ಧರ್ಮಸ್ಥಳ ಗ್ರಾಮ ಪ್ರಕರಣ ಕುರಿತು ಮುಸುಕುಧಾರಿ ವ್ಯಕ್ತಿ ಕಿಂದರಿ ಜೋಗಿಯಾಗಿ ಎಸ್‌ಐಟಿ ಇಲಿಯಂತಾಗಬಾರದು ಎಂದು ಬಿಜೆಪಿ ಸದಸ್ಯ ಎಸ್.ಸುರೇಶ್‌ಕುಮಾರ್ ತೀಕ್ಷ್ಣವಾಗಿ ಹೇಳಿದ್ದಾರೆ.
ವಿಧಾನಸಭೆ (ಆ.19): ಧರ್ಮಸ್ಥಳ ಗ್ರಾಮ ಪ್ರಕರಣ ಕುರಿತು ಮುಸುಕುಧಾರಿ ವ್ಯಕ್ತಿ ಕಿಂದರಿ ಜೋಗಿಯಾಗಿ ಎಸ್‌ಐಟಿ ಇಲಿಯಂತಾಗಬಾರದು ಎಂದು ಬಿಜೆಪಿ ಸದಸ್ಯ ಎಸ್.ಸುರೇಶ್‌ಕುಮಾರ್ ತೀಕ್ಷ್ಣವಾಗಿ ಹೇಳಿದ್ದಾರೆ. ಧರ್ಮಸ್ಥಳ ಗ್ರಾಮ ಪ್ರಕರಣ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರ ನೀಡಿದ ಬಳಿಕ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣ ಕುರಿತು ಇಂದು ನೀವು ಹೇಳಿದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು. ನಾವು ಕಳೆದ 15 ದಿನಗಳಿಂದ ಸುಮ್ಮನೆ ಇರಲಿಲ್ಲ. ಸಂದರ್ಭ ಬಂದಾಗ ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಎಸ್‌ಐಟಿ ಮಾಡಿದಾಗ ಸ್ವಾಗತಿಸಿದ್ದೇವೆ ಎಂದು ಹೇಳಿದರು.
ಸತ್ಯ ಹೊರಬರಬೇಕು ಎಂದು ಎಸ್ಐಟಿ ಮಾಡಿದ್ದೇವೆ ಎಂಬ ಮಾತನ್ನು ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಹೇಳಿದ್ದಾರೆ. ಆರಂಭದಲ್ಲಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರು ದಕ್ಷಿಣ ಕನ್ನಡ ಪೊಲೀಸರಿಗೆ ತನಿಖೆ ನಡೆಸುವ ಕ್ಷಮತೆ, ಸಾಮರ್ಥ್ಯವಿದೆ. ಎಸ್ಐಟಿ ಅಗತ್ಯವಿಲ್ಲ ಎಂದಿದ್ದರು. ಬಳಿಕ ಎಡಪಂಥೀಯ ಸಂಸ್ಥೆಗಳು, ಪ್ರತಿನಿಧಿಗಳ ಒತ್ತಡದಿಂದ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ ಎಂದೂ ಹೇಳಿದ್ದರು. ಇಲ್ಲಿ ಮುಸುಕುಧಾರಿ ಕಿಂದರಿ ಜೋಗಿಯಾಗಿ ಎಸ್‌ಐಟಿ ಇಲಿಗಳಾಗಬಾರದು. ಊಹಾಪೋಹಕ್ಕೆ ಇತಿಶ್ರೀ ಹಾಡಬೇಕು ಎಂದು ಒತ್ತಾಯಿಸಿದರು.
ನಾವು ಮಾಧ್ಯಮ ಟ್ರಯಲ್ ಕೇಳಿದ್ದೆವು. ಧರ್ಮಸ್ಥಳದ ವಿಚಾರದಲ್ಲಿ ಸೋಶಿಯಲ್ ಮೀಡಿಯಾ ಟ್ರಯಲ್ ನಡೆಯುತ್ತಿದೆ. ಅವಾಚ್ಯ ಪದಗಳ ಬಳಕೆ ನೋಡಿದರೆ ನೋವಾಗುತ್ತಿದೆ. ಮೊದಲು ಈ ಮಾಧ್ಯಮ ಟ್ರಯಲ್ ನಿಲ್ಲಿಸುವಂತೆ ಸರ್ಕಾರ ಹೇಳಬೇಕು. ಈ ಪ್ರಕರಣದಲ್ಲಿ ನಾವು ಧರ್ಮ, ರಾಜಕೀಯ ಬೆರೆಸುತ್ತಿಲ್ಲ. ಸತ್ಯ ಹೊರಬರಬೇಕು. ಇದರ ಹಿಂದೆ ಗುಪ್ತ ಅಜೆಂಡಾ ಇದೆ. ಮಸುಕುಧಾರಿ ಹೇಳಿದ ಕಡೆಯೆಲ್ಲ ಅಗೆದರೆ ಜನ ಏನು ಹೇಳುತ್ತಾರೆ? ಸರ್ಕಾರದ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಪ್ರಕರಣದಲ್ಲಿ ಮೊದಲು ತೀರ್ಪು ಬಂದಿದೆ. ಸಮಾಜದ ಸ್ವಾಥ್ಯದ ದೃಷ್ಟಿಯಿಂದ ಇದು ಒಳ್ಳೇಯದಲ್ಲ ಎಂದರು.
