ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್.
ಚಿತ್ರದುರ್ಗ: ಮುರುಘಾಶ್ರೀ ವಿರುದ್ಧ ಮತ್ತೊಂದು ಫೋಕ್ಸೋ ಕೇಸ್  ದಾಖಲಾದ ಹಿನ್ನೆಲೆಯಲ್ಲಿ ಪ್ರಕರಣದ ನಾಲ್ವರು ಸಂತ್ರಸ್ತೆಯರ 161 ಹೇಳಿಕೆಯನ್ನು ಚಿತ್ರದುರ್ಗ ಪೊಲೀಸರು ದಾಖಲಿಸಿದ್ದಾರೆ. ಆದ್ರೆ ದೂರುದಾರ ಮಹಿಳೆ ಹಾಗೂ ಸಂತ್ರಸ್ತೆಯರ ಹೇಳಿಕೆಗಳು ಬಾರಿ ಗೊಂದಲ ಮಯವಾಗಿವೆ ಎಂಬ ಮಾಹಿತಿ ಇದ್ದು, ಎಲ್ಲರ ಚಿತ್ತ ಈಗ 164 ಹೇಳಿಕೆಯತ್ತ ನಿಂತಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಮುರುಘಾ ಶ್ರೀ ವಿರುದ್ಧ‌  ಎರಡನೇ ಫೋಕ್ಸೊ ಕೇಸ್  (POCSO CASE) ದಾಖಲಾದ ಬೆನ್ನಲ್ಲೆ ಕೋಟೆನಾಡಿನ ಗ್ರಾಮಾಂತರ ಠಾಣೆ ಪೊಲೀಸರು ಎಚ್ಚೆತ್ತಿದ್ದಾರೆ. ಫೋಕ್ಸೊ‌ ನಿಯಮದಂತೆ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಸಲು ಮುಂದಾಗಿದ್ದಾರೆ. ಹೀಗಾಗಿ  ಮೈಸೂರಿನಿಂದ ಚಿತ್ರದುರ್ಗಕ್ಕೆ (Chitradurga) ಬರಲು ಆನಾರೋಗ್ಯದ ಕಾರಣ‌ ನೀಡಿ ಹಿಂದೇಟು ಹಾಕಿದ್ದ ದೂರುದಾರ ಮಹಿಳೆ ಹಾಗೂ ಇಬ್ಬರು ಸಂತ್ರಸ್ತೆಯರನ್ನು ಮೈಸೂರಿಗೆ ತೆರಳಿ  ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯಕ್ (Balachandra Nayak) ನೇತೃತ್ವದ ತಂಡ ಅವರ 161 ಹೇಳಿಕೆ ದಾಖಲಿಸಿದ್ದಾರೆ. ಆಗ ದೂರದಾರ ಮಹಿಳೆ ನನ್ನ ಇಬ್ಬರು ಮಕ್ಕಳು ಸೇರಿದಂತೆ ಹಾಸ್ಟೆಲ್‌ನಲ್ಲಿರುವ ಮತ್ತಿಬ್ಬರು ಬಾಲಕಿಯರ ಮೇಲೆ ಮುರುಘಾ ಶ್ರೀಯಿಂದ ಲೈಂಗಿಕ ದೌರ್ಜನ್ಯ (Sexual assult) ನಡೆದಿದೆ. ಅವರಿಗೆ ಆರು ಜನ ಸಹಾಯ ಮಾಡಿದ್ದಾರೆಂದು ತಿಳಿಸಿದ್ದಾರೆ. ಆದರೆ ದೂರುದಾರ ಮಹಿಳೆಯ ಪುತ್ರಿಯರಲ್ಲಿ ಓರ್ವ ಬಾಲಕಿ ನನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ. ನನ್ನನ್ನು ಪ್ರವಾಸಕ್ಕೆಂದು ಕರೆತಂದು ಇಲ್ಲದ ಕಥೆ ಕಟ್ಟುತಿದ್ದಾರೆಂದು ಹೇಳಿರುವ ಮಾಹಿತಿ ಲಭ್ಯವಾಗಿದೆ.

