ಗುಂಡಿಗಳನ್ನು ಮುಚ್ಚಿದ ಬಳಿಕ ಅಂತಹ ರಸ್ತೆಯನ್ನು ‘ಗುಂಡಿ ಮುಕ್ತ ರಸ್ತೆ’ ಎಂದು ಘೋಷಿಸುವಂತೆ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಚಿಕ್ಕಪೇಟೆ ವಿಭಾಗದ ರಸ್ತೆಗಳಲ್ಲಿ ಬೈಕ್‌ನಲ್ಲಿ ಸಂಚರಿಸಿ ಸಮಸ್ಯೆಗಳನ್ನು ಪರಿಶೀಲಿಸಿದರು
ಬೆಂಗಳೂರು : ಗುಂಡಿಗಳನ್ನು ಮುಚ್ಚಿದ ಬಳಿಕ ಅಂತಹ ರಸ್ತೆಯನ್ನು ‘ಗುಂಡಿ ಮುಕ್ತ ರಸ್ತೆ’ ಎಂದು ಘೋಷಿಸುವಂತೆ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಚಿಕ್ಕಪೇಟೆ ವಿಭಾಗದ ರಸ್ತೆಗಳಲ್ಲಿ ಸುಮಾರು 25 ಕಿ.ಮೀ. ಬೈಕ್‌ನಲ್ಲಿ ಸಂಚರಿಸಿ ರಸ್ತೆ ಗುಂಡಿಗಳು, ದುರಸ್ತಿ ಕಾಮಗಾರಿಗಳು ಹಾಗೂ ಇತರೆ ಸಮಸ್ಯೆಗಳನ್ನು ಪರಿಶೀಲಿಸಿದ ಅವರು, ಗುಂಡಿ ಮುಕ್ತವಾಗಿರುವ ರಸ್ತೆಗಳಲ್ಲಿ ಜಿಬ್ರಾ ಕ್ರಾಸಿಂಗ್, ಕ್ಯಾಟ್ ಐಸ್, ಲೈನ್ ಮಾರ್ಕಿಂಗ್, ಕರ್ಬ್‌ಗಳಿಗೆ ಬಣ್ಣ ಹಚ್ಚುವ ಮೂಲಕ ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು. ನಂತರವೇ ಗುಂಡಿ ಮುಕ್ತ ರಸ್ತೆ ಎಂದು ಘೋಷಿಸಬೇಕು ಎಂದು ತಿಳಿಸಿದರು.
ಚಿಕ್ಕಪೇಟೆ ವಿಭಾಗದ ಪ್ರಮುಖ ಜಂಕ್ಷನ್‌ಗಳನ್ನು ಬೇರೆ ಬೇರೆ ವಿನ್ಯಾಸದೊಂದಿಗೆ ಅಭಿವೃದ್ಧಿಪಡಿಸಬೇಕು. ಹೊಸೂರು ರಸ್ತೆಯ ಮೇಲ್ಮೈ ಹೆಚ್ಚು ಹಾಳಾಗಿದ್ದು, ತಕ್ಷಣವೇ ಡಾಂಬರೀಕರಣ ಮಾಡಬೇಕು. ರಸ್ತೆ ಬದಿಯ ತ್ಯಾಜ್ಯ ತೆರವುಗೊಳಿಸಬೇಕು. ಜೆ.ಸಿ. ರಸ್ತೆಯಲ್ಲಿನ ಪಾಲಿಕೆ ಜಾಗದ ಸುತ್ತ ತಂತಿ ಬೇಲಿ ಹಾಕಿ, ಜಾಗದ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ತಯಾರಿಸಬೇಕು ಎಂದು ಚೋಳನ್ ಸೂಚಿಸಿದರು.
ಎಲ್ಲಾ ಗುಂಡಿಗಳನ್ನು ಒಂದು ತಿಂಗಳಲ್ಲಿ ಮುಚ್ಚಿ: ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ
ಬೆಂಗಳೂರು : ಮುಂದಿನ ಒಂದು ತಿಂಗಳೊಳಗೆ ನಗರದ ಎಲ್ಲ ಗುಂಡಿಗಳನ್ನು ಗುಣಮಟ್ಟ ಕಾಪಾಡಿಕೊಂಡು ಮುಚ್ಚಿ, ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಸಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವೈಟ್ ಟಾಪಿಂಗ್ ರಸ್ತೆ ಸರಿಯಾಗಿ ನಿರ್ವಹಿಸದ ಗುತ್ತಿಗೆದಾರರು ಹಾಗೂ ಎಂಜಿನಿಯರ್ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ.
ಅಧಿಕಾರಿಗಳೊಂದಿಗೆ ದಿಢೀರ್ ನಗರ ಪ್ರದಕ್ಷಿಣೆ ಕೈಗೊಂಡು ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ. ಪರಿಶೀಲನೆ ವೇಳೆ ರಸ್ತೆಯೊಂದರಲ್ಲಿ ಜಲ್ಲಿ ಮಾತ್ರ ಹಾಕಿ ಟಾರು ಹಾಕದೇ ಬಿಟ್ಟಿದ್ದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಒಬ್ಬರನ್ನು ಅಮಾನತು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ರಸ್ತೆ ಗುಂಡಿ ಹೀಗೆಯೇ ಉಳಿದರೆ ಸಂಬಂಧಿಸಿದ ಪಾಲಿಕೆ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
1 ಕಿ.ಮೀಗೆ 13 ಕೋಟಿ ರು. ಖರ್ಚು ಮಾಡಿ ವೈಟ್ ಟಾಪಿಂಗ್ ಮಾಡಿರುವ ಬಾಗಲೂರು ರಸ್ತೆಯಲ್ಲಿ ಗುಂಡಿ ಬಿದ್ದಿವೆ. ರಸ್ತೆಯನ್ನು ಸರಿಪಡಿಸಿ ಗುಣಮಟ್ಟ ಕಾಪಾಡುವಂತೆ ಗುತ್ತಿಗೆದಾರ ಇನಾಯತ್ ಎಂಬುವರಿಗೆ ಅಧಿಕಾರಿಗಳ ಮೂಲಕ ನಿರ್ದೇಶನ ನೀಡಲಾಗಿದೆ. ನಗರದಲ್ಲಿ ಗುಂಡಿಗಳು ಇಲ್ಲ ಎನ್ನುವುದಿಲ್ಲ. ಆದರೆ, ಬಿಜೆಪಿಯವರ ಅವಧಿಯಲ್ಲಿ ಗುಂಡಿಗಳನ್ನು ಮುಚ್ಟಿಲ್ಲ. ಅವರು ಮುಚ್ಚಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. 14 ಸಾವಿರ ಗುಂಡಿಗಳ ಪೈಕಿ ಇನ್ನೂ ನಾಲ್ಕು ಸಾವಿರ ಉಳಿದಿವೆ. ಪ್ರತಿ ಮಳೆಗಾಲದಲ್ಲೂ ಗುಂಡಿಗಳು ಆಗುತ್ತವೆ. ಆದರೂ, ಸೂಕ್ತ ರೀತಿಯಲ್ಲಿ ಮುಚ್ಚುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.
