ಕಾಂಗ್ರೆಸ್ ಶಾಸಕ ಬಸವಂತಪ್ಪ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಿಸಲು ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ಕುಟುಂಬಗಳಿಗೆ ಮಾತ್ರ ನೀಡಬೇಕೆಂದು ಸಲಹೆ ನೀಡಿದ್ದಾರೆ. 

ದಾವಣಗೆರೆ (ಸೆ.5): ಕಾಂಗ್ರೆಸ್‌ ಸರ್ಕಾರ ವಿಧಾನಸಭೆ ಚುನಾವಣೆಯ ವೇಳೆ ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ, ಅನ್ನಭಾಗ್ಯ ಹಾಗೂ ಶಕ್ತಿ ಹೆಸರಿನಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ ಅಧಿಕಾರಕ್ಕೆ ಏರಿತ್ತು. ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ್ದರೂ, ಈಗಲೂ ಕೆಲವೊಂದು ಯೋಜನೆಗಳು ಕುಂಟುತ್ತಾ ಸಾಗಿವೆ. ಗೃಹಜ್ಯೋತಿ ಯೋಜನೆಯಲ್ಲಿ 200 ಯುನಿಟ್‌ ಫ್ರೀ ಎಂದು ಘೋಷಣೆ ಮಾಡಲಾಗಿತ್ತು. ಅಧಿಕಾರಕ್ಕೆ ಬಂದ ಬಳಿಕ ಅದರಲ್ಲೂ ಬದಲಾವಣೆ ಮಾಡಿ ಸರಾಸರಿಯನ್ನು ಜಾರಿಗೆ ತಂದರು. ಈಗಲೂ ಕೂಡ 2022-23ರ ಸರಾಸರಿ ಯುನಿಟ್‌ನ ಆಧಾರದಲ್ಲಿಯೇ ಗೃಹಜ್ಯೋತಿ ನೀಡಲಾಗುತ್ತಿದೆ. ಇನ್ನು ಗೃಹಲಕ್ಷ್ಮೀ ಹಣ ಪ್ರತಿ ತಿಂಗಳು ಜಮೆ ಆಗುತ್ತಿಲ್ಲ. 

ಯುವನಿಧಿ ಎಷ್ಟು ಮಂದಿಗೆ ಸಿಕ್ಕಿದೆ ಅನ್ನೋದು ಸರ್ಕಾರಕ್ಕೂ ಗೊತ್ತಿಲ್ಲ. ಇದ್ದಿದ್ದರಲ್ಲಿ ಶಕ್ತಿ ಯೋಜನೆ ಪರ್ವಾಗಿಲ್ಲ. ಹೀಗಿರುವ ನಡುವೆ, ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ರೆ ಮಾತ್ರವೇ ಐದೂ ಗ್ಯಾರಂಟಿಯನ್ನು ಕುಟುಂಬಕ್ಕೆ ನೀಡಿ ಎಂದು ಕಾಂಗ್ರೆಸ್‌ ಶಾಸಕರೊಬ್ಬರು ಆಗ್ರಹಿಸಿದ್ದಾರೆ.

ಮಾಯಕೊಂಡ ಶಾಸಕ ನೀಡಿದ ಸಲಹೆ

ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿದ್ರೆ ಮಾತ್ರ ಐದು ಗ್ಯಾರಂಟಿ ನೀಡುತ್ತೇವೆ ಎನ್ನುವ ನಿಯಮವನ್ನು ಸರ್ಕಾರ ಮಾಡಬೇಕು ಎಂದು ಮಾಯಕೊಂಡ ಕಾಂಗ್ರೆಸ್ ಶಾಸಕ ಕೆ.ಎಸ್.ಬಸವಂತಪ್ಪ ಸಲಹೆ ನೀಡಿದ್ದಾರೆ.

ದಾವಣಗೆರೆ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಸಂಖ್ಯೆ ಕಡಿಮೆ ಆಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಳ ಆಗಲು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ಐದು ಗ್ಯಾರಂಟಿ ಪಡೆಯುವ ಫಲಾನುಭವಿಗಳು ತಮ್ಮ ಮಕ್ಕಳ ಸರ್ಕಾರಿ ಶಾಲೆಗೆ ಸೇರಿಸಬೇಕು ಎನ್ನುವ ನಿಯಮ ಮಾಡಬೇಕು ಎಂದು ಹೇಳಿದ್ದಾರೆ.

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ಮಾತ್ರ ಗ್ಯಾರಂಟಿ ನೀಡುತ್ತೇವೆ ಎಂದರೆ ಒಳ್ಳೆಯದು ಎಂದು ಸಿಎಂಗೆ ಮನವಿ ಮಾಡುತ್ತೇನೆ. ಆಗ ಹಾಜರಾತಿ ಸಂಖ್ಯೆ ಹೆಚ್ಚಳ ಆಗಬಹುದು. ಎರಡು ಸಾವಿರ ಬರುತ್ತೆ ಸರ್ಕಾರಿ ಶಾಲೆಗೆ ಹಾಕಿ ಅಂತಾ ಹೇಳುತ್ತಾರೆ. ಸರ್ಕಾರಿ ಶಾಲೆಗೆ ಯಾರು ಸೇರಿಸುತ್ತಾರೋ ಅವರಿಗೆ ಗ್ಯಾರಂಟಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡೋಣ ಎಂದು ಭಾಷಣದಲ್ಲಿ ಹೇಳಿದ್ದಾರೆ.