ವಿಜಯಪುರ(ನ.04): ಭೀಮಾ ತೀರದ ಮಹಾದೇವ ಸಾಹುಕಾರ ಬೈರಗೊಂಡನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ದಾಳಿ ನಡೆಸಿದವರ ಮಹತ್ವದ ಗುರುತು ಪತ್ತೆಯಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್‌ ಹೇಳಿದರು.

ನಗರದ ಹೊರವಲಯದ ಕನ್ನಾಳ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಭೀಮಾ ತೀರದ ಮಹಾದೇವ ಸಾಹುಕಾರ ಬೈರಗೊಂಡನ ಮೇಲೆ ಗುಂಡಿನ ದಾಳಿ ನಡೆದ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸೋಮವಾರ ನಡೆದ ಗುಂಡಿನ ದಾಳಿ ಪ್ರಕರಣ ಭೇದಿಸಲು ಪೊಲೀಸ್‌ ಇಲಾಖೆ ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಿದೆ. ಈಗಾಗಲೇ ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ದಾಳಿ ನಡೆಸಿದವರ ಗುರುತು ಪತ್ತೆಯಾಗಿದೆ. ಒಟ್ಟು 15 ಜನರು ಗುಂಡಿನ ದಾಳಿ ನಡೆಸಿದ್ದಾರೆ ಎಂದ ಅವರು, ಅಲ್ಲದೆ ಪೆಟ್ರೋಲ್‌ ಬಾಂಬ್‌ ಕೂಡ ಎಸೆದಿದ್ದಾರೆ. ಆದರೆ ಅದು ಸ್ಫೋಟವಾಗಿಲ್ಲ. ಘಟನಾ ಸ್ಥಳದಲ್ಲಿ ಮಚ್ಚು, ಲಾಂಗು ಸೇರಿದಂತೆ ಅನೇಕ ಮಾರಕಾಸ್ತ್ರಗಳು ಕೂಡ ದೊರೆತಿವೆ. ಅದರಂತೆ ದಾಳಿ ನಡೆಸಿದ ಒಂದಿಬ್ಬರಿಗೆ ಗಾಯಗಳಾಗಿದ್ದು, ಅವರು ವಿಜಯಪುರ, ಮಹಾರಾಷ್ಟ್ರದ ಸೊಲ್ಲಾಪೂರ, ಪುಣೆ ಮುಂತಾದ ಕಡೆ ಆಸ್ಪತ್ರೆಗಳಲ್ಲಿ ನಿನ್ನೆ ಚಿಕಿತ್ಸೆಗೆ ದಾಖಲಾಗಿರುವ ಸಾಧ್ಯತೆ ಇದೆ. ಹೀಗಾಗಿ ಆ ಬಗ್ಗೆ ಮಾಹಿತಿ ಕೇಳಲಾಗಿದೆ. ತನಿಖೆ ಹಿನ್ನೆಲೆಯಲ್ಲಿ ಹಲವು ಜನರನ್ನು ಈಗಾಗಲೇ ವಶಕ್ಕೂ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಮಹಾದೇವ ಸಾಹುಕಾರ ಬೈರಗೊಂಡನ ಮೇಲೆ ಗುಂಡಿನ ದಾಳಿ ವ್ಯವಸ್ಥಿತವಾಗಿ ನಡೆದಿದೆ. ಪುಣೆ, ಉತ್ತರ ಪ್ರದೇಶದವರೂ ಈ ದಾಳಿಯಲ್ಲಿ ಪಾಲ್ಗೊಂಡಿರುವ ಸಾಧ್ಯತೆ ಇದ್ದು, ತನಿಖೆ ನಡೆಯುತ್ತಿದೆ ಎಂದು ಐಜಿಪಿ ಸ್ಪಷ್ಟಪಡಿಸಿದರು.
ಪ್ರಕರಣ ಭೇದಿಸಲು ಪೊಲೀಸರು ಸೋಮವಾರ ಸಂಜೆಯಿಂದ 35ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. 37 ಜನ ಇನ್ಸ್‌ಪೆಕ್ಟರ್‌ಗಳು ಉಮರಾಣಿ, ವಿಜಯಪುರ ಮೊದಲಾದ ಭಾಗಗಳಲ್ಲಿ ತನಿಖೆ, ಗಸ್ತು ಕಾರ್ಯ ನಡೆಸುತ್ತಿದ್ದಾರೆ. ವಿಜಯಪುರ, ಬಾಗಲಕೋಟೆ ಜಿಲ್ಲೆಗಳ 1500 ಜನ ಪೊಲೀಸರನ್ನು ಈ ಪ್ರಕರಣದ ತನಿಖೆಗೆ ನಿಯೋಜಿಸಲಾಗಿದೆ ಎಂದರು.

