ಧರ್ಮಸ್ಥಳದ ವಿರುದ್ಧದ ಅಪಪ್ರಚಾರದ ಹಿನ್ನೆಲೆಯಲ್ಲಿ ಹೊನ್ನಾವರದಲ್ಲಿ ಭವ್ಯ ಧರ್ಮಸಭೆ ಜರುಗಿತು. ಚಕ್ರವರ್ತಿ ಸೂಲಿಬೆಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಹಿಂದೂ ಸಮಾಜವನ್ನು ಒಡೆಯುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು. ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದವು.
ಕಾರವಾರ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊನ್ನಾವರ ನಾಮಧಾರಿ ಸಭಾಭವನದಲ್ಲಿ ಭಾನುವಾರ ಭವ್ಯ ಜನಾಗ್ರಹ ಧರ್ಮಸಭೆ ಜರುಗಿತು. ಈ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿ, ಪ್ರಸ್ತುತ ಪರಿಸ್ಥಿತಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಸೂಲಿಬೆಲೆ ಅವರು ತಮ್ಮ ಭಾಷಣದಲ್ಲಿ ಮಾತನಾಡುತ್ತಾ, ಹಿಂದೂ ಸಮಾಜವನ್ನು ಮುರಿಯುವ ಕೆಲಸ ಇಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಧರ್ಮಾಧಿಕಾರಿಗಳ ವಿರುದ್ಧ ಯಾರಾದರೂ ಮಾತಾಡಿದ ಮೊದಲ ದಿನವೇ ನಾವು ಎಚ್ಚರವಾಗಬೇಕಾಗಿತ್ತು. ಆದರೆ ನಮ್ಮ ನಿರ್ಲಕ್ಷ್ಯದಿಂದ ಇಂದು ಪರಿಸ್ಥಿತಿ ಹೀಗೆ ತಲೆದೋರಿದೆ ಎಂದು ಅಭಿಪ್ರಾಯಪಟ್ಟರು.
ಧರ್ಮಸ್ಥಳ ಎಲ್ಲರಿಗೂ ತೆರೆದ ದೇವಾಲಯ
ಧರ್ಮಸ್ಥಳ ದೇವಾಲಯ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಹೆಗ್ಗಡೆಯವರು ತಾವು ಜೈನರೆಂದು ಎಂದಿಗೂ ಹೇಳಿಕೊಂಡಿಲ್ಲ. ಅವರು ಎಲ್ಲರೊಂದಿಗೆ ಅನ್ಯೋನ್ಯವಾಗಿ ವರ್ತಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಹಿಂದೂಗಳು ಧರ್ಮಸ್ಥಳಕ್ಕೆ ಬರಬೇಡಿ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಕೆಲ ಶಕ್ತಿಗಳು ಸುಳ್ಳು ಪ್ರಚಾರ ನಡೆಸುತ್ತಿವೆ” ಎಂದು ಆರೋಪಿಸಿದರು.
ಹಿಂದೂ ಸಮಾಜ ಒಡೆಯಲು ನಾಲ್ಕು ಶಕ್ತಿಗಳು ಕಾರಣ
ಜಿಹಾದಿ ಪಡೆಗಳು, ಕ್ರೈಸ್ತ ಪರಿವರ್ತನಾ ಚಟುವಟಿಕೆಗಳು, ಲೆಫ್ಟಿಸ್ಟ್ ತತ್ವಗಳು ಮತ್ತು ಕಾಂಗ್ರೆಸ್‌ನ ರಾಜಕೀಯ ಇವೆಲ್ಲವೂ ಸೇರಿ ಹಿಂದೂ ಸಮಾಜವನ್ನು ಒಡೆಯಲು ಕಾರಣವಾಗಿವೆ. ಮುಸ್ಲಿಂ ಸಮಾಜದಲ್ಲೂ ಅನೇಕ ಜಾತಿಗಳು ಇವೆ, ಆದರೆ ಕಾಂಗ್ರೆಸ್ ಅದನ್ನು ಪ್ರಶ್ನಿಸುವುದಿಲ್ಲ. ಆದರೆ ಹಿಂದೂ ಸಮಾಜವನ್ನು ಮಾತ್ರ ಜಾತಿಯ ಹೆಸರಿನಲ್ಲಿ ವಿಭಜಿಸುತ್ತಿದೆ” ಎಂದು ಸೂಲಿಬೆಲೆ ವಾಗ್ದಾಳಿ ನಡೆಸಿದರು.
