ರಾಯಚೂರಿನಲ್ಲಿ ಕೆಸರು ಸಿಡಿದ ಹಿನ್ನೆಲೆಯಲ್ಲಿ ಬಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿತ್ತು. ದೂರಿನ ನಂತರ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಸ್ಥರು ಬಸ್ ಡಿಪೋ ಎದುರು ಪ್ರತಿಭಟನೆ ನಡೆಸಿದ್ದಾರೆ.
ರಾಯಚೂರು (ಮೇ 29): ಹಳ್ಳಿಕಟ್ಟೆ ಮೇಲೆ ಕುಳಿತುಕೊಂಡಿದ್ದ ಯುವಕರಿಗೆ ಕೆಸರು ಸಿಡಿದ ಹಿನ್ನೆಲೆಯಲ್ಲಿ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಮೇಲೆ ಕೆಲ ಯುವಕರು ಸೇರಿ ಹಲ್ಲೆ ಮಾಡಿದ್ದರು. ಇದರಿಂದ ಸಾರಿಗೆ ಸಿಬ್ಬಂದಿ ಪೊಲೀಸ್ ಠಾಣೆಗೆ ದೂರು ಕೊಟ್ಟ ಹಿನ್ನೆಲೆಯಲ್ಲಿ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಘಟನೆ ವಿವರ: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹುನಕುಂಟಿ ಗ್ರಾಮದ ಕಟ್ಟೆ ಮೇಲೆ ಕೂತಿದ್ದ ಕೆಲವರ ಮೇಲೆ ಬಸ್ ಚಲಾಯಿಸಿದ ವೇಳೆ ಕೆಸರು ಸಿಡಿದಿದೆ. ಇದರಿಂದ ಆಕ್ರೋಶಗೊಂಡ ಯುವಕರು ಬಸ್ ಡ್ರೈವರ್ ಮತ್ತು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಸಾರಿಗೆ ಸಿಬ್ಬಂದಿ ಗ್ರಾಮದ ಯುವಕ ಮುಕ್ಕಣ್ಣ ವಿರುದ್ಧ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಹಲ್ಲೆ ಪ್ರಕರಣದ ನಂತರ ಯುವಕನ ಪೋಷಕರು ಡ್ರೈವರ್ ಮತ್ತು ಕಂಡಕ್ಟರ್‌ಗೆ ದೂರು ಹಿಂಪಡೆಯಲು ಮನವಿ ಮಾಡಿಕೊಂಡರೂ, ಅವರು ಹಿಂದೇಟು ಹಾಕಿದ್ದಾರೆ. ಈ ಸಂದರ್ಭದಲ್ಲಿ ಪೋಷಕರು ತಮ್ಮ ಮಗನಿಗೆ ಬುದ್ಧಿಮಾತು ಹೇಳಿದ ಪರಿಣಾಮ ಮುಕ್ಕಣ್ಣ ಮಾನಸಿಕವಾಗಿ ನೊಂದುಕೊಂಡಿದ್ದಾನೆ.
ನಾನು ಇನ್ನೂ ಯುವಕನಾಗಿದ್ದು, ಒಂದು ಸಣ್ಣ ಘಟನೆಯಿಂದ ತನ್ನ ಹೆಸರು ಪೊಲೀಸ್ ಠಾಣೆ ಪ್ರಕರಣದಲ್ಲಿ ಬಂದಿದೆ ಎಂದು ತೀವ್ರ ಮನನೊಂದ ಮುಕ್ಕಣ್ಣ, ಮನೆಯವರಿಗೆ ಹೇಳದೆ ಜಮೀನಿಗೆ ತೆರಳಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರಿಂದಾಗಿ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಇದೀಗ ಪೋಷಕರು ತಮ್ಮ ಮಗನ ಸಾವಿಗೆ ಡ್ರೈವರ್ ಮತ್ತು ಕಂಡಕ್ಟರ್ ಕಾರಣವೆಂದು ಆರೋಪಿಸಿ, ಯುವಕನ ಶವವನ್ನು ಲಿಂಗಸೂಗೂರು ಬಸ್ ಡಿಪೋ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಶವದೊಂದಿಗೆ ಬಸ್ ಡಿಪೋ ಮುಂದೆ ಧರಣಿ ನೀಡಿದ ಪೋಷಕರು ಹಾಗೂ ಸಂಬಂಧಿಕರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇನ್ನು ಲಿಂಗಸಗೂರು ಬಸ್ ಡಿಪೋ ಮುಂಭಾಗದಲ್ಲಿ ಮೃತ ಮುಕ್ಕಣ್ಣದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಯುವಕನ ಸಾವಿನ ಹಿನ್ನೆಲೆಯಲ್ಲಿ ಲಿಂಗಸೂಗೂರು ತಾಲೂಕು ಹುನಕುಂಟಿ ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ. ಈ ಪ್ರಕರಣವು ಲಿಂಗಸೂಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಯುವಕನ ಅಕಾಲಿಕ ಸಾವಿಗೆ ನ್ಯಾಯ ನೀಡಬೇಕು ಎಂಬುದು ಪೋಷಕರ ಮನವಿಯಾಗಿದೆ.