2ನೇ ಪೋಕ್ಸೋ ಕೇಸಲ್ಲಿ ಮುರುಘಾಶ್ರೀಗೆ ಸಂಕಷ್ಟ: ಮೈಸೂರಿಗೆ ತೆರಳಿ ಇಬ್ಬರು ಸಂತ್ರಸ್ತರ ಹೇಳಿಕೆ ದಾಖಲಿಸಿದ ಪೊಲೀಸರು

ಇನ್ನು ಈ ಪ್ರಕರಣದಲ್ಲಿ ‌ಒಟ್ಟು ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪ ಕೇಳಿ ಬಂದಿರುವ  ಹಿನ್ನೆಲೆಯಲ್ಲಿ ಓರ್ವ ಸಂತ್ರಸ್ತೆಯ ಆಪ್ತ ಸಮಾಲೋಚನೆಯನ್ನು ಚಿತ್ರದುರ್ಗ ಸಿಡಬ್ಲೂಸಿ ಸಮಿತಿ (CWC) ನಡೆಸಿದ್ದೂ, ಸಿಆರ್‌ಪಿಸಿ 164 ಅಡಿ ಬಾಲಕಿಯ ಹೇಳಿಕೆಯನ್ನು ಸಹ ಒಂದನೇ ಜೆಎಂಎಫ್‌ಸಿ ನ್ಯಾಯಾಲಯದ ಜಡ್ಜ್ ಎದುರು ಚಿತ್ರದುರ್ಗ ಪೊಲೀಸರು ದಾಖಲಿಸಿದ್ದಾರೆ. ಈ ವೇಳೆ ತನ್ನ ಮೇಲೆ ಯಾವುದೇ ದೌರ್ಜನ್ಯ ನಡೆದಿಲ್ಲವೆಂದು ಆಕೆ ಹೇಳಿರುವ ಸಾಧ್ಯತೆ ಇದೆ. ಇನ್ನು ಉಳಿದ ಮತ್ತೋರ್ವ ಬಾಲಕಿಯ 164 ಹೇಳಿಕೆ ದಾಖಲಿಸಲು ಬಾಲಕಿಯನ್ನು ಕರೆ ತರುವಂತೆ ಸಿಡಬ್ಲುಸಿ ಸಮಿತಿಗೆ ಪೊಲೀಸರು ಮನವಿ‌ ಸಲ್ಲಿಸಿದ್ದಾರೆ.

ಮುರುಘಾ ಮಠದ ತಾತ್ಕಾಲಿಕ ಉತ್ತರಾಧಿಕಾರಿಯಾಗಿ ಬಸವ ಪ್ರಭು ಸ್ವಾಮೀಜಿ: ಹೆಬ್ಬಾಳ ಶ್ರೀ ಹೇಳಿದ್ದೇನು?

ಒಟ್ಟಾರೆ  ಮುರುಘಾಶ್ರೀ ವಿರುದ್ಧ ದಾಖಲಾಗಿರೊ ಎರಡನೇ ಕೇಸ್‌ನಲ್ಲಿ ಪೊಲೀಸರ ತನಿಖೆ ಚುರುಕಾಗಿದೆ. ಹೀಗಾಗಿ ಕೇಸ್ ದಾಖಲಾದ ಐದು ದಿನಕ್ಕೆ  ನಾಲ್ವರು ಸಂತ್ರಸ್ತೆಯರ 161 ಹೇಳಿಕೆ ದಾಖಲಾಗಿದ್ದು, ಅವರಲ್ಲಿ ಓರ್ವ ಬಾಲಕಿ ಹಾಗೂ ಆಕೆಯ ತಾಯಿಯ 164 ಹೇಳಿಕೆಯನ್ನು ಸಹ ಪೊಲೀಸರು ದಾಖಲಿಸಿದ್ದಾರೆ. ಇನ್ನುಳಿದ ಮೂವರು ಸಂತ್ರಸ್ತೆಯರ 164 ಹೇಳಿಕೆ ಪ್ರಕ್ರಿಯೆಗಾಗಿ ಪೊಲೀಸರು ಸಜ್ಜಾಗಿದ್ದಾರೆ.