ಧರ್ಮಸ್ಥಳ ವಿರುದ್ಧದ ವಿಡಿಯೋ ವಿವಾದ
ಸಮೀರ್ ಎಂಬಾತ ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡುವ ಪ್ರಯತ್ನ ತೋರಿದ ಬಗ್ಗೆ ಉಲ್ಲೇಖಿಸಿ, ಅವನಿಗೆ ಧರ್ಮಸ್ಥಳದ ಬಗ್ಗೆ ಆಕ್ಷೇಪ ತೋರಿಸುವ ಆಸಕ್ತಿ ಇದೆ. ಆದರೆ ಅಜ್ಮೀರ್ ದರ್ಗಾದಲ್ಲಿ ನಡೆದ ಘಟನೆಗಳ ಕುರಿತು ಧ್ವನಿ ಎತ್ತುವ ಧೈರ್ಯ ಇಲ್ಲ. ಇದು ಸ್ಪಷ್ಟವಾದ ವ್ಯವಸ್ಥಿತ ಪಿತೂರಿಯ ಭಾಗ. ಹಿಂದೂ ಸಂಘಟನೆಗಳು ಜಾಗೃತವಾಗಬೇಕು” ಎಂದು ಅವರು ಎಚ್ಚರಿಕೆ ನೀಡಿದರು.
ಎಲ್ಲರೂ ಒಟ್ಟಾಗಬೇಕು ಎಂಬ ಸೂಲಿಬೆಲೆ ಆಗ್ರಹ
ಇಂದು ಧರ್ಮಸ್ಥಳದ ವಿರುದ್ಧ ಕುತಂತ್ರ ನಡೆಯುತ್ತಿದೆ. ನಾಳೆ ನಮ್ಮ ಊರಿನ ದೇವಾಲಯಗಳ ಮೇಲೂ ಇದೇ ರೀತಿಯ ದಾಳಿ ನಡೆಯಬಹುದು. ಹೀಗಾಗಿ ಹಿಂದೂಗಳು ಎಲ್ಲರೂ ಒಟ್ಟಾಗಿ ನಿಂತು ಸಮಾಜವನ್ನು ರಕ್ಷಿಸಬೇಕು” ಎಂದು ಸೂಲಿಬೆಲೆ ಒತ್ತಾಯಿಸಿದರು. ಧರ್ಮಸಭೆಯ ನಂತರ ಹಿಂದೂ ಸಂಘಟನೆ ಮುಖ್ಯಸ್ಥ ನಾಗೇಶ್ ಕಾಮತ್, ಸ್ಥಳೀಯ ಮುಖಂಡರು ಮತ್ತು ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಜನತೆ ಹೊನ್ನಾವರ ನಗರದಲ್ಲಿ ಭವ್ಯ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮೆರವಣಿಗೆಯ ಬಳಿಕ ಹೊನ್ನಾವರ ತಾಲೂಕು ಆಡಳಿತ ಕಚೇರಿಗೆ ತೆರಳಿದ ಹೋರಾಟಗಾರರು, ತಹಸಿಲ್ದಾರ್ ಪ್ರವೀಣ್ ಕರಾಂಡೆ ಅವರಿಗೆ ಮನವಿ ಸಲ್ಲಿಸಿದರು. ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಸಮೀರ್ ವಿರುದ್ಧ ತಿರುಗಿಬಿದ್ದ ಮಂಡ್ಯ, ತುಮಕೂರು ಜನ
ತುಮಕೂರು: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಹಿನ್ನೆಲೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರ್ಮಿಕ ಚಿಂತಕರು, ಸಂಘಟನೆಗಳು ಹಾಗೂ ಭಕ್ತಾಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ, ಧರ್ಮಸ್ಥಳದ ವಿರುದ್ಧ ಕಿಡಿಗೇಡಿಗಳು ನಡೆಸುತ್ತಿರುವ ಅಪಪ್ರಚಾರವನ್ನು ಖಂಡಿಸಿ ಭಕ್ತಾಭಿಮಾನಿಗಳು ಹಾಗೂ ಸಂಘಟನೆಗಳ ನೇತೃತ್ವದಲ್ಲಿ ಭವ್ಯ ಪ್ರತಿಭಟನೆ ನಡೆಯಿತು. ಮಧ್ಯಾಹ್ನ 3 ಗಂಟೆಗೆ ಶಿವಪುರ ಸತ್ಯಾಗ್ರಹ ಸೌಧದಿಂದ ಟಿಬಿ ಸರ್ಕಲ್‌ವರೆಗೆ ಬೈಕ್ ರ‍್ಯಾಲಿ ನಡೆಸಲಾಯಿತು. ಜನಸಾಗರ ಈ ರ‍್ಯಾಲಿಯಲ್ಲಿ ಭಾಗವಹಿಸಿ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಸುಳ್ಳು ಪ್ರಚಾರವನ್ನು ತೀವ್ರವಾಗಿ ಖಂಡಿಸಿದರು.
