ಮಾರಿಷಸ್‌ನಲ್ಲಿ ಹಾಸ್ಪಿಟಾಲಿಟಿ ಮತ್ತು ಟೂರಿಸಮ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ವಿದ್ಯಾರ್ಥಿ ನಂದನ್ ಎಸ್. ಭಟ್, ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಗ ಜಲಪಾತದಲ್ಲಿ ಕಾಲು ಜಾರಿ ಬಿದ್ದು ದುರಂತ ಸಾವಿಗೀಡಾಗಿದ್ದಾರೆ.
ಮಂಗಳೂರು : ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಯುವ ವಿದ್ಯಾರ್ಥಿ ಮಾರಿಷಸ್‌ನಲ್ಲಿ ನಡೆದ ಆಕಸ್ಮಿಕ ದುರಂತದಲ್ಲಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಪ್ರವಾಸದ ವೇಳೆ ಜಲಪಾತದಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಸುಬ್ರಹ್ಮಣ್ಯ ಸಮೀಪದ ನಡುಗಲ್ಲು ಕಲ್ಲಾಜೆ ನಿವಾಸಿಯಾಗಿರುವ ಜಯಲಕ್ಷ್ಮಿ ಎಂಬುವವರ ಪುತ್ರ ನಂದನ್ ಎಸ್. ಭಟ್ (25) ಎಂದು ಗುರುತಿಸಲಾಗಿದೆ. ನಂದನ್ ಅವರು ಮಾರಿಷಸ್‌ನಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಹಾಸ್ಪಿಟಾಲಿಟಿ ಮತ್ತು ಟೂರಿಸಮ್ ವಿಷಯದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು.
ವರದಿಗಳ ಪ್ರಕಾರ, ನಂದನ್ ಅವರು ಕಳೆದ ಸೋಮವಾರ, ಸ್ನೇಹಿತರೊಂದಿಗೆ ಜಲಪಾತವೊಂದಕ್ಕೆ ಭೇಟಿ ನೀಡಿದ ವೇಳೆ ಕಾಲು ಜಾರಿ ಬಿದ್ದು ಆಳವಾದ ನೀರಿನೊಳಗೆ ಬಿದ್ದಿದ್ದಾರೆ. ಈ ಅಪಘಾತದಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ನಂತರ, ಅವರ ಮೃತದೇಹವನ್ನು ಮಾರಿಷಸ್‌ನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅಲ್ಲಿಯೇ ಇಡಲಾಗಿದೆ.
ಮೃತದೇಹವನ್ನು ತಾಯ್ನಾಡಿಗೆ ತರಲು ಕುಟುಂಬದ ಮನವಿ
ಈ ದುರ್ಘಟನೆಯ ಸುದ್ದಿ ಅವರ ತಾಯಿ ನಾಡಾದ ಸುಳ್ಯದಲ್ಲಿ ಆಘಾತ ಮೂಡಿಸಿದೆ. ನಂದನ್ ಅವರ ಚಿಕ್ಕಪ್ಪ ಕಾರ್ಕಳದ ಸತ್ಯನಾರಾಯಣ ಭಟ್, ಶವವನ್ನು ಭಾರತಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಗೆ ಸ್ಪಂದಿಸಿದ ಕೋಟ ಶ್ರೀನಿವಾಸ ಪೂಜಾರಿ ಅವರು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಸಂಪರ್ಕಿಸಿ, ಶವವನ್ನು ಶೀಘ್ರವಾಗಿ ಭಾರತಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ. ಅದೇ ರೀತಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರೂ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿ, ಶವ ಸಾಗಣೆಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ.
ಯುವ ಪ್ರತಿಭೆಯ ಅಕಾಲಿಕ ನಿಧನಕ್ಕೆ ಶೋಕ
ಮಾರಿಷಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ನಂದನ್ ಅವರು ತಮ್ಮ ಉತ್ಸಾಹ, ಸಾಧನೆ ಮತ್ತು ಶೈಕ್ಷಣಿಕ ದೃಢತೆಯಿಂದ ಕುಟುಂಬ ಹಾಗೂ ಪ್ರದೇಶದಲ್ಲಿ ಹೆಮ್ಮೆ ಮೂಡಿಸಿದ್ದರು. ಅವರ ಅಕಾಲಿಕ ನಿಧನದಿಂದ ಕುಟುಂಬ, ಬಂಧುಬಳಗ ಮತ್ತು ಸ್ಥಳೀಯರಲ್ಲಿ ಆಘಾತ ಹಾಗೂ ದುಃಖದ ವಾತಾವರಣ ಉಂಟು ಮಾಡಿದೆ.
