ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಬಗ್ಗೆ ಅನಾಮಿಕ ದೂರು ಬಂದ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ಚುರುಕುಗೊಂಡಿದೆ. ದೂರುದಾರರ ಹೇಳಿಕೆಗಳು ಮತ್ತು ಸ್ಥಳೀಯರ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಪೊಲೀಸ್ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಬೆಂಗಳೂರು (ಆ.19): ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂದು ದೂರು ನೀಡಿದ್ದ ಅನಾಮಿಕ ವ್ಯಕ್ತಿಯ ಹೇಳಿಕೆಗಳಲ್ಲಿನ ವೈರುಧ್ಯಗಳನ್ನು ಎಸ್‌ಐಟಿ (ವಿಶೇಷ ತನಿಖಾ ತಂಡ) ಪತ್ತೆಹಚ್ಚಲು ಮುಂದಾಗಿದೆ. ಈ ಅನಾಮಿಕ ದೂರುದಾರನ ಹೇಳಿಕೆಗಳನ್ನು ಸ್ಥಳೀಯ ಸಾಕ್ಷಿಗಳು, ಮಾಜಿ ಪೊಲೀಸ್ ಸಿಬ್ಬಂದಿ ಮತ್ತು ಹಿಂದಿನ ಪಂಚಾಯತ್ ಸಿಬ್ಬಂದಿಯ ಹೇಳಿಕೆಗಳೊಂದಿಗೆ ತಾಳೆ ನೋಡಲಾಗುತ್ತಿದೆ.
ಏಕರೂಪತೆ ಇಲ್ಲದ ಹೇಳಿಕೆಗಳು: ನೇತ್ರಾವತಿ ಸ್ನಾನಘಟ್ಟದಲ್ಲಿ 1995 ರಿಂದ 2014 ರವರೆಗೆ ಕೆಲಸ ಮಾಡಿದ್ದ ಮಾಜಿ ನೌಕರರನ್ನು ಎಸ್‌ಐಟಿ ವಿಚಾರಣೆ ನಡೆಸಿದೆ. ಈ ಸಂದರ್ಭದಲ್ಲಿ, ಕೆಲವು ನೌಕರರು ಆತ್ಮಹತ್ಯೆ ಮತ್ತು ಅಸಹಜ ಸಾವುಗಳ ಶವಗಳನ್ನು ಹೂತುಹಾಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇವರ ಹೇಳಿಕೆಗಳನ್ನು ಅನಾಮಿಕ ದೂರುದಾರನ ಹೇಳಿಕೆಗಳೊಂದಿಗೆ ತಾಳೆ ನೋಡಿದಾಗ, ಹಲವು ವ್ಯತ್ಯಾಸಗಳು ಕಂಡುಬಂದಿವೆ. ಈ ವೈರುಧ್ಯಗಳನ್ನು ಲಿಖಿತವಾಗಿ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ.
ಪೊಲೀಸ್ ದಾಖಲೆಗಳ ಪರಿಶೀಲನೆ: ಅನಾಮಿಕ ದೂರುದಾರ ಹೇಳಿದಂತೆ ಯಾವುದೇ ಕೊಲೆಗಳು ನಡೆದಿವೆಯೇ ಅಥವಾ ಪೊಲೀಸ್ ದಾಖಲೆಗಳಲ್ಲಿ ಈ ಪ್ರಕರಣಗಳು ಸೇರ್ಪಡೆಯಾಗಿದೆಯೇ ಎಂದು ಎಸ್‌ಐಟಿ ಪರಿಶೀಲನೆ ನಡೆಸುತ್ತಿದೆ. ಸಾಕ್ಷಿದಾರರು ನೀಡಿದ ಮಾಹಿತಿ ಮತ್ತು ಹಳೆಯ ಪೊಲೀಸ್ ದಾಖಲೆಗಳ ನಡುವಿನ ಹೋಲಿಕೆಯನ್ನೂ ಎಸ್‌ಐಟಿ ತಂಡ ಪರಿಶೀಲಿಸುತ್ತಿದೆ. ಈ ಮೂಲಕ, ದೂರುದಾರರ ಹಾಗೂ ಸಾಕ್ಷಿಗಳ ಹೇಳಿಕೆಗಳಲ್ಲಿನ ವ್ಯತ್ಯಾಸಗಳನ್ನು ಪತ್ತೆ ಹಚ್ಚಿ, ಪ್ರಕರಣದ ಸತ್ಯಾಂಶವನ್ನು ಹೊರಗೆ ತರಲು ಎಸ್‌ಐಟಿ ಕಾರ್ಯಪ್ರವೃತ್ತವಾಗಿದೆ.
ದೂರುದಾರ ಜಯಂತ್ ಅವರಿಂದ ತನಿಖಾ ಪ್ರಗತಿ ಪರಿಶೀಲನೆ
ಧರ್ಮಸ್ಥಳದಲ್ಲಿ 15 ವರ್ಷಗಳ ಹಿಂದೆ ನಡೆದ ಬಾಲಕಿಯ ಅನುಮಾನಾಸ್ಪದ ಸಾವಿನ ಆರೋಪದ ಪ್ರಕರಣದ ತನಿಖೆಯ ಪ್ರಗತಿಯನ್ನು ಪರಿಶೀಲಿಸಲು ದೂರುದಾರ ಜಯಂತ್ ಅವರು ಬೆಳ್ತಂಗಡಿ ಎಸ್‌ಐಟಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಜಯಂತ್, ಎಸ್‌ಐಟಿ ಅಧಿಕಾರಿಗಳು ಉತ್ತಮ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ತನಿಖೆಯ ಮುಂದಿನ ಹಂತಗಳ ಬಗ್ಗೆ ಮಾಹಿತಿ ನೀಡುವಾಗ ತಿಳಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದು ಅವರು ವಿವರಿಸಿದರು.
ಪ್ರಕರಣದ ಹಿನ್ನೆಲೆ: ಈ ಹಿಂದೆ ಜಯಂತ್ ಅವರು ಒಬ್ಬ ಪೊಲೀಸ್ ಅಧಿಕಾರಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 2002-03ರ ಅವಧಿಯಲ್ಲಿ ರಾಜ್ಯ ಹೆದ್ದಾರಿ 37ರ ಅರಣ್ಯದಲ್ಲಿ ಅಪ್ರಾಪ್ತ ಬಾಲಕಿಯನ್ನು ಕಾನೂನು ಪ್ರಕ್ರಿಯೆಗಳಿಲ್ಲದೆ ಹೂತುಹಾಕಲಾಗಿದೆ ಎಂದು ಅವರು ಆರೋಪಿಸಿದ್ದರು. ಈ ಘಟನೆಯಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಯಂತ್ ಹೇಳಿಕೊಂಡಿದ್ದರು. ಸದ್ಯ ಎಸ್‌ಐಟಿ ತಂಡ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
