ಕೋಲಾರದ ಮಾಲೂರು ತಾಲೂಕಿನಲ್ಲಿ, ಬಾರ್‌ನಲ್ಲಿ ಸೈಡ್ಸ್ ನೀಡಲು ನಿರಾಕರಿಸಿದ ಕಾರಣಕ್ಕೆ ಕ್ಯಾಷಿಯರ್ ಕುಮಾರಸ್ವಾಮಿ ಎಂಬುವವರನ್ನು ಸುಭಾಷ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೆಲಸ ಮುಗಿಸಿ ಮನೆಗೆ ತೆರಳಿದಾಗ, ಹೆಂಡತಿ-ಮಕ್ಕಳ ಮುಂದೆಯೇ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ.

ಕೋಲಾರ (ಅ.27): ಬಾರ್‌ನಲ್ಲಿ ಮದ್ಯ ಸೇವನೆಗೆ ಹೋದ ವ್ಯಕ್ತಿಗೆ ಎಣ್ಣೆ ಖರೀದಿ ಮಾಡಿದ ನಂತರ ಆತನಿಗೆ ಸೈಡ್ಸ್ ನೀಡುವುದಕ್ಕೆ ಬಾರ್ ಕ್ಯಾಷಿಯರ್ ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂದ ಮದ್ಯಪಾನ ವ್ಯಸನಿ, ಬಾರ್ ಕೆಲಸ ಮುಗಿಸಿಕೊಂಡು ಮನೆಗೆ ಹೋದ ಕ್ಯಾಷಿಯರ್‌ಗೆ ಇನ್ನೇನು ಮನೆಯೊಳಗೆ ಹೋಗಬೇಕು ಎನ್ನುವಷ್ಟರಲ್ಲಿ ಆತನ ಹೆಂಡತಿ-ಮಕ್ಕಳ ಕಣ್ಣೆದುರೇ ಬರ್ಬರವಾಗಿ ಚಾಕು ಇರುದು ಕೊಲೆ ಮಾಡಿ ಪರಾರಿಯಾದ ಘಟನೆ ನಡೆದಿದೆ.

ಈ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಬಾರ್ ಕ್ಯಾಷಿಯರ್ ಒಬ್ಬರನ್ನು ಆತನ ಮನೆಯ ಎದುರೇ, ಹೆಂಡತಿ ಮತ್ತು ಮಕ್ಕಳ ಕಣ್ಣೆದುರೇ ಚಾಕುವಿನಿಂದ ಇರಿದು ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಮದ್ಯದ ಅಮಲಿನಲ್ಲಿ ಸಣ್ಣ ಕಾರಣಕ್ಕೆ ನಡೆದ ಈ ಹತ್ಯೆ ಮಾಡಲಾಗಿದ್ದು, ಮಾನವೀಯತೆ ಇಲ್ಲದೆ ಕ್ರೂರತನ ಮೆರೆದಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಘಟನೆ ವಿವರ

ಲಕ್ಕೂರು ಗ್ರಾಮದಲ್ಲಿರುವ 'ಅಶೋಕ ವೈನ್ಸ್' ಬಾರ್‌ನ ಕ್ಯಾಷಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕುಮಾರಸ್ವಾಮಿ (45) ಕೊಲೆಯಾದ ದುರದೃಷ್ಟಶಾಲಿ ವ್ಯಕ್ತಿ. ಹಾಸನ ಮೂಲದವರಾದ ಕುಮಾರಸ್ವಾಮಿ, ಲಕ್ಕೂರು ಗ್ರಾಮದಲ್ಲಿ ನೆಲೆಸಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಘಟನೆ ನಡೆದ ದಿನವಾದ ಭಾನುವಾರ ತಡರಾತ್ರಿ, ಆರೋಪಿ ಸುಭಾಶ್ (30) ಬಾರ್‌ಗೆ ಬಂದು ಮದ್ಯದ ಜೊತೆ ಮಿಕ್ಸ್‌ಚರ್ (ತಿಂಡಿ/ಖಾರಾ) ಕೇಳಿದ್ದಾನೆ. ಆದರೆ, ಬಾರ್ ಮುಚ್ಚುವ ಸಮಯವಾಗಿದ್ದರಿಂದ ಅಥವಾ ಬೇರೆ ಕಾರಣಗಳಿಂದಾಗಿ ಕ್ಯಾಷಿಯರ್ ಕುಮಾರಸ್ವಾಮಿ ಮಿಕ್ಸಚರ್ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸುಭಾಶ್ ಕಿರಿಕ್ ಮಾಡಿದ್ದು, ಮಾತಿನ ಚಕಮಕಿ ನಡೆದಿತ್ತು.

