ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ 2023-24 ಮತ್ತು 2024-25ರಲ್ಲಿ ವಿವಿಧ ಕಾಮಗಾರಿಗಳಿಗೆ 1000ಕೋಟಿ ರು. ಹಂಚಿಕೆ ಮಾಡಲಾಗಿದ್ದು, ಶೇ. 63ರಷ್ಟು ವೆಚ್ಚ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಬೀದರ್‌ (ಅ.16): ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ 2023-24 ಮತ್ತು 2024-25ರಲ್ಲಿ ವಿವಿಧ ಕಾಮಗಾರಿಗಳಿಗೆ 1000ಕೋಟಿ ರು. ಹಂಚಿಕೆ ಮಾಡಲಾಗಿದ್ದು, ಶೇ. 63ರಷ್ಟು ವೆಚ್ಚ ಮಾಡಲಾಗಿದೆ, ಈ ವರ್ಷಕ್ಕೆ 500 ಕೋಟಿ ರು. ಮೊತ್ತದ ಕ್ರಿಯಾ ಯೋಜನೆಯನ್ನು ಇಂದು ಅನುಮೋದಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಕೆಕೆಆರ್‌ಡಿಬಿ ಪ್ರಗತಿ ಪರಿಶೀಲನಾ ಸಭೆ. ಅಧ್ಯಕ್ಷತೆ ವಹಿಸಿ ಮಾತನಾಡಿ, 2023-24ರಲ್ಲಿ ವಿವಿಧ ಕಾಮಗಾರಿಗಳಿಗೆ 452 ಕೋಟಿ ರು. ಹಂಚಿಕೆಯಾಗಿದ್ದರೆ, 2024-25ರ ಸಾಲಿನಲ್ಲಿ 545 ಕೋಟಿ ರು. ಹಂಚಿಕೆಯಾಗಿದೆ.

ಈ ವರ್ಷ ಅಂದರೆ 2025-26ರ ಸಾಲಿನಲ್ಲಿ ಮತ್ತೆ 500 ಕೋಟಿ ರು. ಬರಲಿದ್ದು, ಒಟ್ಟಾರೆ ನಮ್ಮ ಸರ್ಕಾರ ಬಂದ ಬಳಿಕ ಬೀದರ್‌ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಿಂದ 1500 ಕೋಟಿ ರು. ಹಂಚಿಕೆಯಾಗಿದೆ ಎಂದು ತಿಳಿಸಿದರು. 2013-14ರಲ್ಲಿ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಯಿತು. ಅಲ್ಲಿಂದ 2024-25ರವರೆಗೆ ಒಟ್ಟು 5086 ಕಾಮಗಾರಿ ಮಂಜೂ ರಾಗಿದ್ದು, ಈ ಪೈಕಿ 4254 ಕಾಮಗಾರಿ ಪೂರ್ಣಗೊಂಡಿದೆ. 661 ಕಾಮಗಾರಿಗಳು ಪ್ರಗತಿಯಲ್ಲಿದ್ದು, 141 ಕಾಮಗಾರಿ ಆರಂಭವಾಗಬೇಕಿದೆ. ಈ ಎಲ್ಲ ಕಾಮಗಾರಿಗಳಿಗೆ 2638 ಕೋಟಿ ರು. ಹಂಚಿಕೆಯಾಗಿದ್ದು, ಈವರೆಗೆ 1971 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದ ಅವರು, ಈವರೆಗೆ ಶೇ.74ರಷ್ಟು ವೆಚ್ಚ ಮಾಡಲಾಗಿದೆ ಎಂದರು.

