ಬೆಂಗಳೂರು ಉಪನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) 40 ತಿಂಗಳಲ್ಲಿ ಪೂರ್ಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಗಡುವು ಭಾನುವಾರ (ಅ.26) ಕೊನೆಗೊಂಡಿದೆ. ಆದರೆ ಇಲ್ಲಿಯವರೆಗೆ ಶೇ.15ರಷ್ಟು ಕಾಮಗಾರಿಯೂ ಪೂರ್ಣಗೊಂಡಿಲ್ಲ.

ಬೆಂಗಳೂರು : ಬೆಂಗಳೂರು ಉಪನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) 40 ತಿಂಗಳಲ್ಲಿ ಪೂರ್ಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಗಡುವು ಭಾನುವಾರ (ಅ.26) ಕೊನೆಗೊಂಡಿದೆ. ಆದರೆ ಇಲ್ಲಿಯವರೆಗೆ ಶೇ.15ರಷ್ಟು ಕಾಮಗಾರಿಯೂ ಪೂರ್ಣಗೊಂಡಿಲ್ಲ.

ಬಿಎಸ್‌ಆರ್‌ಪಿ ಯೋಜನೆಯ ಕಾಮಗಾರಿ ಕುಂಠಿತಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಭೂಸ್ವಾಧೀನಪಡಿಸಿ ಯೋಜನೆಗೆ ಭೂ ಹಸ್ತಾಂತರ ಮಾಡದಿರುವುದೇ ಕಾರಣವೆನ್ನಲಾಗಿದೆ.

2020ರ ಅಕ್ಟೋಬರ್‌ 21ರಂದು ಬಿಎಸ್‌ಆರ್‌ಪಿಗೆ ಅಂತಿಮ ಅನುಮೋದನೆ ನೀಡಲಾಗಿತ್ತು. ಆದರೆ, ಕಾಮಗಾರಿ ಆರಂಭವಾಗುವುದು ಸುಮಾರು ಎರಡು ವರ್ಷ ವಿಳಂಬವಾಗಿತ್ತು. 2022ರ ಜೂನ್‌ 20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿ, 40 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಘೋಷಿಸಿದ್ದರು.

ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸಸ್ (ಕೆ- ರೈಡ್) ಸಂಸ್ಥೆ

ಬಿಎಸ್‌ಆರ್‌ಪಿ ಯೋಜನೆ ಅನುಷ್ಠಾನಗೊಳಿಸಲು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸಸ್ (ಕೆ- ರೈಡ್) ಸಂಸ್ಥೆಯನ್ನು ರಚಿಸಲಾಗಿತ್ತು. ಬಳಿಕ ಕಾಮಗಾರಿ ಪ್ರಕ್ರಿಯೆಗಳು ಆರಂಭಗೊಂಡರೂ ಆಗಾಗ ತಲೆಧೋರುತ್ತಿದ್ದ ವಿಘ್ನಗಳು ಕಾಮಗಾರಿಯ ವೇಗಕ್ಕೆ ತಡೆ ಆಗಿದ್ದರಿಂದ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವುದಿರಲಿ, ಕೇವಲ ಶೇ.15ರಷ್ಟು ಮುಂದುವರೆಯಲು ಸಾಧ್ಯವಾಗಿಲ್ಲ.

ಒಟ್ಟು 148 ಕಿ.ಮೀ. ಉದ್ದದ ನಾಲ್ಕು ಕಾರಿಡಾರ್‌ಗಳ ಈ ಯೋಜನೆಯಲ್ಲಿ ಮೆಜೆಸ್ಟಿಕ್‌ನಿಂದ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣ ಸಂಪರ್ಕಿಸುವ ಕಾರಿಡಾರ್‌–1 ಬಹಳ ಮಹತ್ವದ, ಜನರಿಗೆ ಹೆಚ್ಚು ಉಪಯೋಗವಾಗುವ ಕಾರಿಡಾರ್‌ ಆಗಿತ್ತು. ಆದರೆ, ಬಿಎಂಆರ್‌ಸಿಎಲ್‌ನ ಪತ್ರಕ್ಕೆ ಮನ್ನಣೆ ನೀಡಿದ ಸರ್ಕಾರಗಳು ಕಾರಿಡಾರ್‌–1 ಬದಲು, 2ರ ಕಾಮಗಾರಿ ಮೊದಲು ಆರಂಭಿಸುವಂತೆ ಸೂಚಿಸಿದ್ದವು. ಅದರಂತೆ ಚಿಕ್ಕಬಾಣಾವರದಿಂದ ಬೆನ್ನಿಗಾನಹಳ್ಳಿ ಸಂಪರ್ಕಿಸುವ ಕಾರಿಡಾರ್‌–2ರ ಕಾಮಗಾರಿ ಆರಂಭಿಸಲಾಗಿತ್ತು. ಇದ್ದಿದ್ದರಲ್ಲಿ ಇದೊಂದೇ ಕಾಮಗಾರಿ ಪ್ರಗತಿಯಲ್ಲಿದ್ದು ಶೇ 30ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಮರು ಟೆಂಡರ್‌ಗೆ ಕೆ-ರೈಡ್‌ ಸಿದ್ಧತೆ:

ಇನ್ನೊಂದು ವರ್ಷದ ಒಳಗೆ ಚಿಕ್ಕಬಾಣಾವರದಿಂದ ಯಶವಂತಪುರದವರೆಗೆ ರೈಲು ಸಂಚಾರ ಆರಂಭಿಸುವ ಗುರಿಯನ್ನು ಕೆ–ರೈಡ್‌ ಇಟ್ಟುಕೊಂಡಿತ್ತು. ಬೈಯಪ್ಪನಹಳ್ಳಿ- ಚಿಕ್ಕಬಾಣಾವಾರ 25 ಕಿ.ಮೀ, ಹೀಲಲಿಗೆ- ರಾಜಾನುಕುಂಟೆ 45 ಕಿ.ಮೀ ಉದ್ದದ ಕಾಮಗಾರಿ ಗುತ್ತಿಗೆಪಡೆದಿದ್ದ ಎಲ್‌ ಆ್ಯಂಡ್‌ ಟಿ ಕಂಪನಿಯು ಗುತ್ತಿಗೆಯಿಂದ ಹೊರ ನಡೆದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ಇದಾಗಿ 7 ತಿಂಗಳು ಕಳೆದರೂ ಕಾಮಗಾರಿಗೆ ಮರುಚಾಲನೆ ದೊರೆತಿಲ್ಲ. ಈ ನಡುವೆ ಕೆ.ರೈಡ್‌ ಕಂಪನಿ ವಿರುದ್ಧ ಕೋರ್ಟ್‌ ಮೆಟ್ಟಿಲೇರಿರುವ ಗುತ್ತಿಗೆ ಪಡೆದ ಕಂಪನಿಯು ₹600 ಕೋಟಿ ನಷ್ಟ ಭರಿಸುವಂತೆ ಅರ್ಜಿ ಸಲ್ಲಿಸಿದೆ. ಈ ನಡುವೆ ಕೆ-ರೈಡ್‌ ಮರು ಟೆಂಡರ್‌ಗೆ ಮುಂದಾಗಿದೆ.