Congress Leader Vinay kumar Sorake: ಧರ್ಮಸ್ಥಳ ಪ್ರಕರಣದಲ್ಲಿ ಕಾಣದ ಕೈಯೊಂದು ಒಂದು ಕಡೆ ಚಿವುಟುವುದು, ಮತ್ತೊಂದು ಕಡೆ ತೂಗುವ ಕೆಲಸ ಮಾಡುತ್ತಿದ್ದಾರೆ ಎಂದು ವಿನಯ್ ಕುಮಾರ್ ಸೊರಕೆ ಗಂಭೀರ ಆರೋಪ ಮಾಡಿದ್ದಾರೆ.

ವಿಜಯಪುರ: ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ವಿನಯ್‌ ಕುಮಾರ್ ಸೊರಕೆ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಗಂಭೀರ ಆರೋಪವನ್ನು ಮಾಡಿರುವ ವಿನಯ್ ಕುಮಾರ್ ಸೊರಕೆ, ಬಂಧನಕ್ಕೊಳಗಾಗಿರುವ ಮಹೇಶ್ ಶೆಟ್ಟಿ ತಿಮರೋಡಿ ಯಾರು? ಈ ವ್ಯಕ್ತಿ ಯಾವ ಮೂಲದವರು? ತಿಮರೋಡಿಗೆ ಪ್ರಚೋದನೆ ಕೊಡುತ್ತಿರೋರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಆರ್‌ಎಸ್‌ಎಸ್ ಮುಖಂಡರಾಗಿರುವ ಪ್ರಭಾಕರ್ ಭಟ್ ಅವರು ಒಂದು ಕಡೆ ಚಿವುಟುವುದು, ಮತ್ತೊಂದು ಕಡೆ ತೂಗುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ವಿನಯ್ ಕುಮಾರ್ ಸೊರಕೆ ಗಂಭೀರವಾದ ಆರೋಪವನ್ನು ಮಾಡಿದ್ದಾರೆ.

ಅಲ್ಲಿ ಪ್ರಭಾಕರ್ ಭಟ್ರು ಇರಲಿಲ್ಲ ಯಾಕೆ? ಸೊರಕೆ ಪ್ರಶ್ನೆ

ರಾಜ್ಯದ ಕರಾವಳಿ ಭಾಗದಲ್ಲಿ ಯಾವುದೇ ಧಾರ್ಮಿಕ ಉದ್ರೇಕಕಾರಿ ಘಟನೆಗಳು ನಡೆದ್ರೆ ಅಲ್ಲಿ ಸಂಘ ಪರಿವಾರದ ಪ್ರಭಾಕರ್ ಭಟ್‌ ಅವರು ಕಾಣಿಸಿಕೊಳ್ಳುತ್ತಾರೆ. ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ 400 ಕಾರ್‌ ಮೂಲಕ ಬಂದ್ರೆ ಅಲ್ಲಿ ಪ್ರಭಾಕರ್ ಭಟ್ರು ಇರಲಿಲ್ಲ ಯಾಕೆ ಎಂದು ವಿನಯ್ ಕುಮಾರ್ ಸೊರಕೆ ಪ್ರಶ್ನೆ ಮಾಡಿದರು.

ಎಸ್‌ಐಟಿ ರಚನೆಯನ್ನು ಹೆಗ್ಗಡೆಯವರು ಸ್ವಾಗತಿಸಿದ್ದಾರೆ

ಮುಂದುವರಿದು ಮಾತನಾಡಿದ ವಿನಯ್ ಕುಮಾರ್ ಸೊರಕೆ, ಧರ್ಮಸ್ಥಳ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ, ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿ ಅವರಿಗೆ ಯಾವುದೇ ಹಿತಾಸಕ್ತಿ ಇರಲಿಲ್ಲ. ನ್ಯಾಯಾಲಯದ ಆದೇಶದ ಮೇರೆಗೆ ಎಸ್‌ಐಟಿ ರಚನೆಯಾಗಿದ್ದು, ತನಿಖೆ ನಡೆಯುತ್ತಿದೆ. ವೀರೇಂದ್ರ ಹೆಗ್ಗಡೆ ಅವರು ಸಹ ಎಸ್‌ಐಟಿ ರಚನೆಯನ್ನು ಸ್ವಾಗತಿಸಿದ್ದಾರೆ. ಶೀಘ್ರವೇ ಪ್ರಕರಣದ ವಾಸ್ತವಾಂಶ ಹೊರಬರಲಿದೆ ಎಂದು ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಸೊರಕೆ ಹೇಳಿದರು.

