ಹೈದರಾಬಾದ್‌ನಲ್ಲಿ ಕಲಬುರಗಿ ಜಿಲ್ಲೆಯ ಕುಟುಂಬವೊಂದರ ಐವರು ಸದಸ್ಯರು ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಐವರ ಮೃತದೇಹಗಳು ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಲಬುರಗಿ (ಆ.22): ಹೈದರಾಬಾದ್‌ನಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ರಂಜೋಳ ಗ್ರಾಮದ ಒಂದೇ ಕುಟುಂಬದ ಐವರು ಸದಸ್ಯರು ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಐವರ ಮೃತದೇಹಗಳು ಪತ್ತೆಯಾಗಿವೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ರಂಜೋಳ ಗ್ರಾಮ ಮೂಲದ ಒಂದೇ ಕುಟುಂಬದ 5 ಜನರು ಹೈದ್ರಾಬಾದ್‌ನಲ್ಲಿ ನಿಗೂಢವಾಗಿ ಸಾವಿಗೀಡಾದ ಘಟನೆ ದೊಡ್ಡ ಆಘಾತ ಮೂಡಿಸಿದೆ. ಹೈದ್ರಾಬಾದ್‌ನ ಮಿಯಾಪುರ್ ಪ್ರದೇಶದಲ್ಲಿರುವ ಮನೆಯಲ್ಲಿ ಮಲಗಿದ್ದ ಐವರು ಕೂಡಲೇ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಹಾಗೂ ಸ್ವಗ್ರಾಮದಲ್ಲಿ ಆಘಾತ ಉಂಟುಮಾಡಿದೆ.
ಮೃತರ ವಿವರಗಳು
- ಲಕ್ಷ್ಮಯ್ಯ (60)
- ಪತ್ನಿ ವೆಂಕಟಮ್ಮ (55)
- ಮಗಳು ಕವಿತಾ (24)
- ಅಳಿಯ ಅನಿಲ್ ಕುಮಾರ್ (32)
- ಎರಡು ವರ್ಷದ ಮೊಮ್ಮಗ
ಈ ಕುಟುಂಬವು ಕೂಲಿ ಕೆಲಸಕ್ಕಾಗಿ 10 ವರ್ಷಗಳಿಂದಲೂ ಹೈದ್ರಾಬಾದ್‌ನ ಮಿಯಾಪುರ್ ಏರಿಯಾದಲ್ಲಿ ನೆಲೆಸಿತ್ತು. ಆದರೆ, ಒಂದೇ ಕುಟುಂಬದ ಐವರ ಮೃತದೇಹಗಳು ಮಿಯಾಪುರ್‌ನಲ್ಲಿರುವ ಅವರ ಚಿಕ್ಕ ಮನೆಯಲ್ಲಿ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಾವು ಹೇಗೆ ಸಂಭವಿಸಿತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಲಕ್ಷ್ಮಯ್ಯ ಹಾಗೂ ಪತ್ನಿ ವೆಂಕಟಮ್ಮ ಅವರ ಶವಗಳನ್ನು ಸ್ವಗ್ರಾಮ ರಂಜೋಳಕ್ಕೆ ತರಲಾಗಿದ್ದು, ಮಗಳು, ಅಳಿಯ ಮತ್ತು ಮೊಮ್ಮಗನ ಶವಗಳನ್ನು ಅಳಿಯನ ಊರಾದ ಆಂಧ್ರಪ್ರದೇಶದ ಅನಂತಪುರಕ್ಕೆ ರವಾನೆ ಮಾಡಲಾಗಿದೆ.
ಸೂಕ್ತ ತನಿಖೆಗೆ ಆಗ್ರಹ:
ರಂಜೋಳ ಗ್ರಾಮದಲ್ಲಿ ಮೃತರ ಕುಟುಂಬಕ್ಕೆ ರಕ್ತ ಸಂಬಂಧಿಗಳು ಇಲ್ಲದಿದ್ದರೂ, ಇಡೀ ಗ್ರಾಮಸ್ಥರು ಒಟ್ಟಾಗಿ ನಿಂತು ಲಕ್ಷ್ಮಯ್ಯ ಮತ್ತು ವೆಂಕಟಮ್ಮ ಅವರ ಅಂತ್ಯಕ್ರಿಯೆಯ ಸಿದ್ಧತೆಗಳನ್ನು ನಡೆಸಿದ್ದಾರೆ. ಈ ನಿಗೂಢ ಸಾವಿನ ಸತ್ಯ ಬಯಲಿಗೆ ಬರಲಿ ಎಂದು ರಂಜೋಳದ ಗ್ರಾಮಸ್ಥರು ಆಗ್ರಹ ವ್ಯಕ್ತಪಡಿಸಿದ್ದಾರೆ. ಕುಟುಂಬದ ಐವರು ಹೇಗೆ ಸಾವಿಗೀಡಾದರು ಎಂಬುದು ಇನ್ನೂ ಸ್ಪಷ್ಟವಾಗದೇ ಇರುವ ಕಾರಣ, ಪೊಲೀಸ್ ತನಿಖೆ ತೀವ್ರಗೊಳ್ಳುವ ನಿರೀಕ್ಷೆ ಇದೆ. ಒಂದೇ ಊರಿನ ಐವರು ಒಟ್ಟಿಗೆ ಸಾವಿಗೀಡಾದ ದುರ್ಘಟನೆಯಿಂದ ರಂಜೋಳ ಗ್ರಾಮದಲ್ಲಿ ಶೋಕಸಾಗರ ಆವರಿಸಿದೆ.
