ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕದೋಷ, ರೈಲು ಇಲ್ಲದೆ ಪ್ರಯಾಣಿಕರ ಪರದಾಟ, ಸಂಜೆ 7 ಗಂಟೆಯಿಂದ ಸಮಸ್ಯೆ ಎದುರಾಗಿದೆ. ಬಿಎಂಆರ್‌ಸಿಎಲ್ ಸಮಸ್ಯೆ ಖಚಿತಪಡಿಸಿದ್ದು, ಪ್ರಯಾಣಿಕರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದೆ.
ಬೆಂಗಳೂರು (ಸೆ.22) ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ರೈಲುಗಳ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಇತ್ತೀಚೆಗೆ ಉದ್ಘಾಟನೆ ಆಗಿದ್ದ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ಹಳದಿ ಮೆಟ್ರೋ ಸಂಪರ್ಕ ಮಾರ್ಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಆರ್‌ವಿ ರಸ್ತೆ ನಿಲ್ದಾಣದಲ್ಲೇ ಸಮಸ್ಯೆ ಕಂಡು ಬಂದಿದೆ. ಕಳೆದ 40 ನಿಮಿಷಗಳಿಂದ ಮೆಟ್ರೋ ಸೇವೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಸಮಸ್ಯೆಕುರಿತು ಬಿಎಂಆರ್‌ಸಿಎಲ್ ಖಚಿತಪಡಿಸಿದೆ.
ಸಮಸ್ಯೆ ಖಚಿತಪಡಿಸಲು ಅಧಿಕಾರಿಗಳಿಂದ ವಿಳಂಬ, ಪ್ರಯಾಣಿಕರ ಆಕ್ರೋಶ
ಹಳದಿ ಮೆಟ್ರೋ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದರೂ, ಅಧಿಕಾರಿಗಳು ಯಾವುದೇ ಸೂಚನೆ ನೀಡಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸಂಜೆ 7 ಗಂಟೆಯಿಂದ ನಿಗದಿತ ವೇಳಾಪಟ್ಟಿಯಂತೆ ರೈಲು ಸಂಚರಿಸಿಲ್ಲ. ಇದರ ಪರಿಣಾಮ ಪ್ರಯಾಣಿಕರು ಕೆಲ ಗಂಟೆಗಳಿಂದ ನಿಲ್ದಾಣಗಳಲ್ಲಿ ಕಾಯುವಂತಾಗಿದೆ. ಪ್ರಯಾಣಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಬಿಎಂಆರ್‌ಸಿಎಲ್ ಹಳದಿ ಮೆಟ್ರೋದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ.
ಯಾವಾಗ ಸಮಸ್ಯೆ ಬಗೆ ಹರಿಯುತ್ತೆ?
ರಾತ್ರಿ 9 ಗಂಟೆ ವೇಳೆ ಸಮಸ್ಯೆ ಬಗೆಹರಿಯಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಪ್ರಯಾಣಿಕರು ಸಹಕರಿಸಬೇಕು, ಅನಾನೂಕೂಲತೆಗೆ ವಿಷಾಧಿಸುತ್ತೇವೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಉದ್ಘಾಟನೆಯಾದ ಬಳಿಕ ಹಳದಿ ಮಾರ್ಗದಲ್ಲಿ 25 ನಿಮಿಷಕ್ಕೊಂದು ರೈಲು ಸಂಚಾರ ಲಭ್ಯವಿತ್ತು. ಮೂರು ರೈಲುಗಳಿಂದ ಕಾರ್ಯಾಚರಣೆ ಆರಂಭಗೊಂಡ ಹಳದಿ ಮಾರ್ಗ, ಬಳಿಕ ನಾಲ್ಕನೇ ರೈಲು ಸೇರ್ಪಡೆ ಮಾಡಲಾಗಿತ್ತು. ಹೀಗಾಗಿ 25 ನಿಮಿಷದ ಬದಲು ಪ್ರತಿ 19 ನಿಮಿಷಕ್ಕೊಂದು ರೈಲು ಸೇವೆ ಲಭ್ಯವಿದೆ. ಪ್ರತಿ ದಿನ ಬೆಳಗ್ಗೆ 6.30ಕ್ಕೆ ಮೆಟ್ರೋ ರೈಲು ಆರಂಭಗೊಳ್ಳುತ್ತಿತ್ತು. ಆದರೆ ಮೂರನೇ ರೈಲು ಸೇರ್ಪಡೆ ಬಳಿಕ ಬೆಳಗ್ಗೆ 6 ಗಂಟೆಗೆ ಆರಂಭಗೊಳ್ಳುತ್ತಿದೆ. ಭಾನುವಾರ ಬೆಳಗ್ಗೆ 7 ಗಂಟೆಗೆ ಮೆಟ್ರೋ ರೈಲು ಸೇವೆ ಆರಂಭಗೊಳ್ಳುತ್ತದೆ. ರಾತ್ರಿ 11.55ಕ್ಕೆ ಆರ್‌ವಿ ರಸ್ತೆಯಿಂ ಕೊನೆಯ ರೈಲು ಹೊರಡಲಿದೆ. ಇನ್ನು ಬೊಮ್ಮಸಂದ್ರದಿಂದ ರಾತ್ರಿ 10.42ಕ್ಕೆ ಕೊನೆಯ ರೈಲು ಹೊರಡಲಿದೆ.
ಪ್ರಧಾನಿ ಮೋದಿ ಉದ್ಘಾಟಿಸಿದ ಹಳದಿ ಮಾರ್ಗ
ಪ್ರಧಾನಿ ನರೇಂದ್ರ ಮೋದಿ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಮಾಡಿದ್ದರು. ಈ ಮೂಲಕ ಎಲೆಕ್ಟ್ರಾನಿಕ್ ಸಿಟಿ ಬೊಮ್ಮಸಂದ್ರಕ್ಕೆ ಮೆಟ್ರೋ ಸಂಪರ್ಕ ಲಭ್ಯವಾಗುವ ಮೂಲಕ, ಈ ಭಾಗದಲ್ಲಿ ಓಡಾಡುವ ಜನರು ನಿಟ್ಟುಸಿರು ಬಿಡುವಂತಾಗಿದೆ. ಸಂಚಾರ ದಟ್ಟಣೆಯಿಂದ ತುಂಬಿದ್ದ ಈ ರಸ್ತೆಯಲ್ಲಿ ಇದೀಗ ಪ್ರಯಾಣಿಕರು ತಕ್ಕ ಸಮಯದಲ್ಲಿ ತಲುಪುತ್ತಿದ್ದಾರೆ.