ಎಸ್‌ಐಟಿ ತನಿಖೆ ನಡೆದಿದ್ದು, ಎಫ್‌ಎಸ್ಎಲ್ ರಿಪೋರ್ಟ್ ಬರಬೇಕಿದೆ. ವರದಿ ಬಂದ ಕೂಡಲೇ ಬಿಡುಗಡೆ ಮಾಡೋದಾಗಿ ಗೃಹ ಸಚಿವರಾದ ಪರಮೇಶ್ವರ್ ಹೇಳಿದ್ದಾರೆ. ಧರ್ಮಸ್ಥಳಕ್ಕೆ ಲಕ್ಷಾಂತರ ಜನರು ಬರುತ್ತಾರೆ. ಕೆಲವರು ಆತ್ಮಹ*ತ್ಯೆ ಮಾಡಿಕೊಳ್ಳಲೆಂದೇ ಬರುತ್ತಾರೆ. ಕೆಲ ಪ್ರೇಮಿಗಳು ಸಹ ಆಗಮಿಸಿ ಆತ್ಮಹ*ತ್ಯೆ ಮಾಡಿಕೊಳ್ಳುತ್ತಾರೆ. ಆದರೆ ನನಗೆ ಯಾವುದರ ಬಗ್ಗೆ ವಾಸ್ತವ ವಿಚಾರ ಗೊತ್ತಿಲ್ಲ. ಎಫ್‌ಎಸ್‌ಎಲ್ ವರದಿಗೂ ಮುನ್ನ ನಾನು ಯಾವುದೇ ಹೇಳಿಕೆಯನ್ನು ನೀಡಲ್ಲ. ಮಹೇಶ್ ಶೆಟ್ಟಿ ತಿಮರೋಡಿಯನ್ನು ಯಾಕೆ ಬಂಧನ ಮಾಡಲಾಗಿದೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಬಿ.ಎಲ್. ಸಂತೋಷ್ ಯಾವ ಪಕ್ಷ? ಬಂಧನ ಮಾಡಲು ಆದೇಶ ಮಾಡಿರೋದು ಯಾವ ಪಕ್ಷ ? ಎಲ್ಲ ಪಾರದರ್ಶಕವಾಗಿ ಉಂಟು ಎಂದು ತಿಳಿಸಿದರು.

ಶಾಸಕ ಯತ್ನಾಳ್ ವಿರುದ್ದ ಕಿಡಿ

ಇದೇ ವೇಳೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿನಯ್ ಕುಮಾರ್ ಸೊರಕೆ, ಕೋಮು ಪ್ರಚೋದನೆ ಮಾಡುವ ವಿಷಯಗಳಲ್ಲಿ ಮತ್ತೊಬ್ಬ ಪ್ರಮೋದ್ ಮುತಾಲಿಕ್ ಆಗಲು ಯತ್ನಾಳ್ ಹೋಗುತ್ತಿದ್ದಾರೆ. ಯತ್ನಾಳ್ ಅವರ ಇಂತಹ ಯಾವುದೇ ಪ್ರಯೋಗಗಳು ರಾಜ್ಯದಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.