ಮಕ್ಕಳ ಮುಂದೆಯೇ ಹೀನ ಕೃತ್ಯ

ಆ ಘಟನೆಯ ಬಳಿಕ, ಬಾರ್ ಮುಚ್ಚಿ, ಕ್ಯಾಷಿಯರ್ ಕುಮಾರಸ್ವಾಮಿ ತನ್ನ ಮನೆಗೆ ತೆರಳುತ್ತಿದ್ದಾಗ, ಹೊಂಚು ಹಾಕಿದ್ದ ಆರೋಪಿ ಸುಭಾಶ್‌ ಹಿಂಬಾಲಿಸಿಕೊಂಡು ಹೋಗಿದ್ದಾನೆ. ಕುಮಾರಸ್ವಾಮಿ ತನ್ನ ಮನೆಯ ಮುಂದೆ ತಲುಪಿದ ತಕ್ಷಣವೇ, ಸುಭಾಶ್‌ ಆತನ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿದ್ದಾನೆ. ಆರೋಪಿ ಚಾಕುವಿನಿಂದ ಮನಸೋ ಇಚ್ಛೆ ಇರಿದು ಕುಮಾರಸ್ವಾಮಿ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಸಂಪೂರ್ಣ ಭೀಕರ ಘಟನೆ ಆತನ ಹೆಂಡತಿ ಮತ್ತು ಮಕ್ಕಳ ಎದುರೇ ನಡೆದಿದ್ದು, ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ.

ಕ್ಷಿಪ್ರ ಕಾರ್ಯಾಚರಣೆ, ಆರೋಪಿ ಬಂಧನ

ಕೊಲೆ ನಡೆದ ತಕ್ಷಣ ಆರೋಪಿ ಸುಭಾಶ್ ಸ್ಥಳದಿಂದ ಪರಾರಿಯಾಗಿದ್ದನು. ಆದರೆ, ಮಾಲೂರು ಪೊಲೀಸರು ತಡಮಾಡದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಸಾರ್ವಜನಿಕರಿಂದ ಮಾಹಿತಿ ಹಾಗೂ ಲಭ್ಯವಿದ್ದ ಆಧಾರಗಳನ್ನು ಪರಿಶೀಲಿಸಿದ ಪೊಲೀಸರು, ಕಾರ್ಯಾಚರಣೆ ಕೈಗೊಂಡು ಆರೋಪಿ ಸುಭಾಶ್‌ನನ್ನು ಹೊಸಕೋಟೆ ಪ್ರದೇಶದಲ್ಲಿ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಸುಭಾಶ್‌ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಸಣ್ಣ ಕಾರಣಕ್ಕೆ ವ್ಯಕ್ತಿಯೊಬ್ಬನ ಬದುಕು ಅಂತ್ಯಗೊಂಡಿರುವುದು ಸುತ್ತಮುತ್ತಲ ಜನರಲ್ಲಿ ಆತಂಕವನ್ನು ಮೂಡಿಸಿದೆ.

ಅಸಲಿ ಮಾಹಿತಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

ಪ್ರತ್ಯಕ್ಷದರ್ಶಿ ಮಾಹಿತಿಯ ಪ್ರಕಾರ, ನಾವು ಕುಮಾರಣ್ಣ ಅವರು ಕೆಲಸ ಮಾಡುವ ಬಾರ್‌ನಲ್ಲಿಯೇ ಕೆಲಸ ಮಾಡ್ತೇವೆ. ಎಣ್ಣೆ ತೆಗೆದುಕೊಂಡ ನಂತರ 10 ರೂ. ಸೈಡ್ಸ್ ಕೊಡುವ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಗ್ರಾಹಕ ತನ್ನ ಕೈಲಿದ್ದ ಬಾಟಲಿ ತೆಗೆದುಕೊಂಡು ಕ್ಯಾಶಿಯರ್ ಕುಮಾರಣ್ಣಂಗೆ ಹೊಡೆದರು. ಆಗ ಕೋಪದಲ್ಲಿ ಕುಮಾರಣ್ಣ ಕೂಡ ಬಾಟಲಿಯಿಂದ ಆ ವ್ಯಕ್ತಿಗೆ ಹೊಡೆದರು. ಇದಾದ ನಂತರ, ಅವರು ಆಸ್ಪತ್ರೆಗೆ ಹೋದರು. ನಾವು ಕೂಡ ಬಾರ್ ಮುಚ್ಚಿ ಕುಮಾರಣ್ಣನ ಮನೆಯವರಿಗೆ ಆಸ್ಪತ್ರೆಗೆ ಬರಲು ಹೇಳಿ ಆಸ್ಪತ್ರೆಗೆ ಹೋದೆವು. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೊರಗೆ ಬರುತ್ತಿದ್ದ ವ್ಯಕ್ತಿ ಕುಮಾರಣ್ಣನನ್ನು ನೋಡುತ್ತಿದ್ದಂತೆ ಏಕಾಏಕಿ ದಾಳಿ ಮಾಡಿ ಚಾಕುವಿನಿಂದ ಕುತ್ತಿಗೆಗೆ ಮನಸೋ ಇಚ್ಛೆ ಇರಿದಿದ್ದಾನೆ. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಗಂಭೀರ ಸ್ಥಿತಿ ತಲುಪಿದ್ದ ಕ್ಯಾಷಿಯರ್ ಕೂಸಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.