ಹುಬ್ಬಳ್ಳಿಯಲ್ಲಿ ಮಹಿಳೆಯರು ಮತ್ತು ಯುವತಿಯರ ಒಳ ಉಡುಪುಗಳನ್ನು ಕದ್ದು ಆತಂಕ ಸೃಷ್ಟಿಸಿದ್ದ ಕಾರ್ತಿಕ್ ಬೇಜವಾಡ ಎಂಬ ಸೈಕೋ ಕಳ್ಳನನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ. ಈತನ ವಿಲಕ್ಷಣ ವರ್ತನೆಯ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಹುಬ್ಬಳ್ಳಿ (ಸೆ.30): ನಗರದಲ್ಲಿ ಕಳೆದ ಕೆಲವು ದಿನಗಳಿಂದ ಮಹಿಳೆಯರು ಮತ್ತು ಯುವತಿಯರ ಒಳ ಉಡುಪುಗಳನ್ನು ಕದ್ದು ವಿಲಕ್ಷಣವಾಗಿ ವರ್ತಿಸುತ್ತಿದ್ದ 'ಸೈಕೋ' ಕಳ್ಳನನ್ನು ಬೆಂಡಿಗೇರಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಸೆಟಲ್ಮೆಂಟ್‌ನ ಕಾರ್ತಿಕ್ ಬೇಜವಾಡ ಎಂದು ಗುರುತಿಸಲಾಗಿದೆ. ಈತನ ವಿಚಿತ್ರ ಕೃತ್ಯಗಳಿಂದಾಗಿ ಸ್ಥಳೀಯ ಮಹಿಳೆಯರಲ್ಲಿ ಆತಂಕ ಮನೆ ಮಾಡಿತ್ತು.
ಹಗಲು ಹುಚ್ಚ, ರಾತ್ರಿ ಕಳ್ಳ!
ಕಾರ್ತಿಕ್ ಬೇಜವಾಡನ ವರ್ತನೆಯ ಬಗ್ಗೆ ಪೊಲೀಸರು ಮತ್ತು ಸ್ಥಳೀಯರು ಹಲವು ಗೊಂದಲಕಾರಿ ಮಾಹಿತಿಯನ್ನು ನೀಡಿದ್ದಾರೆ. ಕಾರ್ತಿಕ್ ಹಗಲು ಹೊತ್ತಿನಲ್ಲಿ ಹುಚ್ಚರ ರೀತಿಯಲ್ಲಿ ಅಡ್ಡಾಡುತ್ತಿದ್ದ. ಆದರೆ, ರಾತ್ರಿಯಾಗುತ್ತಿದ್ದಂತೆ ಈತ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ನಡೆಸುತ್ತಿದ್ದ. ಕಳ್ಳತನ ಮಾಡುವಾಗಲೂ ಇವನ ವರ್ತನೆ ಸಾಮಾನ್ಯವಾಗಿರಲಿಲ್ಲ.
ಈತ ಕೇವಲ ಯುವತಿಯರ ಒಳ ಉಡುಪುಗಳನ್ನು ಮಾತ್ರ ಕದಿಯುತ್ತಿದ್ದು, ಮನೆಯ ಕಂಪೌಂಡ್‌ಗಳನ್ನು ಹಾರಿ ಒಳ ನುಗ್ಗಿ ತನ್ನ ಕೃತ್ಯ ಮುಗಿಸಿ ಎಸ್ಕೇಪ್ ಆಗುತ್ತಿದ್ದ. ಅಚ್ಚರಿಯೆಂದರೆ, ಮಹಿಳೆಯರ ಇತರ ಯಾವುದೇ ಉಡುಪನ್ನು ಅಥವಾ ಮನೆಯ ಸಾಮಾನುಗಳನ್ನು ಈತ ಮುಟ್ಟುತ್ತಿರಲಿಲ್ಲ. ಕದ್ದ ಒಳ ಉಡುಪುಗಳನ್ನು ತನ್ನ ಒಳ ಉಡುಪಿನೊಳಗೆ ಇರಿಸಿಕೊಂಡು ಇತರೆಡೆಗೆ ತೆಗೆದುಕೊಂಡು ಹೋಗುತ್ತಿದ್ದ. ಕೆಲ ದಿನಗಳ ನಂತರ, ಕದ್ದ ಉಡುಪುಗಳನ್ನು ತಾನು ಕದ್ದಿದ್ದ ಮನೆಯ ಹಿಂಭಾಗದ ಕಂಪೌಂಡ್ ಒಳಗೆ ಬಿಸಾಡುತ್ತಿದ್ದ ಎನ್ನಲಾಗಿದೆ.
ಪೋಕ್ಸೋ ಅಡಿ ಪ್ರಕರಣ ದಾಖಲು:
ಕಾರ್ತಿಕ್ ಈ ಹಿಂದೆ ಸಿಸಿ ಕ್ಯಾಮೆರಾ ಒಡೆದ ಆರೋಪದ ಮೇಲೆ ಸಹ ಪ್ರಕರಣ ದಾಖಲಿಸಿಕೊಂಡಿದ್ದ. ಆದರೆ, ಈ ಬಾರಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪೋಕ್ಸೋ (POCSO) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಕಳ್ಳತನ ಮಾಡಿರುವುದು ಕೇವಲ ಯುವತಿಯರ ಒಳ ಉಡುಪುಗಳು ಮತ್ತು ಆತನ ವಿಲಕ್ಷಣ ವರ್ತನೆಯ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ಬಳಸಲಾಗಿದೆ.
ಪೊಲೀಸರು ಸೈಕೋ ಕಳ್ಳನನ್ನು ಬಂಧಿಸಿದ ನಂತರ ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆತನ ಮಾನಸಿಕ ಸ್ಥಿತಿ ಮತ್ತು ಇಂತಹ ವಿಚಿತ್ರ ಕೃತ್ಯಗಳಿಗೆ ಕಾರಣ ಏನು ಎಂಬ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆತನಿಂದ ಕದ್ದ ಒಳ ಉಡುಪುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