ಎಲ್ಲಾ ಜಿಲ್ಲೆಗಳಲ್ಲಿಯೂ ಪಕ್ಷದ ಸಂಘಟನೆ ಕೆಲಸ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯಿಂದ ಪ್ರವಾಸ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಬಾಂಬೆ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇವೆ. ಕೆಳ ಹಂತದವರೆಗೂ ಪಕ್ಷದ ಸಂಘಟನೆ ಮಾಡಲಾಗುತ್ತದೆ. ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಜಾಗೃತಿಗೊಳಿಸುತ್ತೇವೆ ಎಂದು ತಿಳಿಸಿದರು. ಮತ ಕಳ್ಳತನ ಕುರಿತು ಹೋರಾಟ ಮಾಡುತ್ತಿರೋ ರಾಹುಲ್ ಗಾಂಧಿಯವರಿಗೆ ಬೆಂಬಲ ಮಾಡುತ್ತೇವೆ. ಮತಗಳ ಕಳ್ಳತನ ಕುರಿತು ವಾಸ್ತವಾಂಶವನ್ನು ಪಕ್ಷದ ಮುಖಂಡರು ಕಾರ್ಯಕರ್ತರಡಿಯಲ್ಲಿ ಜನರಲ್ಲಿ ಮುಟ್ಟಿಸೋ ಕೆಲಸ ಮಾಡುತ್ತೇವೆ. ತಾ.ಪಂ ಮತ್ತು ಜಿ.ಪಂ. ಚುನಾವಣೆ ಹಾಗೂ ಗ್ರಾ.ಪಂ. ಚುನಾವಣೆಗಳು ಬರುತ್ತಿವೆ. ಸರ್ಕಾರದ ಕಾರ್ಯಕ್ರಮಗಳನ್ನು ಪ್ರಚಾರ ಸಮಿತಿಯಿಂದ ಪ್ರಚಾರಪಡಿಸುತ್ತೇವೆ ಎಂದರು.

ರಾಹುಲ್ ಗಾಂಧಿ ಮತಗಳ್ಳತನದ ಆರೋಪ

ಗ್ಯಾರಂಟಿ ಅನುಷ್ಟಾನ ಸಮಿತಿಯೊಂದಿಗೆ ಪಂಚಾಯತಿ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಸಮಾವೇಶ ಮಾಡಲಿದ್ದೇವೆ. ಮೈಸೂರಿನಲ್ಲಿ ಗ್ಯಾರಂಟಿ ಸಮಿತಿಯವರು ಮಾಡಿರೋ ರಥವನ್ನು ಎಲ್ಲಾ ಜಿಲ್ಲೆಗಳಲ್ಲಿ ಯಾತ್ರೆ ಮಾಡಲಿದ್ದಾರೆ. ಬಿಜೆಪಿಯವರು ಸುಳ್ಳು ಅಪಾದನೆಗಳ ವಿರುದ್ಧ ಸತ್ಯಾಂಶ ಜನರಿಗೆ ತಿಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಮತಗಳ ಕಳ್ಳತನ ಆರೋಪ ಬಗ್ಗೆ ಎಲ್ಲಾ ಸಾಕ್ಷಿಗಳೊಂದಿಗೆ ರಾಹುಲ್ ಗಾಂಧಿಯವರೇ ಹೇಳಿದ್ದಾರೆ. ಮತಗಳ್ಳತನ ಕುರಿತು ಸ್ವತಃ ಸುಪ್ರೀಂ ಕೋರ್ಟ್ ವಿಚಾರಣೆ ಮಾಡುತ್ತಿದೆ. 65 ಲಕ್ಷ ಮತಗಳನ್ನು ಯಾರದ್ದು ತೆಗೆದಿದ್ದೀರಿ ಎಂದು ಮಾಹಿತಿ ಕೇಳಿದೆ. ಮತಗಳ್ಳತನ ಬೆಂಗಳೂರಿಗೆ ಮಾತ್ರ ಸಿಮೀತವಾಗಿಲ್ಲಾ ಎಲ್ಲಾ ಕಡೆಗೂ ಆಗಿರಬಹುದು ಎಂದು ವಿನಯ್ ಕುಮಾರ್ ಸೊರಕೆ ಅನುಮಾನ ವ್ಯಕ್ತಪಡಿಸಿದರು.