ಈತ ಅಷ್ಟು ಉತ್ಕಟವಾಗಿ ಆಕೆಯನ್ನು ಪ್ರೀತಿಸುವುದರ ಹಿಂದಿನ ಕಥೆಯನ್ನು ನಿರ್ದೇಶಕರು ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾ ನಿರ್ದೇಶಕ ಚಂದ್ರಮೌಳಿ ಕೆಜಿಎಫ್‌ ಸಿನಿಮಾಕ್ಕೆ ಬರಹಗಾರರಾಗಿ ಕೆಲಸ ಮಾಡಿದವರು.

ಪ್ರಿಯಾ ಕೆರ್ವಾಶೆ

‘ಅಲ್ಲಿ ತಮಟೆ ಹೊಡೀತಿದ್ದಾರೆ, ನನ್ನ ಬ್ರೈನ್‌ ಟಪ್ಪಾಂಗುಚ್ಚಿ ಡ್ಯಾನ್ಸ್‌ ಮಾಡು ಅಂತಿದೆ. ಆದರೆ ನಾನು ಇಯರ್‌ಫೋನ್‌ನಲ್ಲಿ ಪ್ಯಾಥೋ ಸಾಂಗ್‌ ಕೇಳ್ತೀನಿ. ಯಾಕೆಂದರೆ ನಾನು ಮಿದುಳಿನ ಗುಲಾಮ ಅಲ್ಲ!’ - ಇದು ಸೈಕೋ ಶುಕ್ಲಾನ ಒಂದು ಡೈಲಾಗ್‌ ಮತ್ತು ಆ ಪಾತ್ರದ ಒಂದು ಮುಖ. ಆದರೆ ಸಿನಿಮಾದ ಆರಂಭದಲ್ಲಿ ಈ ಪಾತ್ರ ಎದುರಾಗೋದು ಹೃದಯದ ಗುಲಾಮನಾಗಿ. ಶಾನುಭೋಗರ ಮಗಳು ಅಕ್ಷತಾಳ ಒನ್‌ ವೇ ಪ್ರೇಮಿಯಾಗಿ. ಸುರಿಯುವ ಮಳೆಗೆ, ಕೆಲಸಗಾರರಿಂದ ಸಾಯುವಂತೆ ಹೊಡೆಸಿಕೊಂಡೂ ಪ್ರೇಮವನ್ನೇ ಉಸಿರಾಡುವ ಈತನ ಹಿನ್ನೆಲೆ ಇಂಟರೆಸ್ಟಿಂಗ್‌.

ಈತ ಅಷ್ಟು ಉತ್ಕಟವಾಗಿ ಆಕೆಯನ್ನು ಪ್ರೀತಿಸುವುದರ ಹಿಂದಿನ ಕಥೆಯನ್ನು ನಿರ್ದೇಶಕರು ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾ ನಿರ್ದೇಶಕ ಚಂದ್ರಮೌಳಿ ಕೆಜಿಎಫ್‌ ಸಿನಿಮಾಕ್ಕೆ ಬರಹಗಾರರಾಗಿ ಕೆಲಸ ಮಾಡಿದವರು. ಆ ಕಾರಣಕ್ಕೋ ಏನೋ ಅವರ ನಿರ್ದೇಶನದ ಮೊದಲ ಸಿನಿಮಾ ಚಿತ್ರಕಥೆ, ಸಂಭಾಷಣೆಗಳಿಂದ ಗಮನಸೆಳೆಯುತ್ತದೆ. ಕೆಲವೊಮ್ಮೆ ಉಪೇಂದ್ರ ನೆನಪಾಗುತ್ತಾರೆ. ಫಸ್ಟ್‌ ಹಾಫ್‌ನಲ್ಲಂತೂ ಪ್ರತೀ ಡೈಲಾಗ್‌ನಲ್ಲೂ ಪಂಚಿಂಗ್‌ ಸಾಲುಗಳೇ ಬಂದು ಇದ್ಯಾಕೋ ಓವರ್‌ ಆಯ್ತಲ್ಲ ಅನಿಸುವಾಗಲೇ ಅವರೊಳಗಿನ ಪಂಚಿಂಗ್‌ ಮ್ಯಾನ್‌ ಹಿನ್ನೆಲೆಗೆ ಸರಿದು ನಿಜ ಕಥೆಗಾರ ಮುಂದೆ ಬರುತ್ತಾನೆ.

ಚಿತ್ರ: ದಿಲ್‌ಮಾರ್‌
ನಿರ್ದೇಶನ: ಎಂ ಚಂದ್ರಮೌಳಿ
ತಾರಾಗಣ: ರಾಮ್‌, ಅದಿತಿ ಪ್ರಭುದೇವ, ಡಿಂಪಲ್‌ ಹಯಾತಿ
ರೇಟಿಂಗ್‌ : 3.5

ಸೆಕೆಂಡ್‌ ಹಾಫ್‌ನಲ್ಲಿ ಕಥೆ ಮತ್ತೊಂದು ಆಯಾಮ ಪಡೆದುಕೊಳ್ಳುತ್ತದೆ. ಇಲ್ಲಿ ಕೊಂಚ ಫೋಕಸ್‌ ಕಳೆದುಕೊಳ್ಳುವ ಕಥೆ ಕೊನೆಯಲ್ಲಿ ಮತ್ತೆ ಹಳಿಗೆ ಮರಳುತ್ತದೆ. ಕ್ಲೈಮ್ಯಾಕ್ಸ್‌ ಸ್ವಲ್ಪ ಅಬ್ರಪ್ಟ್‌ ಅನಿಸಿದರೂ ಹಳೇ ಸ್ಟೈಲನ್ನು ನಿರ್ದೇಶಕರು ಇಲ್ಲಿ ಮೀರಿದ್ದಾರೆ. ನಾಯಕ ರಾಮ್‌ ಸೈಕೋ ಶುಕ್ಲನೆಂಬ ವಿಲಕ್ಷಣ ಪಾತ್ರವನ್ನು ಜೀವಿಸಿದ್ದಾರೆ. ಡಿಂಪಲ್‌ ಹಯಾತಿ, ಅದಿತಿ ಪ್ರಭುದೇವ ನಟನೆ ಚೆನ್ನಾಗಿದೆ. ಕೊರತೆಗಳಾಚೆಯೂ ಚಿತ್ರ ಒಂದೊಳ್ಳೆ ಆ್ಯಕ್ಷನ್‌, ಲವ್‌ ಎಂಟರ್‌ಟೇನರ್‌ ಆಗಿ ಮೂಡಿಬಂದಿದೆ.