ಚಾಮರಾಜನಗರದಲ್ಲಿ ಹೃದಯ ಸಮಸ್ಯೆಯಿಂದ ಬನ್ನಿತಾಳಪುರದಲ್ಲಿ 6 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಕೇರಳದ ಪುಲುಪಳ್ಳಿ ಶಾಲೆಗೆ ತಾಯಿ ಬಿಟ್ಟು ಬಂದ ಮರಿಯಾನೆಯನ್ನು ಅರಣ್ಯ ಇಲಾಖೆ ರಕ್ಷಿಸಿದೆ. ಮಕ್ಕಳು ಆನೆ ಕಂಡು ಸಂಭ್ರಮಿಸಿದರು. ಅಧಿಕಾರಿಗಳು ಮರಿಯಾನೆಯನ್ನು ತಾಯಿಯೊಂದಿಗೆ ಸೇರಿಸಲು ಯತ್ನಿಸುತ್ತಿದ್ದಾರೆ.

ಚಾಮರಾಜನಗರ (ಆ.19): ಜಿಲ್ಲೆಯಲ್ಲಿ ಇಂದು ಎರಡು ವಿಭಿನ್ನ ಘಟನೆಗಳು ನಡೆದಿವೆ. ಒಂದು ಕಡೆ ಹೃದಯ ಸಂಬಂಧಿ ಸಮಸ್ಯೆಯಿಂದ ಶಾಲಾ ವಿದ್ಯಾರ್ಥಿಯೊಬ್ಬ ಕುಸಿದುಬಿದ್ದು ಮೃತಪಟ್ಟರೆ, ಮತ್ತೊಂದು ಕಡೆ ಸರ್ಕಾರಿ ಶಾಲೆಗೆ ಬಂದ ಮರಿಯಾನೆಯನ್ನು ರಕ್ಷಿಸಲಾಗಿದೆ.

ಲೋ ಬಿಪಿಯಿಂದ ಶಾಲಾ ವಿದ್ಯಾರ್ಥಿ ಸಾವು

ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದಲ್ಲಿ ಲೋ ಬಿಪಿಯಿಂದಾಗಿ 6 ವರ್ಷದ ಬಾಲಕ ಆರ್ಯ ಮೃತಪಟ್ಟಿದ್ದಾನೆ. ಒಂದನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಆರೋಗ್ಯದಲ್ಲಿ ಏರುಪೇರಾದ ಕೂಡಲೇ ಆತನನ್ನು ಗುಂಡ್ಲುಪೇಟೆಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ. ಈ ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಸರ್ಕಾರಿ ಶಾಲೆಗೆ ಬಂದ ಮರಿಯಾನೆ, ಮಕ್ಕಳಿಗೆ ಸಂತಸ

ಗುಂಡ್ಲುಪೇಟೆ ಗಡಿಭಾಗವಾದ ಕೇರಳದ ಸುಲ್ತಾನ್ ಬತ್ತೇರಿ ತಾಲ್ಲೂಕಿನ ಪುಲುಪಳ್ಳಿ ಗ್ರಾಮದಲ್ಲಿ, ಮಳೆಯಿಂದಾಗಿ ತಾಯಿಯಿಂದ ಬೇರ್ಪಟ್ಟ ಮರಿಯಾನೆಯೊಂದು ಸರ್ಕಾರಿ ಶಾಲೆಗೆ ಬಂದಿದೆ. ಶಾಲೆಗೆ ಅನಿರೀಕ್ಷಿತವಾಗಿ ಬಂದ ಆನೆಯನ್ನು ಕಂಡು ಮಕ್ಕಳು ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಹಿತಿ ತಿಳಿದ ಕೂಡಲೇ ಕೇರಳ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಮರಿಯಾನೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸದ್ಯ, ಅರಣ್ಯ ಇಲಾಖೆ ಸಿಬ್ಬಂದಿ ಮರಿಯಾನೆಯನ್ನು ಅದರ ತಾಯಿಯೊಂದಿಗೆ ಮತ್ತೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಘಟನೆ ಮಕ್ಕಳಲ್ಲಿ ಅಚ್ಚರಿ ಮತ್ತು ಸಂತಸ ತಂದರೆ, ಅರಣ್ಯ ಇಲಾಖೆ ಸಿಬ್ಬಂದಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.