ಬಿಜೆಪಿ ನಾಯಕ ಸುನೀಲ್ ಕುಮಾರ್, ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಯ ಪೂರ್ವ ಸಿದ್ಧತೆ ಇಲ್ಲದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮೀಕ್ಷೆಯು ಸಿದ್ದರಾಮಯ್ಯನವರ ರಾಜಕೀಯ ಲಾಭಕ್ಕಾಗಿ ಆಗಿದ್ದು, ಸಮಾಜವನ್ನು ವಿಭಜಿಸುವ ಹುನ್ನಾರವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಸುನೀಲ್ ಕುಮಾರ್ ಅವರು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುನೀಲ್ ಕುಮಾರ್ ಅವರು, ನಾವು ಯಾವತ್ತೂ ಜಾತಿ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದೇ ಇಲ್ಲ. ನಮ್ಮ ಪಕ್ಷದ ನಿಲುವು ಈಗಾಗಲೇ ಸ್ಪಷ್ಟವಾಗಿದೆ. ರಾಜ್ಯಾಧ್ಯಕ್ಷರೇ ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಯಲು ಕರೆ ನೀಡಿದ್ದಾರೆ. ತೇಜಸ್ವಿ ಸೂರ್ಯ ಅವರು ನೀಡಿದ ಹೇಳಿಕೆ ಸಂಪೂರ್ಣವಾಗಿ ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷದ ಅಧಿಕೃತ ನಿಲುವು ಅಲ್ಲ ಎಂದು ಹೇಳಿದರು.
ಮುಂದುವರಿದು, ನಮ್ಮ ವಿರೋಧ ಸಮೀಕ್ಷೆಯ ಪೂರ್ವ ಸಿದ್ಧತೆ ಇಲ್ಲದಿರುವುದಕ್ಕೆ ಮಾತ್ರ. ಸರ್ಕಾರ ಯಾವುದೇ ತಯಾರಿ ಮಾಡದೆ ತರಾತುರಿಯಲ್ಲಿ ಸಮೀಕ್ಷೆ ನಡೆಸುತ್ತಿದೆ. ಇದರಿಂದ ರಾಜ್ಯಕ್ಕೆ ಯಾವುದೇ ಲಾಭವಿಲ್ಲ. ಬದಲಾಗಿ ಸಿದ್ದರಾಮಯ್ಯ ಅವರ ಅಧಿಕಾರ ವಿಸ್ತರಣೆಗೆ ಮಾತ್ರ ಇದು ಅನುಕೂಲಕರವಾಗಲಿದೆ. ನೂರಾರು ಸಂಘ–ಸಂಸ್ಥೆಗಳು ಕೂಡ ಪೂರ್ವ ಸಿದ್ಧತೆ ಇಲ್ಲದ ಕಾರಣ ಈ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿವೆ” ಎಂದು ಟೀಕಿಸಿದರು.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ
“ಸಿದ್ದರಾಮಯ್ಯ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಯಾವತ್ತೂ ಆತ್ಮವಂಚನೆ ಮಾಡುತ್ತಿಲ್ಲ. ಹಿಂದುಳಿದ ವರ್ಗಗಳ ಆಯೋಗವನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಇದು ಹಿಂದಿನ ದಿನಗಳಲ್ಲಿ ಕಾಂತರಾಜ್ ವದರಿ ಮತ್ತು ಜಯಪ್ರಕಾಶ ಹೆಗಡೆ ವರದಿಯನ್ನು ಹೇಗೆ ಮೂಲೆಗುಂಪು ಮಾಡಲಾಯಿತೋ, ಅದೇ ರೀತಿಯಲ್ಲಿ ಈ ವರದಿಯನ್ನೂ ನಿರ್ಲಕ್ಷಿಸಲು ಯತ್ನಿಸುತ್ತಿದ್ದಾರೆ” ಎಂದು ಸುನೀಲ್ ಕುಮಾರ್ ಆರೋಪಿಸಿದರು.