ಡಿಸೆಂಬರ್ ಒಳಗಾಗಿ ಕಾಮಗಾರಿ ತ್ವರಿತಗೊಳಿಸಿ ಗುಣಮಟ್ಟದ ಕಾಮಗಾರಿ ನಡೆಸಲು ಸೂಚಿಸಿದ ಈಶ್ವರ ಖಂಡ್ರೆ, ಯಾವುದೇ ಕಾಮಗಾರಿಯಲ್ಲಿ ರಾಜೀ ಮಾಡಿಕೊಳ್ಳದೆ. ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಮಾಡಿದ ಕೆಲಸ ಶಾಶ್ವತವಾಗಿರಬೇಕು. ಒಂದೊಮ್ಮೆ ಕಳಪೆ ಕಾಮಗಾರಿ ನಡೆದರೆ ಸಂಬಂಧಿತ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣವ್ಯವಾಗಿ ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಗಿರೀಶ ಬದೋಲೆ, ಎಸ್‌ಪಿ ಪ್ರದೀಪ ಗುಂಟಿ, ಡಿಎಫ್‌ಒ ಆಶಿಷ ರೆಡ್ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಮತ್ತು ಎಂಜಿನಿಯರುಗಳು ಪಾಲ್ಗೊಂಡಿದ್ದರು.

ಅರಣ್ಯ ಒತ್ತುವರಿದಾರರ ಹಿತರಕ್ಷಣೆ

2005ರ ಪೂರ್ವದ ಮೂರು ಎಕರೆ ಒಳಗಿನ ಅರಣ್ಯ ಭೂಮಿಯಲ್ಲಿನ ಒತ್ತುವರಿದಾರರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಆದರೆ ಮೂರು ಎಕರೆಗಿಂತ ಹೆಚ್ಚಿನ ಇತ್ತೀಚಿನ ಒತ್ತುವರಿಗಳಿಗೆ ರಕ್ಷಣೆ ನೀಡಲಾಗದು ಮತ್ತು ಹೊಸ ಒತ್ತುವರಿಗೆ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ರಾಜ್ಯದ ಜನತೆಗೆ ಖಡಕ್ ಸಂದೇಶ ನೀಡಿದ್ದಾರೆ. ಉತ್ತರ ಕನ್ನಡ ಮತ್ತು ಮಲೆನಾಡಿನ ಕೆಲವು ಪ್ರದೇಶದಲ್ಲಿ ಶೇ. 80ರಷ್ಟು ಅರಣ್ಯ ಭೂಮಿ ಇರುವುದರಿಂದ ಆಭಾಗದ ನೆರೆಸಂತ್ರಸ್ತರ ಪುನರ್ವಸತಿ, ವಸತಿ ಮತ್ತು ಜೀವನೋಪಾಯಕ್ಕೆ ಅಲ್ಲಿನ ಬಡಜನರು ಅರಣ್ಯ ಭೂಮಿಯನ್ನು ಅವಲಂಬಿಸುವುದು ಅನಿವಾರ್ಯವಾಗಿತ್ತು.

ಇನ್ನೊಂದೆಡೆ ವಿವಿಧ ಯೋಜನೆಗಳಿಂದ ನಿರಾಶ್ರಿತರಾದವರ ಸಮಸ್ಯೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ಅರಣ್ಯ ಭೂಮಿಯ ಅವಶ್ಯಕತೆ ಇರುವದು ಸರ್ಕಾರದ ಗಮನದಲ್ಲಿದೆ. ಆದ್ದರಿಂದ 2005ರ ಪೂರ್ವದಿಂದ ಕೃಷಿ ಮತ್ತು ತೋಟಗಾರಿಕೆಯೊಂದಿಗೆ ಅರಣ್ಯ ಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡವರು ಆತಂಕ ಪಡುವ ಅಗತ್ಯವಿಲ್ಲ. ಸಣ್ಣ ಹಿಡುವಳಿದಾರರ ಹಿತರಕ್ಷಣೆ ಮಾಡಲಾಗುವುದು ಎಂದು ಅರಣ್ಯ ಪರಿಸರ ಈಶ್ವರ ಖಂಡ್ರೆ ತಿಳಿಸಿದ್ದಾರೆ. ತಮ್ಮನ್ನು ಭೇಟಿಯಾದ ಉತ್ತರ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಾಯಿ ಗಾಂವ್ಕರ, ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ನೇತೃತ್ವದ ಜಂಟಿ ನಿಯೋಗದ ಅಹವಾಲು ಆಲಿಸಿದ ಬಳಿಕ ಅರಣ್ಯಭೂಮಿ ಸಕ್ರಮದ ಕುರಿತು ಸರ್ಕಾರದ ನಿಲುವನ್ನು ಸಚಿವರು ಸ್ಪಷ್ಟಪಡಿಸಿದರು.