ಬಸವಣ್ಣನವರ ತತ್ವಗಳು ಜಗತ್ತಿನ ಇಂದಿನ ಎಲ್ಲಾ ಸಮಸ್ಯೆಗಳಿಗೆ ದಿವ್ಯ ಔಷಧಿಯಾಗಿದೆ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಪಡೆಯಲು ನಾವೆಲ್ಲರು ಒಗ್ಗಟಾಗಿ ಹೋರಾಟ ಮಾಡಿದಾಗ ಮಾತ್ರ ಸಾಧ್ಯ ಎಂದು ಸಚಿವ ಈಶ್ವರ್ ಖಂಡ್ರೆ ಪ್ರತಿಪಾದಿಸಿದರು.

ಬಸವಕಲ್ಯಾಣ (ಅ.12): ಬಸವಣ್ಣನವರ ತತ್ವಗಳು ಜಗತ್ತಿನ ಇಂದಿನ ಎಲ್ಲಾ ಸಮಸ್ಯೆಗಳಿಗೆ ದಿವ್ಯ ಔಷಧಿಯಾಗಿದೆ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಪಡೆಯಲು ನಾವೆಲ್ಲರು ಒಗ್ಗಟಾಗಿ ಹೋರಾಟ ಮಾಡಿದಾಗ ಮಾತ್ರ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಪ್ರತಿಪಾದಿಸಿದರು. ಅವರು ಬಸವ ಧರ್ಮಪೀಠ, ಅಲ್ಲಮಪ್ರಭು ಶೂನ್ಯಪೀಠ ಹಾಗೂ ಬಸವ ಮಹಾಮನೆ, ಬಸವಕಲ್ಯಾಣ ಇವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ 24ನೇ ಕಲ್ಯಾಣ ಪರ್ವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವತೆಯ ಪಥವನ್ನು ತೋರಿಸಿದವರು ವಿಶ್ವಗುರು ಬಸವಣ್ಣನವರು. ಕೆಲಸವೇ ಪೂಜೆ, ಸೇವೆಯೇ ಸಾಧನೆ ಎಂಬ ಅವರ ಸಂದೇಶ ಇಂದಿಗೂ ಪ್ರಸ್ತುತ ಎಂದು ಸಚಿವ ಈಶ್ವರ ಖಂಡ್ರೆ ನುಡಿದರು. ಅನುಭವ ಮಂಟಪಕ್ಕೆ ನಮ್ಮ ಸರ್ಕಾರ ಬಂದ ಮೇಲೆ ಇಲ್ಲಿವರೆಗೆ 200 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಈಗ ಮತ್ತೆ 50ಕೋಟಿ ರು. ಬಿಡುಗಡೆ ಮಾಡಿದ್ದು, ಕಾಮಗಾರಿ ಭರದಿಂದ ಸಾಗಿದೆ. 2026ರ ಒಳಗಾಗಿ ಪೂರ್ತಿಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಇದಕ್ಕೆ ಅನುದಾನದ ಕೊರತೆ ಇಲ್ಲ ಎಂದರು.

ಇದೇ ಸಂದರ್ಭದಲ್ಲಿ ಬಸವ ಮಹಾಮನೆಯಲ್ಲಿರುವ ಅನುಭವ ಮಂಟಪ ಕ್ರಾಸ್‌ನಿಂದ ಬಸವೇಶ್ವರ ಪುತ್ಥಳಿವರೆಗೆ ನಿರ್ಮಿಸಲಾದ ಆರ್.ಸಿ.ಸಿ ಸೇತುವೆಯನ್ನು ಸಚಿವರು ಲೋಕಾರ್ಪಣೆಗೊಳಿಸಿದರು. ಕನೇರಿ ಮಠಾಧೀಶರ ಹೇಳಿಕೆಗೆ ಪಟ್ಟದೇವರು ಖಂಡನೆ: ಈ ಮೊದಲು ಸಾನಿದ್ಯ ವಹಿಸಿ ಮಾತನಾಡಿದ ಗುರು ಬಸವ ಪಟ್ಟದೇವರು ಕನೇರಿ ಮಠದ ಅದ್ರಿಷ್ಯಾ ಕಾಡಸಿದ್ದೇಶ್ವರ ಸ್ವಾಮೀಜಿಯವರು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಯಾತ್ರೆಗೆ ಟೀಕಿಸಿರುವುದು ಖಂಡನಾರ್ಹವಾಗಿದೆ, ಒಬ್ಬ ಮಠಾಧಿಪತಿಗಳ ಬಾಯಿಯಿಂದ ಕೆಟ್ಟ ಪದ ಬಳಸಿದ್ದು ಶೋಭೆ ತರುವುದಿಲ್ಲ ಎಂದರು.

ಸಾಧಕರಿಗೆ ಸನ್ಮಾನ

ಇದೇ ಸಂಧರ್ಭದಲ್ಲಿ ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ, ಮಲ್ಲಿಕಾರ್ಜುನ ಗುಂಗೆ, ಚಂದ್ರಶೇಖರ ಸೋಮಶೆಟ್ಟಿ ಚಿತ್ರ ಕಲಾವಿದರಿಗೆ ಶರಣ ಕಲಾ ರತ್ನ ಪ್ರಶಸ್ತಿ, ಸುಶೀಲಾಬಾಯಿ ಧನ್ನೂರ ಅವರಿಗೆ ಶರಣ ದಾಸೋಹ ರತ್ನ ಪ್ರಶಸ್ತಿ, ಪುಂಡಲಿಕರಾವ ಪಾಟೀಲ ಗೌಡಗಾಂವ ಶರಣ ಸೇವಾ ರತ್ನ ಪ್ರಶಸ್ತಿ, ಯಶವಂತರಾವ ಪಾಟೀಲ ತೆಲಂಗಾಣರವರಿಗೆ ಕಾಯಕ ರತ್ನ ಪ್ರಶಸ್ತಿ, ಗುರಲಿಂಗಪ್ಪ ಮೇಲದೊಡ್ಡಿ ಅವರಿಗೆ ಕೃಷಿ ರತ್ನ ಪ್ರಶಸ್ತಿ, ಹಾವಗಿರಾವ ವಟಗೆ ಮುಧೋಳರವರಿಗೆ ಕೃಷಿ ರತ್ನ ಪ್ರಶಸ್ತಿ, ಬಸವರಾಜ ಬುಳ್ಳಾ, ಶಿವರಾಜ ನರಶೆಟ್ಟಿ ಅವರಿಗೆ ಇದೇ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಮಹಾಜಗದ್ಗುರು ಡಾ. ಮಾತೆ ಗಂಗಾದೇವಿಯವರು ಸಾನಿಧ್ಯ, ಜಗದ್ಗುರು ಸಿದ್ದರಾಮೇಶ್ವರ ಸ್ವಾಮೀಜಿಗಳು ಸೇರಿದಂತೆ, ಶಾಸಕ ಶರಣು ಸಲಗರ, ಮಾಜಿ ಎಂಎಲ್‌ಸಿ ವಿಜಯಸಿಂಗ್‌ ಸೇರಿದಂತೆ ಅನೇಕ ಬಸವ ಭಕ್ತರು ಉಪಸ್ಥಿತರಿದ್ದರು.