ಅವರು ತೀವ್ರ ವಾಗ್ದಾಳಿ ನಡೆಸುತ್ತಾ, “ಸಿದ್ದರಾಮಯ್ಯ ಸಮ ಸಮಾಜ ನಿರ್ಮಾಣದ ಗುರಿ ಹೊಂದಿಲ್ಲ. ಅವರ ಗುರಿ ಸಮಾಜವನ್ನು ವಿಭಜಿಸುವುದು. ಸಮ ಸಮಾಜದ ಭಾಷಣ ಮಾತ್ರ ಮಾಡುತ್ತಿದ್ದಾರೆ, ಆದರೆ ನಿಜವಾದ ಕ್ರಿಯಾಶೀಲತೆ ಶೂನ್ಯ. ನಾಳೆ ಈ ಸಮೀಕ್ಷೆಯ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗುವುದಿಲ್ಲ ಎಂಬ ಖಾತರಿ ಏನು? ಜನರ ಡೇಟಾ ಭದ್ರತೆಯ ಕುರಿತ ಭರವಸೆ ಇಲ್ಲದ ಕಾರಣಕ್ಕೂ ನಾವು ಈ ತರಾತುರಿಯ ಸಮೀಕ್ಷೆಗೆ ವಿರೋಧಿಸುತ್ತಿದ್ದೇವೆ” ಎಂದರು.
ಶಿಕ್ಷಕರ ಸಂಕಷ್ಟ ಮತ್ತು ಸರ್ಕಾರದ ಬಾಧ್ಯತೆ
ಸಮೀಕ್ಷೆ ಕಾರ್ಯದಲ್ಲಿ ಶಿಕ್ಷಕರನ್ನು ಬಳಸುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಕರಿಗೆ ಎಷ್ಟೋ ಸಂಕಷ್ಟ ಇದೆ. ಅವರನ್ನು ಇಂತಹ ಸಮೀಕ್ಷೆ ಕೆಲಸಕ್ಕೆ ಕಟ್ಟಿ ಹಾಕುವುದರ ಬದಲು, ಸಿಎಂ ಸಿದ್ದರಾಮಯ್ಯ ಅವರನ್ನುಲೇ ಸಸ್ಪೆಂಡ್ ಮಾಡಬೇಕು” ಎಂದು ಕಟುವಾಗಿ ಹೇಳಿದರು.
ಆರ್ಥಿಕ ಮೂಲಗಳ ಬಗ್ಗೆ ಪ್ರಶ್ನೆ
ಸಮೀಕ್ಷೆಗೆ ಬಳಸಲಾಗುತ್ತಿರುವ ಆರ್ಥಿಕ ಸಂಪನ್ಮೂಲಗಳ ಕುರಿತೂ ಅವರು ಗಂಭೀರ ಪ್ರಶ್ನೆ ಎತ್ತಿದರು. “ಈ ಸಮೀಕ್ಷೆಗೆ ಯಾವ ಮೂಲಗಳಿಂದ ಹಣವನ್ನು ಬಳಸಲಾಗುತ್ತಿದೆ? ನಾಳೆ ನಾವು ಸ್ಪಷ್ಟವಾಗಿ ಹೇಳುತ್ತೇವೆ. ವಿಶೇಷವಾಗಿ SC/ST ಸಮುದಾಯಗಳಿಗಾಗಿ ಮೀಸಲಾದ ಹಣವನ್ನು ಎಷ್ಟು ಪ್ರಮಾಣದಲ್ಲಿ ಬಳಸಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸುತ್ತೇವೆ” ಎಂದು ಘೋಷಿಸಿದರು.
