ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಬಿಜೆಪಿ ನಾಯಕರು ಧರ್ಮಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಯೂಟ್ಯೂಬರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ.
ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಬಿಜಪಿ ಆರೋಪ ಮಾಡಿದೆ. ಈ ಸಂಬಂಧ ಧರ್ಮಸ್ಥಳ ಪರವಾಗಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ ನಿಯೋಗ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡರು. ಈ ವೇಳೆ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ವೇದವ್ಯಾಸ ಕಾಮತ್, ಗುರುರಾಜ್ ಗಂಟಹೊಳೆ, ಪ್ರತಾಪ್ ಸಿಂಹ ನಾಯಕ್, ಶಾಸಕ ಎಸ್ ಆರ್ ವಿಶ್ವನಾಥ್, ಶಾಸಕ ಹರೀಶ್ ಪೂಂಜಾ ಸೇರಿದಂತೆ ಹಲವಾರು ಬಿಜೆಪಿ ಶಾಸಕರು, ಪರಿಷತ್ ಸದಸ್ಯರಿದ್ದರು.
ತನಿಖೆಗೆ ಯಾರ ವಿರೋಧವೂ ಇಲ್ಲ
ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ಮಾತನಾಡಿದ ಶಾಸಕ ಎಸ್‌ಆರ್ ವಿಶ್ವನಾಥ್, ನಾಳೆ ಸದಸನದಲ್ಲಿ ಸರ್ಕಾರದ ಉತ್ತರವನ್ನು ಎದುರು ನೋಡುತ್ತಿದ್ದೇವೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡೋದನ್ನು ನಾವು ಸಹಿಸಲ್ಲ. ತನಿಖೆ ನಡೆಯುವುದಕ್ಕೆ ಯಾರ ವಿರೋಧವೂ ಇಲ್ಲ. ನಿನ್ನೆ ಖಾವಂದರನ್ನು ಭೇಟಿಯಾದಾಗ್ಲೂ ಕೂಡ ಖಾವಂದರು ತನಿಖೆ ನಡೆಯಲಿ ಅಂತ ಹೇಳಿದ್ದಾರೆ. ಆದರೆ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಯುತ್ತಿರುವುದಕ್ಕೆ ನೊಂದುಕೊಂಡರು. ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಯುಟ್ಯೂಬರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಸಿದ್ಧತೆ
ಅನಾಮಿಕನನ್ನು ಮೊದಲು ತನಿಖೆಗೆ ಒಳಪಡಿಸಬೇಕಾಗಿತ್ತು. ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದಂತೆ ಎರಡು ಎಸ್‌ಐಟಿ ತಂಡಗಳ ರಚನೆಯಾಗಬೇಕು. ಆಗ ಅನಾಮಿಕನ ಹಿಂದೆ ಯಾರಿದ್ದಾರೆ ಷಡ್ಯಂತರ ಯಾರು ನಡೆಸುತ್ತಿದ್ದಾರೆ ಅಂತ ಹೊರಬರುತ್ತದೆ. ಆ ಯೂಟ್ಯೂಬರ್ ವಿರುದ್ಧ ನಾಳೆ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇವೆ ಎಂದು ಎಸ್.ಆರ್.ವಿಶ್ವನಾಥ್ ಮಾಹಿತಿ ಮಂಡಿಸಿದರು.
ನಮ್ಮ ಧರ್ಮ, ನಮ್ಮ ಹಕ್ಕು , ಶಿಕ್ಷಿಸಿ ಶಿಕ್ಷಿಸಿ ಹಿಂದೂ ವಿರೋಧಗಳನ್ನು ಶಿಕ್ಷಿಸಿ ಎನ್ನುವ ಭಿತ್ತಿ ಪತ್ರಗಳನ್ನು ಹಿಡಿದು ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಯ ಮುಖಂಡರು ಘೋಷಣೆ ಕೂಗಿದರು. ದೇವಸ್ಥಾನ ಆವರಣದಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದ್ದಾರೆ.