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿಯೂ ಪ್ರತಿಭಟನೆ ಬಿರುಸು ಪಡೆದಿತು. ಬೆಳಿಗ್ಗೆ 10 ಗಂಟೆಗೆ 5 ಲೈಟ್ ಸರ್ಕಲ್‌ನಿಂದ ತಹಶಿಲ್ದಾರ್ ಕಚೇರಿವರೆಗೆ ಜಾಥಾ ನಡೆದಿದ್ದು, ನೂರಾರು ಭಕ್ತರು ಕೈ ಜೋಡಿಸಿ ಶಾಂತಿಪೂರ್ಣವಾಗಿ ಮೆರವಣಿಗೆ ನಡೆಸಿದರು. ನಂತರ ತಹಶಿಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಅವರು, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತುಮಕೂರಿನಲ್ಲಿ ಯೂಟ್ಯೂಬರ್ ವಿರುದ್ಧ ದೂರು
ತುಮಕೂರು ಜಿಲ್ಲೆಯ ಕುಣಿಗಲ್ ಪೊಲೀಸ್ ಠಾಣೆಯಲ್ಲಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ಭಕ್ತರು ಹಾಗೂ ಬಿಜೆಪಿ ಮುಖಂಡರು ಒಟ್ಟಾಗಿ ಯೂಟ್ಯೂಬರ್ ಶಮೀರ್ ಅಹ್ಮದ್ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ. ಅವರ ಆರೋಪ ಪ್ರಕಾರ, ಶಮೀರ್ ಅಹ್ಮದ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸುಳ್ಳು, ಅಪ್ರಮಾಣಿಕ ಹಾಗೂ ಅಪಮಾನಕಾರಿ ವಿಡಿಯೋಗಳನ್ನು ಪ್ರಕಟಿಸಿ ಕೋಟ್ಯಂತರ ಹಿಂದೂಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಪ್ರಚಾರ ನಡೆಸುತ್ತಿದ್ದಾರೆ.
ಭಕ್ತರು ತಮ್ಮ ದೂರುದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಈ ಅಪಪ್ರಚಾರವು ಕೋಟ್ಯಂತರ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಆದ್ದರಿಂದ ಶಮೀರ್ ಅಹ್ಮದ್ ಅವರನ್ನು ತಕ್ಷಣವೇ ಬಂಧಿಸಿ ಕಾನೂನಿನ ಮುಂದೆ ನಿಲ್ಲಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಭಕ್ತಾಭಿಮಾನಿಗಳ ಎಚ್ಚರಿಕೆ
ಪ್ರತಿಭಟನೆ ನಡೆಸಿದ ಭಕ್ತಾಭಿಮಾನಿಗಳು ಹಾಗೂ ಧಾರ್ಮಿಕ ಸಂಘಟನೆಗಳು, ಧರ್ಮಸ್ಥಳವು ಶತಮಾನಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಮಹತ್ವದ ಧಾರ್ಮಿಕ ಕೇಂದ್ರ. ಇದನ್ನು ಅವಹೇಳನಗೊಳಿಸಲು ನಡೆಸಲಾಗುತ್ತಿರುವ ಸುಳ್ಳು ಪ್ರಚಾರವನ್ನು ಯಾವುದೇ ಸಂದರ್ಭದಲ್ಲೂ ಸಹಿಸಲಾಗುವುದಿಲ್ಲ. ಅಗತ್ಯವಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
