ಭಾರತೀಯ ರೈಲ್ವೆಯು ಎಸಿ ಕಂಪಾರ್ಟ್‌ಮೆಂಟ್‌ಗಳಲ್ಲಿ ಬಳಸಲಾಗುತ್ತಿದ್ದ ಕೊಳಕಾದ ಬಿಳಿ ಬ್ಲಾಂಕೆಟ್‌ಗಳನ್ನು ತೆಗೆದುಹಾಕಲು ನಿರ್ಧರಿಸಿದೆ. 'ವೋಕಲ್ ಫಾರ್ ಲೋಕಲ್' ಮಿಷನ್‌ನ ಭಾಗವಾಗಿ, ಪ್ರಯಾಣಿಕರ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರಿಂಟೆಡ್ ಬ್ಲಾಂಕೆಟ್‌ಗಳನ್ನು ಪರಿಚಯಿಸಲಾಗಿದೆ.
ದೆಹಲಿ (ಅ.22): ಇನ್ಮುಂದೆ ರೈಲು ಪ್ರಯಾಣದಲ್ಲಿ ಕೊಳಕಾದ ಬಿಳಿ ಬ್ಲಾಂಕೆಟ್‌ಗಳನ್ನು ಬಳಸುವ ಅಗತ್ಯವಿಲ್ಲ. ಧೂಳು ಹಿಡಿದ ಮತ್ತು ಅಪರೂಪಕ್ಕೊಮ್ಮೆ ಮಾತ್ರ ತೊಳೆಯುವ ಬಿಳಿ ಬ್ಲಾಂಕೆಟ್‌ಗಳನ್ನು ತೆಗೆದುಹಾಕಲು ಭಾರತೀಯ ರೈಲ್ವೆ ಮುಂದಾಗಿದೆ. ಸಾಂಪ್ರದಾಯಿಕ ಸಂಗನೇರಿ ವಿನ್ಯಾಸಗಳಲ್ಲಿ ಸಿದ್ಧಪಡಿಸಿದ ಪ್ರಿಂಟೆಡ್ ಬ್ಲಾಂಕೆಟ್‌ಗಳನ್ನು ರೈಲ್ವೆ ಪರಿಚಯಿಸಿದೆ.
'ವೋಕಲ್ ಫಾರ್ ಲೋಕಲ್' ಮಿಷನ್‌ನ ಭಾಗವಾಗಿ ಎಸಿ ಕಂಪಾರ್ಟ್‌ಮೆಂಟ್‌ಗಳಲ್ಲಿ ಇನ್ನು ಮುಂದೆ ಪ್ರಿಂಟೆಡ್ ಬ್ಲಾಂಕೆಟ್‌ಗಳನ್ನು ನೀಡಲಾಗುವುದು. ಗುರುವಾರ ಜೈಪುರ-ಅಸರ್ವಾ ಎಕ್ಸ್‌ಪ್ರೆಸ್‌ನ ಎಲ್ಲಾ ಎಸಿ ಕೋಚ್‌ಗಳಲ್ಲಿ ಮುದ್ರಿತ ಕಂಬಳಿ ಕವರ್‌ಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪರಿಚಯಿಸಿದರು. ಪ್ರಯಾಣಿಕರ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವರು ವಿವರಿಸಿದ್ದಾರೆ.
ಪ್ರಯಾಣಿಕರ ಸ್ವಚ್ಛತೆ ಗಮನದಲ್ಲಿಟ್ಟುಕೊಂಡು ಈ ಕ್ರಮ ಎಂದ ರೈಲ್ವೆ ಸಚಿವರು:
ಇಲ್ಲಿಯವರೆಗೆ, ಭಾರತೀಯ ರೈಲ್ವೆಯ ಎಲ್ಲಾ ದೂರದ ರೈಲುಗಳ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರಿಗೆ ಮಲಗಲು ಕಂಬಳಿ, ದಿಂಬು ಮತ್ತು ಬಿಳಿ ಹಾಳೆಗಳನ್ನು ನೀಡಲಾಗುತ್ತಿತ್ತು. ಕೆಲವು ರೈಲುಗಳಲ್ಲಿ, ಪ್ರಯಾಣಿಕರ ಅನುಕೂಲಕ್ಕಾಗಿ ಬಿಳಿ ಟವೆಲ್‌ಗಳನ್ನು ಸಹ ನೀಡಲಾಗುತ್ತಿತ್ತು. ಭಾರತೀಯ ರೈಲ್ವೆ ಮೂಲಗಳ ಪ್ರಕಾರ, ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರು ಬಳಸುವ ಬಿಳಿ ಬ್ಲಾಂಕೆಟ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುವುದಿಲ್ಲ. ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ಅವುಗಳನ್ನು ತೊಳೆಯಲಾಗುತ್ತದೆ. ಹೀಗಾಗಿ ಎಸಿ ಕೋಚ್‌ಗಳಲ್ಲಿನ ಬಿಳಿ ಬ್ಲಾಂಕೆಟ್‌ಗಳು ಕೊಳಕಾಗಿರುತ್ತವೆ.
ಪ್ರಯಾಣಿಕರ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಇನ್ನು ಮುಂದೆ ಪ್ರಿಂಟೆಡ್ ಕಂಬಳಿಗಳನ್ನು ನೀಡಲಾಗುವುದು. ಎಲ್ಲಾ ಹಾಳೆಗಳಿಗೂ ಕವರ್ ಇರುತ್ತದೆ. ಶೀಘ್ರದಲ್ಲೇ ದೇಶದ ಎಲ್ಲಾ ರೈಲುಗಳಲ್ಲಿಯೂ ಇದನ್ನು ಪರಿಚಯಿಸಲಾಗುವುದು ಎಂಬ ಸೂಚನೆ ಇದೆ. ಇದು ಸ್ವಚ್ಛತೆ, ಏಕರೂಪತೆ ಮತ್ತು ಉತ್ತಮ ಆನ್-ಬೋರ್ಡ್ ಅನುಭವವನ್ನು ಉತ್ತೇಜಿಸುತ್ತದೆ ಎಂದು ರೈಲ್ವೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ರೈಲು ಪ್ರಯಾಣದ ಸಮಯದಲ್ಲಿ ಕೊಳಕಾದ ಬ್ಲಾಂಕೆಟ್‌ಗಳು ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದವು.
