ಪ್ರಧಾನಿ ಮೋದಿ ಮೆಟ್ರೋ ಉದ್ಘಾಟನೆಗೆ ಆರ್. ಅಶೋಕ್‌ರನ್ನು ಆಹ್ವಾನಿಸದೇ ಇದ್ದ ವಿಚಾರ ವಿವಾದಕ್ಕೆ ಕಾರಣವಾಯಿತು. ಕೊನೆ ಗಳಿಗೆಯಲ್ಲಿ ಪ್ರಲ್ಹಾದ್ ಜೋಶಿ ಮಧ್ಯಸ್ಥಿಕೆಯಿಂದ ಅವರ ಹೆಸರು ಸೇರ್ಪಡೆಯಾಯಿತು. ಈ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ನಡೆಯಿತು.
ಬೆಂಗಳೂರು (ಆ.10): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆ ಸಮಾರಂಭಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನು ಆಹ್ವಾನಿಸದ ವಿಚಾರವು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಧ್ಯಸ್ಥಿಕೆಯಿಂದ ಆ.ಅಶೋಕ್ ಹೆಸರನ್ನು ಕೊನೆಯ ಕ್ಷಣದಲ್ಲಿ ಸೇರಿಸಲಾಗಿದೆ.
ಪ್ರಲ್ಹಾದ್ ಜೋಶಿ ಮತ್ತು ವಿಜಯೇಂದ್ರ ಸ್ಪಷ್ಟನೆ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಧಾನ ಮಂತ್ರಿ ಕಾರ್ಯಾಲಯವನ್ನು ಸಂಪರ್ಕಿಸಿ ಅಶೋಕ್ ಅವರ ಹೆಸರನ್ನು ಸೇರಿಸಲು ಮನವಿ ಮಾಡಿದ್ದರು ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, 'ವೇದಿಕೆಯ ಮೇಲೆ ಯಾರು ಇರಬೇಕು ಎಂಬುದನ್ನು ಪ್ರಧಾನಿ ಕಚೇರಿಯೇ ನಿರ್ಧರಿಸುತ್ತದೆ. ಅಶೋಕ್ ಅವರ ಹೆಸರನ್ನು ಮೊದಲಿಗೆ ಕೈಬಿಡಲಾಗಿತ್ತು. ಆದರೆ ಈಗ ಅದನ್ನು ಸೇರಿಸಲಾಗಿದೆ. ನಾನು ಕೂಡ ಈ ಬಗ್ಗೆ ಮೋದಿ ಕಚೇರಿಯನ್ನು ಸಂಪರ್ಕಿಸಿದ್ದೆ' ಎಂದು ಸ್ಪಷ್ಟಪಡಿಸಿದರು. ಜೊತೆಗೆ, ಶಿಕಾರಿಪುರ ಶಾಸಕನಿಗೆ ವೇದಿಕೆಯಲ್ಲಿ ಅವಕಾಶ ನೀಡುವ ವಿಚಾರವನ್ನೂ ಪ್ರಧಾನಿ ಕಚೇರಿಯೇ ನಿರ್ಧರಿಸುತ್ತದೆ ಎಂದು ವಿಜಯೇಂದ್ರ ಹೇಳಿದರು.