ಭೀಮಾ ತೀರದಲ್ಲಿ ಮತ್ತೆ ಗುಂಡಿನ‌ ಸದ್ದು: ಇನ್ನೂ ಮುಗಿಯದ ರಕ್ತ ಚರಿತ್ರೆ..!

ಮಹಾದೇವ ಸಾಹುಕಾರ ಬೈರಗೊಂಡ ಹತ್ಯೆ ಯತ್ನದ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಇದು ಸುಪಾರಿ ಹತ್ಯೆಗೆ ಯತ್ನವೋ ಅಥವಾ ಬೇರೆ ಉದ್ದೇಶವೋ ಎನ್ನುವುದು ಶೀಘ್ರ ಬಹಿರಂಗವಾಗಲಿದೆ ಎಂದರು. ಈ ಪ್ರಕರಣದ ತನಿಖೆಯನ್ನು ಅತ್ಯಂತ ವ್ಯವಸ್ಥಿತವಾಗಿ ಕೈಗೊಳ್ಳಲಾಗುತ್ತಿದೆ. ಈ ತನಿಖೆಯನ್ನು ಜನರು ನೆನಪಿನಲ್ಲಿಡಲಿದ್ದಾರೆ. ಅದೇ ತೆರನಾಗಿ ವಿಜಯಪುರ, ಕಲಬುರಗಿಯಲ್ಲಿ ಆ್ಯಕ್ಟಿವ್‌ ಗ್ಯಾಂಗ್‌ಗಳನ್ನು ಸಂಪೂರ್ಣ ಮಟ್ಟಹಾಕಲಾಗುವುದು. ಭೀಮಾ ತೀರದ ಈ ರಕ್ತಸಿಕ್ತ ಇತಿಹಾಸಕ್ಕೆ ಅಂತ್ಯ ಹಾಡುವೆ ಎಂದು ಐಜಿಪಿ ರಾಘವೇಂದ್ರ ಸುಹಾಸ್‌ ಹೇಳಿದರು.

ಎಫ್‌ಎಸ್‌ಎಲ್‌ ತಂಡ ಭೇಟಿ

ಭೀಮಾ ತೀರದ ಮಹಾದೇವ ಸಾಹುಕಾರ ಬೈರಗೊಂಡನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿಗಳನ್ನು ಕಲೆಹಾಕಲು ಬೆಳಗಾವಿ ಎಫ್‌ಎಸ್‌ಎಲ್‌ ತಂಡ ಈಗಾಗಲೇ ವಿಜಯಪುರ ಜಿಲ್ಲೆಗೆ ಭೇಟಿ ನೀಡಿದ್ದು, ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಬೆಳಗಾವಿ ಎಫ್‌ಎಸ್‌ಎಲ್‌ ತಂಡದ ಮೂವರು ಸದಸ್ಯರು ಘಟನಾ ಸ್ಥಳದಲ್ಲಿ ಅಪಘಾತವಾದ ಮಹಾದೇವ ಸಾಹುಕಾರನ ಕಾರು, ದಾಳಿಗೆ ಬಳಕೆಯಾದ ಟಿಪ್ಪರ್‌, ಸ್ಥಳದಲ್ಲಿ ಸಿಕ್ಕ ಜೀವಂತ ಗುಂಡುಗಳು ಹಾಗೂ ಬೈಕ್‌ ಮೊದಲಾದವುಗಳನ್ನು ಪರಿಶೀಲನೆ ನಡೆಸಿದೆ. ದಾಳಿ ನಡೆದ ಜಾಗದಲ್ಲೆ 6 ಬೈಕ್‌ಗಳನ್ನು ಬಿಟ್ಟು ಹಂತಕರು ಪರಾರಿಯಾಗಿದ್ದಾರೆ. 6 ಬೈಕ್‌ಗಳಿಗೆ ನಕಲಿ ನಂಬರ್‌ ಪ್ಲೇಟ್‌ ಹಾಕಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕು ನಡೆಸಲಾಗಿದೆ. ತಂಡಕ್ಕೆ ಎಸ್ಪಿ ಅನುಪಮ್‌ ಅಗರವಾಲ್‌ ಹಾಗೂ ಇತರ ಅಧಿಕಾರಿಗಳು ಸಾಥ್‌ ನೀಡಿದ್ದಾರೆ.

