮಧ್ಯಂತರ ತೀರ್ಪು ನಮ್ಮ ಹಕ್ಕನ್ನು ರಕ್ಷಿಸುವ ತೀರ್ಪು. ಇದು ಯಾರ ವಿರುದ್ಧದ ತೀರ್ಪು ಎನ್ನುವುದಿಲ್ಲ. ಒಂದು ಸಂಘಟನೆ ರಾಷ್ಟ್ರ ಘಾತುಕ ಆಗಿದ್ದಲ್ಲಿ ಪೊಲೀಸ್‌, ಸರ್ಕಾರ ಅದರ ಮೇಲೆ ನಿಯಂತ್ರಣ ಹಾಕಬೇಕು. ಆದರೆ, ರಾಷ್ಟ್ರಭಕ್ತ ಸಂಘಟನೆ ನಿಗೂಢವಾಗಿಲ್ಲ. ಶಾಖೆ ಮಾಡಿ ದಂಗೆ ಎಬ್ಬಿಸಿದ ಒಂದು ಉದಾಹರಣೆಯೂ ಇಲ್ಲ. ಆರ್‌ಎಸ್‌ಎಸ್‌ ವ್ಯಕ್ತಿ ನಿರ್ಮಾಣ ಮಾಡುತ್ತದೆ. ಶಾಖೆಗೆ ಆಡ್ಮಿಶನ್‌ ಇಲ್ಲ. ಅಪ್ಲಿಕೇಶನ್‌ ಇಲ್ಲ. ಯಾರು ಬೇಕಾದರೂ ಬರಬಹುದು. ಈ ತೀರ್ಪು ಸಂವಿಧಾನವನ್ನು ಎತ್ತಿ ಹಿಡಿದಿದೆ ಎಂದು ಹೇಳಿದರು.