'ಕಾಂತಾರ' ಚಿತ್ರದ ಯಶಸ್ಸಿನ ನಡುವೆ, ಕೆಲ ಪ್ರೇಕ್ಷಕರು ದೈವದ ವೇಷ ಮತ್ತು ಆವಾಹನೆ ಅನುಕರಿಸುತ್ತಿರುವುದಕ್ಕೆ ಚಿತ್ರತಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ತುಳುನಾಡಿನ ದೈವಾರಾಧನೆಯ ನಂಬಿಕೆಗೆ ಮಾಡುವ ಅಪಚಾರವಾಗಿದ್ದು, ಇಂತಹ ವರ್ತನೆಗಳನ್ನು ನಿಲ್ಲಿಸದಿದ್ದರೆ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು (ಅ.07): ದೇಶಾದ್ಯಂತ ಭರ್ಜರಿ ಯಶಸ್ಸು ಗಳಿಸಿ ಮುನ್ನುಗ್ಗುತ್ತಿರುವ 'ಕಾಂತಾರ' ಚಲನಚಿತ್ರಕ್ಕೆ ಸಂಬಂಧಿಸಿದಂತೆ ಕೆಲವು ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ತೋರಿಸುತ್ತಿರುವ ಅತೀರೇಕದ ವರ್ತನೆ ಕುರಿತು ಚಿತ್ರತಂಡ ಗಂಭೀರ ಎಚ್ಚರಿಕೆ ನೀಡಿದೆ. ಚಿತ್ರದ ಪ್ರಮುಖ ಪಾತ್ರಧಾರಿಯಾದ ದೈವದ ವೇಷ ಅಥವಾ ದೈವ ಅವಾಹನೆ (ದೈವ ಆವಾಹಿಸುವ) ರೀತಿಯ ದೃಶ್ಯಗಳನ್ನು ಅನುಕರಿಸುವ ಮೂಲಕ ಕೆಲವರು ಹುಚ್ಚಾಟ ನಡೆಸಿರುವುದು ಚಿತ್ರತಂಡದ ಗಮನಕ್ಕೆ ಬಂದಿದ್ದು, ಇದು 'ನಂಬಿಕೆಗೆ ಮಾಡುವ ಅಪಚಾರ' ಎಂದು ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರತಂಡದಿಂದ ಸಾಮಾಜಿಕ ಜಾಲತಾಣದಲ್ಲಿ ಮನವಿ:
ಇಂತಹ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಚಿತ್ರತಂಡವು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಪೋಸ್ಟರ್ ಮೂಲಕ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಮನವಿ ಮಾಡಿದೆ. 'ಪ್ರೇಕ್ಷಕರೇ... ಅವಾಹನೆ ಮಾಡಿಕೊಳ್ಳುವುದನ್ನು ಬಿಡಿ' ಎಂಬ ಶೀರ್ಷಿಕೆಯಡಿ ಈ ಮನವಿಯನ್ನು ಪ್ರಕಟಿಸಲಾಗಿದೆ. ಈ ಮನವಿಯಲ್ಲಿ, 'ದೈವಾರಾಧನೆ ತುಳುನಾಡಿನ ನಂಬಿಕೆಯ ಪ್ರತೀಕ. ಅದು ತುಳುವರ ಅಸ್ಮಿತೆ. ದೈವದ ಬಗ್ಗೆಗಿನ ಗೌರವ ಮತ್ತು ಅದರ ಪೂಜೆ/ಆರಾಧನೆಗೆ ಚ್ಯುತಿ ಬಾರದಂತೆ ದೈವಗಳ ಮಹಿಮೆಯನ್ನು ಸಾರುವ ಭಕ್ತಿಪೂರ್ವಕ ಕಥೆಯನ್ನು ನಾವು ಕಾಂತಾರ ಸಿನಿಮಾದಲ್ಲಿ ತೋರಿಸಿದ್ದೇವೆ' ಎಂದು ಸ್ಪಷ್ಟಪಡಿಸಲಾಗಿದೆ.
ಆದರೆ, 'ಕೆಲವರು ಸಿನಿಮಾದಲ್ಲಿ ಬರುವ ಪಾತ್ರಗಳನ್ನು ಅನುಕರಿಸಿ ಎಲ್ಲೆಂದರಲ್ಲಿ ಅನುಚಿತ ವರ್ತನೆ ಮತ್ತು ಹುಚ್ಚಾಟಗಳನ್ನು ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ನಂಬಿಕೆಗೆ ಮಾಡುವ ಅಪಚಾರ ಮಾತ್ರವಲ್ಲ, ಅಪರಾಧವೂ ಹೌದು. ಇಂತಹ ವರ್ತನೆಗಳನ್ನು ನಾವು ಎಂದಿಗೂ ಸಹಿಸುವುದಿಲ್ಲ' ಎಂದು ಚಿತ್ರತಂಡ ಖಡಕ್ ಸಂದೇಶ ರವಾನಿಸಿದೆ.