ಕಾಂಗ್ರೆಸ್ ಆರೋಪಕ್ಕೆ ತಿರುಗೇಟು
ಕಾಂಗ್ರೆಸ್ ನಾಯಕರ ಆರೋಪಗಳಿಗೆ ಬಿಜೆಪಿ ನಾಯಕರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ವೈ. ವಿಜಯೇಂದ್ರ, 'ಕಾಂಗ್ರೆಸ್ ನಾಯಕರು ಮೊದಲು ಬೆಂಗಳೂರಿನಲ್ಲಿ ಓಡಾಡಿ ರಸ್ತೆಗಳ ಪರಿಸ್ಥಿತಿ ಏನಾಗಿದೆ ಎಂದು ನೋಡಲಿ. ಮೆಟ್ರೋ ಪ್ರಧಾನಿ ಮೋದಿ ಅವರ ಕನಸಿನ ಕೂಸು. ಈ ಮೆಟ್ರೋ ಯೋಜನೆ ಜಗತ್ತಿನ ಭೂಪಟದಲ್ಲಿ ಬೆಂಗಳೂರನ್ನು ಗುರುತಿಸುವಂತೆ ಮಾಡುತ್ತದೆ' ಎಂದರು. ಅಲ್ಲದೆ, ಬಿಜೆಪಿ ಸರ್ಕಾರವಿದ್ದಾಗ ಮೆಟ್ರೋ ಕೆಲಸಗಳು ವೇಗವಾಗಿ ನಡೆಯುತ್ತಿತ್ತು, ಆದರೆ ಈಗ ಅದರ ವೇಗ ಕಡಿಮೆಯಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಶಾಸಕ ಅಶ್ವತ್ಥನಾರಾಯಣ್ ವಾಗ್ದಾಳಿ
ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಅಶ್ವತ್ಥನಾರಾಯಣ್, 'ಬಿಎಂಆರ್‌ಸಿಎಲ್ ನಿರ್ವಹಣೆ ಬೇಕು ನಿಮಗೆ, ಆದರೆ ಅದರ ಜವಾಬ್ದಾರಿ ಬೇಡ. ಬೆಂಗಳೂರಿನಲ್ಲಿ ಕಾಂಗ್ರೆಸ್‌ಗೆ ನೆಲೆಯಿಲ್ಲ. ರಾಜ್ಯದಲ್ಲಿ ಅಷ್ಟು ಸೀಟ್ ಗೆದ್ದರೂ, ಬೆಂಗಳೂರಿನಲ್ಲಿ ಕಾಂಗ್ರೆಸ್‌ಗಿಂತ 5% ಹೆಚ್ಚು ವೋಟು ಬಿಜೆಪಿಗೆ ಬಂದಿದೆ' ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು. ಭೂಸ್ವಾಧೀನದಿಂದಾಗಿ ಯೋಜನೆಗಳು ವಿಳಂಬವಾಗಿದೆ ಎಂದು ಆರೋಪಿಸಿದರು. ಜೊತೆಗೆ, 'ಮೆಟ್ರೋ ಯೋಜನೆಗೆ ಕೇಂದ್ರ ಮತ್ತು ರಾಜ್ಯದ ಪಾಲು ಎಷ್ಟು ಎಂಬ ಚರ್ಚೆ ಅವಶ್ಯಕವಿಲ್ಲ. 5000 ಸಾವಿರ ಬಸ್‌ಗಳನ್ನು ಕೊಟ್ಟಿದ್ದು ಕೇಂದ್ರ ಸರ್ಕಾರ. ರಾಜ್ಯ ಸರ್ಕಾರ ಯಾವುದಕ್ಕೂ ಒಂದು ಪೈಸೆ ಹಾಕಿಲ್ಲ, ಎಲ್ಲ ಬೆಂಗಳೂರಿಗರ ದುಡ್ಡು' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೆಟ್ರೋ ಜಟಾಪಟಿ ಮುಂದುವರಿಕೆ
ಸದ್ಯಕ್ಕೆ, ಆರ್. ಅಶೋಕ್ ಅವರ ಹೆಸರನ್ನು ಸೇರಿಸಲಾಗಿದೆ ಎಂಬ ಮಾಹಿತಿಯು ವಿವಾದವನ್ನು ತಣ್ಣಗಾಗಿಸಬಹುದು. ಆದರೆ ಮೆಟ್ರೋ ಯೋಜನೆಗಳ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಜಟಾಪಟಿ ಮುಂದುವರಿಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಯಾವ ಯಾವ ನಾಯಕರು ಇರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
