ಮೈಸೂರಿನಲ್ಲಿ 'ಡಾನ್ ಪಟ್ಟ'ಕ್ಕಾಗಿ ನಡೆದ ಆಂತರಿಕ ಜಗಳದಲ್ಲಿ ರೌಡಿಶೀಟರ್ ಗಿಲಿಗಿಲಿ ವೆಂಕಟೇಶ್‌ನನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕುಖ್ಯಾತ ರೌಡಿ ಕಾರ್ತಿಕ್ ಹತ್ಯೆಯ ನಂತರ, ಗ್ಯಾಂಗ್‌ನ ನಾಯಕತ್ವಕ್ಕಾಗಿ ವೆಂಕಟೇಶ್ ಮತ್ತು ಹಾಲಪ್ಪ ನಡುವೆ ಶುರುವಾದ ವೈಷಮ್ಯ ಕೊಲೆಯಲ್ಲಿ ಅಂತ್ಯವಾಗಿದೆ

ಮೈಸೂರು (ಅ.08): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಮ್ಮೆ ರೌಡಿ ಗ್ಯಾಂಗ್‌ವಾರ್ (Gang War) ಮರುಕಳಿಸಿದ್ದು, ನಡು ರಸ್ತೆಯಲ್ಲಿ ಹಾಡಹಗಲೇ ರೌಡಿಶೀಟರ್ ಗಿಲಿಗಿಲಿ ವೆಂಕಟೇಶ್‌ನನ್ನು ಮಚ್ಚುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯ ಹಿಂದೆ 'ಡಾನ್ ಪಟ್ಟ'ಕ್ಕಾಗಿ ನಡೆದಿದ್ದ ಆಂತರಿಕ ಜಗಳವೇ ಕಾರಣ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಕಳೆದ 5 ತಿಂಗಳ ಹಿಂದೆ ಹತ್ಯೆಯಾಗಿದ್ದ ಕುಖ್ಯಾತ ರೌಡಿ ಶೀಟರ್ ಕ್ಯಾತಮಾರನಹಳ್ಳಿ ಕಾರ್ತಿಕ್ನ ಆಪ್ತನಾಗಿದ್ದ ವೆಂಕಟೇಶ್ ಹತ್ಯೆಯು, ಮೈಸೂರಿನ ರೌಡಿ ಚಟುವಟಿಕೆಗಳಿಗೆ ಹೊಸ ಅಧ್ಯಾಯ ತೆರೆದಿದೆ.

ಕಾರ್ತಿಕ್ ಹತ್ಯೆ ಬಳಿಕ 'ಡಾನ್ ಪಟ್ಟದ ಜಗಳ:

ಪೊಲೀಸ್ ಮೂಲಗಳ ಪ್ರಕಾರ, ಮೃತ ವೆಂಕಟೇಶ್, ಹತ್ಯೆಯ ರೂವಾರಿ ಹಾಲಪ್ಪ ಮತ್ತು ಕೊಲೆಯಾದ ಕಾರ್ತಿಕ್ – ಇವರೆಲ್ಲರೂ ಹಿಂದೆ ಒಂದೇ ಗ್ಯಾಂಗ್‌ನಲ್ಲಿದ್ದರು. ಆದರೆ, ಕಾರ್ತಿಕ್‌ನ ಹತ್ಯೆಗೂ ಮುನ್ನವೇ ಮನಸ್ಥಾಪದಿಂದ ವೆಂಕಟೇಶ್ ಗ್ಯಾಂಗ್‌ನಿಂದ ದೂರವಾಗಿದ್ದ. ಕಾರ್ತಿಕ್ ಕೊಲೆಯಾದ ಬಳಿಕ, ಆ ಗ್ಯಾಂಗ್‌ನ 'ಬಾಸ್ ಪಟ್ಟ' ಯಾರಿಗಿರಬೇಕು ಎಂಬ ಜಗಳ ವೆಂಕಟೇಶ್ ಮತ್ತು ಹಾಲಪ್ಪ ನಡುವೆ ಶುರುವಾಗಿತ್ತು. ಕಾರ್ತಿಕ್ ಇಲ್ಲದಿದ್ದ ಕಾರಣ, ರೌಡಿ ಫೀಲ್ಡ್‌ನಲ್ಲಿ ಮತ್ತೆ ಮೆರೆಯಲು ಗಿಲಿಗಿಲಿ ವೆಂಕಟೇಶ್ ಮುಂದಾಗಿದ್ದ. ಇದಕ್ಕೆ ಗ್ಯಾಂಗ್‌ನಲ್ಲೇ ಇದ್ದ ಹಾಲಪ್ಪ ಮತ್ತು ಸಹಚರರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಒಳ ಜಗಳ ತಾರಕಕ್ಕೇರಿ, ಇಬ್ಬರ ನಡುವೆ ಪ್ರತೀಕಾರದ ಅಲೆ ಶುರುವಾಗಿತ್ತು.

ಪ್ರತಿದಾಳಿ ಮತ್ತು ಕೊಲೆಗೆ ಸ್ಕೆಚ್:

ವೆಂಕಟೇಶ್ ಗ್ಯಾಂಗ್‌ನ ವಿರೋಧಕ್ಕೆ ಬೆಚ್ಚಿಬಿದ್ದಿದ್ದ ಹಾಲಪ್ಪ, ಪ್ರತಿಯಾಗಿ ವೆಂಕಟೇಶ್ ಹತ್ಯೆಗೆ ಸ್ಕೆಚ್ ಹಾಕಿದ್ದ. ಹಾಲಪ್ಪ ಮತ್ತು ಆತನ ಸ್ನೇಹಿತ ಮನೋಜ್@ಬಿಗ್ ಶೋ ಎಂಬಾತ ಸೇರಿಕೊಂಡು ಈ ಕೊಲೆಗೆ ಸಂಚು ರೂಪಿಸಿದ್ದರು. ಅವರ ಯೋಜನೆಯಂತೆ, ಆರು ಮಂದಿಯ ತಂಡವು ನಡು ರಸ್ತೆಯಲ್ಲಿ ವೆಂಕಟೇಶ್‌ಗೆ ಖಾರದ ಪುಡಿ ಎರಚಿ, ಮಚ್ಚು ಮತ್ತು ಕತ್ತಿಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದೆ. ಈ ಹತ್ಯೆಯು ಮೈಸೂರು ಅರಮನೆ ಸಮೀಪದ ಡೊಡ್ಡಕೆರೆ ಮೈದಾನದ ಬಳಿ (ಪ್ರದರ್ಶನ ಆವರಣದ ಬಳಿ) ನಡೆದಿರುವುದು ಗ್ಯಾಂಗ್‌ಗಳ ದುಸ್ಸಾಹಸಕ್ಕೆ ಸಾಕ್ಷಿಯಾಗಿದೆ.

ಕೊಲೆ ನಡೆದ ಬಳಿಕ ಹಾಲಪ್ಪ ಮತ್ತು ಮನೋಜ್‌ ಎಸ್ಕೇಪ್ ಆಗಿದ್ದು, ಕೊಲೆಯಲ್ಲಿ ಭಾಗಿಯಾಗಿದ್ದ ಐದು ಮಂದಿ ಹಂತಕರು ತಡರಾತ್ರಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಈ ಕುರಿತು ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ಸಂಚು ರೂಪಿಸಿದ ಪ್ರಮುಖ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.