ಸಿಎಂ ಸ್ಥಾನ ಮತ್ತು ಜಮೀರ್ ಅಹ್ಮದ್ ಹೇಳಿಕೆಗೆ ಟೀಕೆ
ಸುನೀಲ್ ಕುಮಾರ್ ಅವರು ಸಚಿವ ಜಮೀರ್ ಅಹ್ಮದ್ ಅವರ ಇತ್ತೀಚಿನ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದರು. “ರಾಜ್ಯದ ಮುಖ್ಯಮಂತ್ರಿ ಯಾರು? ಸಿದ್ದರಾಮಯ್ಯರೋ ಅಥವಾ ಜಮೀರ್ ಅಹ್ಮದ್ ಅವರೋ? ಸಾರ್ವಜನಿಕ ಸಭೆಯಲ್ಲಿ ಜಮೀರ್ ಅವರು, ‘ಮುಂದಿನ ಕ್ಯಾಬಿನೆಟ್‌ನಲ್ಲಿ ಯಾರಿಗೆ ಸ್ಥಾನ ಸಿಗುತ್ತದೆ, ಯಾರಿಗೆ ಸಿಗುವುದಿಲ್ಲ’ ಎಂದು ಘೋಷಿಸುವುದೇನು ಅರ್ಥ? ಅಂತಿಮ ನಿರ್ಧಾರವನ್ನು ಹೇಳಬೇಕಾದವರು ಮುಖ್ಯಮಂತ್ರಿ. ಜಮೀರ್ ಅವರು ಅಧಿಕೃತವಾಗಿ ಹೇಳಿಕೆ ನೀಡಿದರೆ, ರಾಜ್ಯದ ಮುಖ್ಯಮಂತ್ರಿಯ ಸ್ಥಾನಮಾನ ಪ್ರಶ್ನಾರ್ಥಕವಾಗುತ್ತದೆ. ಈ ಮೂಲಕ ಸರ್ಕಾರದ ಒಳಗಿನ ಅಸಮಾಧಾನ ಸ್ಪಷ್ಟವಾಗುತ್ತಿದೆ” ಎಂದರು.
ಕ್ರಾಂತಿ ಮತ್ತು ರಾಜಕೀಯ ಭವಿಷ್ಯ
“ಅಕ್ಟೋಬರ್ ಕ್ರಾಂತಿ, ನವೆಂಬರ್ ಕ್ರಾಂತಿ ಎಂಬ ಮಾತುಗಳನ್ನು ಆಡಿದವರು ಈಗ ಮನೆ ಸೇರುತ್ತಿದ್ದಾರೆ. ಜಮೀರ್ ಅವರು ತಮ್ಮ ರಾಜಕೀಯ ಭವಿಷ್ಯವನ್ನು ಕಾಪಾಡಿಕೊಳ್ಳಲು ಹೇಳಿಕೆ ಕೊಟ್ಟರೋ, ಅಥವಾ ಸಿದ್ದರಾಮಯ್ಯ ಅವರಿಗೆ ಮನೆ ಸೇರುವ ರಾಜಕೀಯ ಅಂಗಳ ಒದಗಿಸಲು ಹೇಳಿಕೆ ಕೊಟ್ಟರೋ ಗೊತ್ತಿಲ್ಲ. ಆದರೆ ಇಡೀ ಕ್ರಾಂತಿ ಅವರ ಪಕ್ಷದೊಳಗೆ ಸುತ್ತಾಡುತ್ತಿದ್ದು, ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾದಿಯೇ ಕಾಣಿಸುತ್ತಿಲ್ಲ” ಎಂದು ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಸುನೀಲ್ ಕುಮಾರ್ ಅವರು ಜಾತಿ ಸಮೀಕ್ಷೆಯ ತುರ್ತು, ಪೂರ್ವಸಿದ್ಧತೆ ಇಲ್ಲದ ನಿರ್ವಹಣೆ, ಜನರ ಡೇಟಾ ಭದ್ರತೆ, ಶಿಕ್ಷಕರ ಸಂಕಷ್ಟ, ಆರ್ಥಿಕ ಸಂಪನ್ಮೂಲಗಳ ದುರುಪಯೋಗ, ಹಾಗೂ ಸರ್ಕಾರದ ಒಳಜಗಳ ಸೇರಿದಂತೆ ಅನೇಕ ವಿಷಯಗಳನ್ನು ಎತ್ತಿಹಿಡಿದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಸರ್ಕಾರವು ಸಮಾಜವನ್ನು ಒಡೆಯುವ ಪ್ರಯತ್ನದಲ್ಲಿದೆ, ಜನಪರ ನೀತಿಗಳ ಕಡೆ ಸಂಪೂರ್ಣ ನಿರ್ಲಕ್ಷ್ಯ ತೋರಿಸಿದೆ ಎಂಬ ಆರೋಪವನ್ನು ಅವರು ಪುನರುಚ್ಚರಿಸಿದರು.
