ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರಾದ ರಾಜೀವ್ ಕುಲಾಲ್ ಅವರ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಉಡುಪಿ : ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ನಡೆಸಿದ ಆರೋಪದ ಮೇಲೆ ಈ ಪ್ರಕರಣ ದಾಖಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarody) ಅವರು ತಮ್ಮ ಫೇಸ್ಬುಕ್ ಪೇಜ್‌ನಲ್ಲಿ ಬಿ.ಎಲ್. ಸಂತೋಷ್ ಅವರ ತೇಜೋವಧೆ ಮಾಡುವಂತಹ ಪೋಸ್ಟ್ ಹಾಕಿದ್ದಾರೆ ಎಂಬುದು ದೂರುದಾರರ ಆಕ್ಷೇಪ. ಅಲ್ಲದೆ, ಅವರು ಹಿಂದೂ ಧರ್ಮದ ನಾಯಕರ ಬಗ್ಗೆ ಅವಹೇಳನಕಾರಿ ಶಬ್ದಗಳನ್ನು ಬಳಸಿಕೊಂಡು, ಧರ್ಮ ಮತ್ತು ಸಮುದಾಯಗಳ ನಡುವೆ ವೈಮನಸ್ಸು ಹುಟ್ಟಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೂಡ ದಾಖಲಾಗಿದೆ.
ಯಾರು ದೂರು ನೀಡಿದ್ದಾರೆ?
ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ರಾಜೀವ್ ಕುಲಾಲ್ ಅವರು ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದು, ಆ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ US 196(1), 352, 353(2), BNS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಕೈಗೊಂಡ ಕ್ರಮ
ದೂರು ಸ್ವೀಕರಿಸಿದ ಬಳಿಕ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯ ಶಬ್ದಗಳು ಮತ್ತು ಸಮುದಾಯ ವಿರೋಧಿ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ, ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಶಬ್ದ ಬಳಸಿ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿಗೆ ಕಾನೂನು ಕಂಟಕ ಎದುರಾಗಿದೆ.
