Shikaripura accident couple dies ಶಿಕಾರಿಪುರದಲ್ಲಿ ಮದುವೆ ನಿಶ್ಚಯವಾಗಿದ್ದ ಜೋಡಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬೈಕ್‌ಗೆ ಎಕೋ ಗುದ್ದಿದ ಪರಿಣಾಮ ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಮದುವೆ ನಿಶ್ಚಯವಾಗಿದ್ದ ಈ ಜೋಡಿಯ ಸಾವು ಕುಟುಂಬಸ್ಥರಲ್ಲಿ ದುಃಖ ತಂದಿದೆ.

ಶಿವಮೊಗ್ಗ: ಜೀವನ ಪರ್ಯಂತ ಇನ್ನೂ ಬದುಕಿ ಬಾಳಬೇಕಾದ ಹೊಸ ಆಸೆ ಕನಸುಗಳನ್ನು ಕಂಡ ಇತರರಂತೆ ಬಾಳಿ ಬದುಕ ಬೇಕೆಂದವರು ಕಂಡ ಕನಸು ನನಸಾಗದೆ ಮದುವೆಗೂ ಮುಂಚೆಯೇ ವಿಧಿಯ ಆಟಕ್ಕೆ ಬಲಿಯಾದ ಘಟನೆ ಶಿವಮೊಗ್ಗದ ಶಿಕಾರಿಪುರದಲ್ಲಿ ನಡೆದಿದೆ. ಸೊರಬ ತಾಲೂಕು ಗಂಗವಳ್ಳಿ ಗ್ರಾಮದ ಬಸವನಗೌಡ (30) ಹಾಗೂ ಶಿಕಾರಿಪುರ ತಾಲೂಕಿನ ಮತ್ತೀಕೋಟೆ ಗ್ರಾಮದ ರೇಖಾ (25) ಮೃತಪಟ್ಟ ದುರ್ದೈವಿಗಳು. ಶಿಕಾರಿಪುರ ತಾಲೂಕಿನ ಮಟ್ಟಿಕೋಟೆ ಗ್ರಾಮದ ರೇಖಾ ಮತ್ತು ತೊಗರ್ಸಿ ವ್ಯಾಪ್ತಿಯ ಗಂಗೊಳ್ಳಿ ಗ್ರಾಮದ ಬಸವನಗೌಡ ಇವರಿಬ್ಬರಿಗೂ ಕಳೆದ ತಿಂಗಳು ಶ್ರಾವಣದಲ್ಲಿ ಮದುವೆ ನಿಶ್ಚಿತಾರ್ಥವಾಗಿತ್ತು.

ಎಕೋ ವಾಹನ ಡಿಕ್ಕಿ

ಮಂಗಳವಾರ ಮಾವನ ಮನೆಗೆ ಬಂದಿದ್ದ ಬಸವನಗೌಡ ಬುಧವಾರ ಬೆಳಿಗ್ಗೆ ಸಂಗಾತಿಯ ತವರೂರಾದ ಮಟ್ಟಿಕೋಟೆಯಿಂದ ತೊಗರ್ಸಿ ದೇವಸ್ಥಾನಕ್ಕೆ ಬೈಕಿನಲ್ಲಿ ತೆರಳುತ್ತಿದ್ದಾಗ ಶಿಕಾರಿಪುರದ ಅಂಬಾರಗೋಪ್ಪ ಕ್ರಾಸ್ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮುಂಭಾಗದಲ್ಲಿ ಶಿರಾಳಕೊಪ್ಪದಿಂದ ಶಿಕಾರಿಪುರದ ಗಾರ್ಮೆಂಟ್ಸ್ ಗೆ ಅತಿ ವೇಗವಾಗಿ ಬರುತ್ತಿದ್ದ ಎಕೋ ವಾಹನ ಇವರ ಬೈಕಿಗೆ ಗುದ್ದಿದ ಪರಿಣಾಮ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ.

ಮದುವೆಯ ಮುಂಚೆ ಮಸಣ ಸೇರಿದ ಜೋಡಿ

ಆಸ್ಪತ್ರೆಗೆ ಆಗಮಿಸಿದ ರೇಖಾಳ ತಂದೆ ಬಸವರಾಜಪ್ಪ ಮತ್ತು ಕುಟುಂಬದವರು ಬೈಕ್ ಬಿಟ್ಟು ಬಸ್ಸಿಗೆ ಹೋಗಿ ಎಂದು ಎಷ್ಟೋ ಸಲ ಹೇಳಿದರೂ ನನ್ನ ಮಾತು ಕೇಳದೆ ಬೈಕ್ ಮೇಲೆ ಹೊರಟ ಜೋಡಿ ಮದುವೆಯ ಮುಂಚೆ ಮಸಣ ಸೇರಿದ್ದಾರೆ ಎಂದು ಆಕ್ರಂದನ ವ್ಯಕ್ತಪಡಿಸಿದ್ದರು. ಇನ್ನು ಕೆಲವೇ ದಿನಗಳಲ್ಲಿ ಹಸೆ ಮಣೆ ಏರುವ ಉತ್ಸಾಹದಲ್ಲಿ ಇದ್ದ ಜೋಡಿ ಜೀವಗಳು ವಿಧಿಯಾಟಕ್ಕೆ ಬಲಿಯಾಗಿದ್ದು ಗ್ರಾಮಸ್ಥರಲ್ಲಿ ಬೇಸರ ತರಿಸಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಇಕೋ ಚಾಲಕನ ವಿರುದ್ಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.