ಬೆಂಗಳೂರಿನ ಹೆಬ್ಬಗೋಡಿಯಲ್ಲಿ ನಕಲಿ ಆಧಾರ್ ಮತ್ತು ಮಾರ್ಕ್ಸ್ ಕಾರ್ಡ್‌ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. "ಗುರುದತ್ತ ಸೈಬರ್ ಸೆಂಟರ್" ಹೆಸರಿನಲ್ಲಿ ಈ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.  

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಕಲಿ ದಾಖಲೆಗಳ ಮಾರಾಟ ಜಾಲ ಬಯಲಾಗಿದ್ದು, ಹೆಬ್ಬಗೋಡಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನಕಲಿ ಆಧಾರ್ ಕಾರ್ಡ್ ಹಾಗೂ ನಕಲಿ ಮಾರ್ಕ್ಸ್ ಕಾರ್ಡ್ ತಯಾರಿಸಿ ಮಾರಾಟ ಮಾಡುತ್ತಿದ್ದ ಈ ಗ್ಯಾಂಗ್ ಹಲವು ರಾಜ್ಯಗಳಲ್ಲಿ ದಾಖಲೆಗಳನ್ನು ಮಾರಾಟ ಮಾಡುತ್ತಿದ್ದ ಶಂಕೆ ವ್ಯಕ್ತವಾಗಿದೆ.

ಓಯೋ ರೂಮ್‌ಗಳಿಗೆ ನಕಲಿ ಆಧಾರ್, ಉದ್ಯೋಗಕ್ಕೆ ನಕಲಿ ಮಾರ್ಕ್ಸ್ ಕಾರ್ಡ್!

ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆ ಪ್ರಕಾರ, ಓಯೋ ರೂಮ್‌ಗಳಲ್ಲಿ ತಂಗಲು ಬೇಕಾದ ಗುರುತಿನ ಚೀಟಿ ಹಾಗೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತಾ ಪ್ರಮಾಣ ಪತ್ರಗಳನ್ನು ನಕಲಿ ಮಾಡಿ ನೀಡಲಾಗುತ್ತಿತ್ತು. ಅನೇಕರು ಈ ಸೇವೆಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಯಶವಂತ್ ಮತ್ತು ರಘುವೀರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ಹೆಬ್ಬಗೋಡಿಯಲ್ಲಿ "ಗುರುದತ್ತ ಸೈಬರ್ ಸೆಂಟರ್" ಎಂಬ ಹೆಸರಿನಲ್ಲಿ ಕೇಂದ್ರವನ್ನು ನಡೆಸುತ್ತಿದ್ದರು. ಸೈಬರ್ ಸೆಂಟರ್ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರೆಂಬುದು ಪತ್ತೆಯಾಗಿದೆ.

ಮಾರಾಟದ ದರಗಳು

  • ಒಂದು ನಕಲಿ SSLC ಮಾರ್ಕ್ಸ್ ಕಾರ್ಡ್: ₹5,000 ರಿಂದ ₹30,000
  • ಒಂದು ನಕಲಿ ಆಧಾರ್ ಕಾರ್ಡ್: ₹2,000 ರಿಂದ ₹10,000

ವಶಪಡಿಸಿಕೊಂಡ ದಾಖಲೆಗಳು

ಪೊಲೀಸರು ದಾಳಿ ನಡೆಸಿ ಎಂಟು ನಕಲಿ ಮಾರ್ಕ್ಸ್ ಕಾರ್ಡ್‌ಗಳು, ಏಳು ನಕಲಿ ಆಧಾರ್ ಕಾರ್ಡ್‌ಗಳು ಹಾಗೂ ನಕಲಿ ಮಾಡಲು ಬಳಸುತ್ತಿದ್ದ ಸಿಬಿಯು ಮತ್ತು ಕಂಪ್ಯೂಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಹಲವರಿಗೆ ನಕಲಿ ದಾಖಲೆ ನೀಡಿರುವ ಶಂಕೆ

ಬಂಧಿತರ ಮೂಲಕ ಈಗಾಗಲೇ ಹಲವರಿಗೆ ನಕಲಿ ದಾಖಲೆಗಳನ್ನು ಮಾಡಿಕೊಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಪೊಲೀಸ್ ಪ್ರಕರಣ ದಾಖಲು

ಈ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಮುಂದುವರಿದಿದೆ. ಗ್ಯಾಂಗ್‌ಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.