ಬೈರಗೊಂಡನ ಕಾರು ಚಾಲಕ ಸಾವು

ಭೀಮಾತೀರದ ಮಹಾದೇವ ಸಾಹುಕಾರ ಬೈರಗೊಂಡನ ಮೇಲೆ ಸೋಮವಾರ ನಡೆದ ಶೂಟೌಟ್‌ ವೇಳೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತನ ಕಾರು ಚಾಲಕ ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದಾನೆ.
ಬೈರಗೊಂಡನ ಕಾರು ಚಾಲಕ ಲಕ್ಷ್ಮಣ ದಿಂಡೋರೆ (27) ಮೃತಪಟ್ಟಿರುವ ವ್ಯಕ್ತಿ. ಸೋಮವಾರ ವಿಜಯಪುರ ತಾಲೂಕಿನ ಕನ್ನಾಳ ಕ್ರಾಸ್‌ ಬಳಿ ನಡೆದ ಗುಂಡಿನ ದಾಳಿಯಲ್ಲಿ ಲಕ್ಷ್ಮಣನಿಗೂ ಒಂದು ಗುಂಡು ತಗುಲಿತ್ತು. ಮಂಗಳವಾರ ಬೆಳಗ್ಗೆ ಜಾವ 5.45ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಸೋಮವಾರ ಮಧ್ಯಾಹ್ನ ಮಹಾದೇವ ಸಾಹುಕಾರ ಬೈರಗೊಂಡ ವಿಜಯಪುರದಿಂದ ಚಡಚಣ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದಾಗ, ಅರಕೇರಿ ತಾಂಡಾ ಬಳಿಯ ರಾಷ್ಟ್ರೀಯ ಹೆದ್ದಾರಿಯ ಕನ್ನಾಳ ಕ್ರಾಸ್‌ನಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಬೈರಗೊಂಡನ ಸಹಚರ ಬಾಬುರಾಯ (64) ಸ್ಥಳದಲ್ಲೇ ಮೃತಪಟ್ಟಿದ್ದ. ಮಂಗಳವಾರ ಆತನ ಕಾರು ಚಾಲಕ ಮೃತಪಟ್ಟಿದ್ದಾನೆ.

ಅಲ್ಲದೆ, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಾದೇವ ಸಾಹುಕಾರ ಬೈರಗೊಂಡನಿಗೆ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಎರಡೂ ಭುಜಗಳಿಗೆ ತಾಗಿದ್ದ ಗುಂಡುಗಳನ್ನು ವೈದ್ಯರು ಹೊರಗೆ ತೆಗೆದಿದ್ದಾರೆ. ಮಹಾದೇವ ಸಾಹುಕಾರ ಭೈರಗೊಂಡನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಹೆಚ್ಚಿನ ಚಿಕಿತ್ಸೆಗೆ ಹೈದ್ರಬಾದ್‌ಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ ಎಂದು ಬೈರಗೊಂಡ ಕುಟುಂಬದ ಮೂಲಗಳು ತಿಳಿಸಿವೆ.