ಕ್ರಮದ ಸ್ಪಷ್ಟ ಎಚ್ಚರಿಕೆ:
ಬೆಂಗಳೂರು ತುಳುಕೂಟದಂತಹ ಸಂಘಟನೆಗಳು ಕೂಡ ಅಭಿಮಾನಿಗಳಿಗೆ ಬುದ್ಧಿ ಹೇಳುವಂತೆ ಚಿತ್ರತಂಡಕ್ಕೆ ಮನವಿ ಮಾಡಿದ್ದವು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ, ಚಿತ್ರತಂಡ ತಕ್ಷಣ ಕ್ರಮಕ್ಕೆ ಮುಂದಾಗಿದೆ. ರಿಷಬ್ ಶೆಟ್ಟಿಯವರ ಪರವಾಗಿ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಈ ಕುರಿತು ಅಂತಿಮ ಎಚ್ಚರಿಕೆ ನೀಡಿದ್ದು, 'ಇನ್ನು ಮುಂದೆ ಸೇರಿ ಇತರ ಸಾರ್ವಜನಿಕ ಸ್ಥಳಗಳಲ್ಲಿ, ಸಭೆ ಸಮಾರಂಭಗಳಲ್ಲಿ ಯಾರಾದರೂ ದೈವಗಳನ್ನ ಅನುಕರಿಸಿದರೆ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಸ್ಪಷ್ಟವಾಗಿ ಘೋಷಿಸಲಾಗಿದೆ.
'ಕಾಂತಾರ ಚಾಪ್ಟರ್ 1' ಚಿತ್ರವು ದೈವದ ಶಕ್ತಿ ಮತ್ತು ದೈವಾರಾಧನೆಯ ಸಾರವನ್ನು ಭಕ್ತಿಪೂರ್ವಕವಾಗಿ ನಿರೂಪಿಸಿದೆ. ಆದರೆ, ಕೆಲವರ ಅತಿರೇಕದ ನಡವಳಿಕೆ ಈ ನಂಬಿಕೆಯ ಪಾವಿತ್ರ್ಯತೆಗೆ ಧಕ್ಕೆ ತರುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ನಂಬಿಕೆ ಮತ್ತು ಕಲೆಯ ನಡುವಿನ ಸೂಕ್ಷ್ಮತೆಯನ್ನು ಅರಿತುಕೊಂಡು, ಪ್ರೇಕ್ಷಕರು ಚಿತ್ರದ ಆಶಯಕ್ಕೆ ಗೌರವ ನೀಡಬೇಕು ಎಂಬುದು ಚಿತ್ರತಂಡದ ಕಳಕಳಿಯ ಮನವಿಯಾಗಿದೆ.
ಕಾಂತಾರ ಸಿನಿಮಾದ ಅನುಕರಣೆ ವಿಡಿಯೋ ವೈರಲ್:
ಈ ಹಿಂದೆ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾದಲ್ಲಿ ದೈವದ ಸನ್ನಿವೇಶ ಬರುತ್ತದೆ. ಇತ್ತೀಚೆಗೆ ಕಾಂತಾರ ಸಿನಿಮಾವನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಈ ವೇಳೆ ಟಿವಿಯಲ್ಲಿ ಕಾಂತಾರ ಸಿನಿಮಾ ನೋಡುತ್ತಿದ್ದ ಚಿಕ್ಕ ಬಾಲಕ ದೈವದ ರೀತಿಯಲ್ಲಿ ವಾ….ವ್ ಎಂದು ಜೋರಾದ ಧ್ವನಿಯಲ್ಲಿ ಕೂಗಿದ್ದಾನೆ. ಆಗ ಅವನ ತಾಯೊ ಹೊರಗೆ ಕೆಲಸ ಮಾಡುತ್ತಿದ್ದು, ಮಗನಿಗೆ ಏನಾಯಿತು ಎಂದು ಬಾಗರಿಯಿಂದ ನೋಡಿದಾಗ ಸಿನಿಮಾ ನೋಡಿ ಕೂಗಿರುವುದು ತಿಳಿದಿದೆ. ಆಗ ಹುಡುಗನಿಗೊಂದು ಪೆಟ್ಟು ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
