Witness Recounts Sanvi Heartbreaking Last Word ಬೀದರ್‌ನಲ್ಲಿ 7 ವರ್ಷದ ಸಾನ್ವಿಳ ಸಾವು ಆಕಸ್ಮಿಕ ಎಂದು ಭಾವಿಸಲಾಗಿತ್ತು, ಆದರೆ ಇದು ಮಲತಾಯಿ ರಾಧಾ ನಡೆಸಿದ ಕೊಲೆ ಎಂದು ಸಿಸಿಟಿವಿ ದೃಶ್ಯಗಳಿಂದ ಬಯಲಾಗಿದೆ. 

ಬೆಂಗಳೂರು (ಸೆ.16): ಬೀದರ್‌ನಲ್ಲಿ ನಡೆದ ದಾರುಣ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್ 27 ರಂದು ಗಣೇಶ ಹಬ್ಬದ ದಿನ 7 ವರ್ಷದ ಸಾನ್ವಿ ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ನಂಬಲಾಗಿತ್ತು. ಆದರೆ, ನೆರೆಯ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸಾನ್ವಿಯನ್ನು ಆಕೆಯ ಮಲತಾಯಿ ರಾಧಾಳೇ ಕೊಲೆ ಮಾಡಿರುವುದು ಸ್ಪಷ್ಟವಾಗಿದೆ. ಆಸ್ತಿ ಮತ್ತು ಹಣದ ವ್ಯಾಮೋಹಕ್ಕೆ ಬಿದ್ದ ರಾಧಾ, ತನ್ನ ಮಲಮಗಳಾದ ಸಾನ್ವಿಯನ್ನು ಮೂರನೇ ಮಹಡಿಯಿಂದ ತಳ್ಳಿ ಹತ್ಯೆ ಮಾಡಿದ್ದಾಳೆ. ಈ ಕ್ರೂರ ಕೃತ್ಯವು ಸಿಸಿಟಿವಿ ದೃಶ್ಯಗಳಿಂದ ಬಹಿರಂಗಗೊಂಡಿದ್ದು, ಜನರು ವಿಡಿಯೋ ಜೋಡಿಯೇ ಆಘಾತಕ್ಕೆ ಈಡಾಗಿದ್ದಾರೆ.

ವೈರಲ್‌ ಆದ ಸಾನ್ವಿ ಸಹಾಯಕ್ಕೆ ಅಂಗಲಾಚಿದ ವಿಡಿಯೋ

ಇದರ ನಡುವೆ ಸಾನ್ವಿಯ ಕೊನೆಯ ಕ್ಷಣದ ಸಿಸಿಟಿವಿ ವಿಡಿಯೋ ಕೂಡ ಹೊರಬಂದಿದೆ. ಮೂರನೇ ಮಹಡಿಯಿಂದ ನೆಲಕ್ಕೆ ಬಿದ್ದರೂ ಆಕೆ ಬದುಕಿದ್ದಳು. ತಾನೇ ರೋಡ್‌ನವರೆಗೆ ನಡೆದುಕೊಂಡು ಬಂದು ಜನರ ಬಳಿ ನೆರವು ಕೇಳಿರುವ ವಿಡಿಯೋ ಕರುಳು ಹಿಂಡುವಂತಿದೆ. ಈ ನಡುವೆ ಆಕೆ ರೋಡ್‌ನ ಬಳಿ ಬಂದಾಗ, ರಸ್ತೆಯಲ್ಲಿ ಛತ್ರಿ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಬಳಿ ಸಹಾಯ ಕೇಳಿದ್ದಳು. ಅದೇ ವ್ಯಕ್ತಿ ಖಾಸಗಿ ಟಿವಿಯ ಜೊತೆ ಮಾತನಾಡಿದ್ದು, ಪುಟ್ಟ ಸಾನ್ವಿ ಹೇಳಿದ ಮಾತುಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಭೀಮರಾವ್‌ ಬಳತೇ ಅನ್ನೋ ವ್ಯಕ್ತಿ ಸಾನ್ವಿಯನ್ನು ಮೊದಲ ಬಾರಿಗೆ ನೋಡಿದ್ದರು. ಅವರು ಆಡಿದ ಮಾತುಗಳು ಇಲ್ಲಿವೆ.

ಆಗಸ್ಟ್‌ 27 ಗಣೇಶ್‌ ಚತುರ್ಥಿ ದಿವಸ. ಸಿಕ್ಕಾಪಟ್ಟೆ ಮಳೆ ಇತ್ತು. ನಾನು ನನ್ನ ಮನೆಯ ಕಡೆಗೆ ಬರುತ್ತಿದ್ದೆ. ಮನೆಯ ಪಕ್ಕದಲ್ಲಿ ಬಂದಾಗ ನಾನು ಆಕೆಯನ್ನು ನೋಡಿದೆ. ಆಕೆ ಎದ್ದು ಬಂದಿದ್ದನ್ನು ನಾನು ನೋಡಿಲ್ಲ. ಆದರೆ, ಅಲ್ಲಿ ನಿಂತಾಗ ನಾನು ಆಕೆಯನ್ನು ಕಂಡಿದ್ದೆ. ನನ್ನನ್ನು ನೋಡಿ 'ಅಂಕಲ್‌' ಎಂದಿದ್ದಳು. ಆಗ ನಾನು, 'ಯಾಕೆ ಪುಟ್ಟಾ ಅಲ್ಲಿಗೆ ಯಾಕೆ ಹೋಗಿದ್ಯಾ?' ಅಂತಾ ಕೇಳಿದೆ.

ನಾನು ಕೇಳಿದಾಗ ಆಕೆ ನಾನು ಮ್ಯಾಲ್ಗಡೆಯಿಂದ ಬಿದ್ದೀದೀನಿ ಅಂತಾ ಹಿಂದಿಯಲ್ಲಿ ಹೇಳ್ತು. 'ಮೇ ಊಪರ್‌ ಸೇ ಗಿರಾ' ಅಂತಾ ಹೇಳಿದ್ಲು. ನಾನು ಆಕೆಯ ಕೈಹಿಡಿದು ಈಚೆಗೆ ಕರೆದುಕೊಳ್ಳುವ ಹೊತ್ತಿನಲ್ಲಿ ಹೇಳಿದ್ಲು. ಕೈ ಕೊಟ್ಟಾಗ ನಾನು ಆಕೆಯನ್ನು ಈಚೆಗೆ ಕರೆದುಕೊಂಡು ಬಂದೆ. ಮೇಲಿಂದ ಬಿದ್ದೆ ಅಂದಾಗ, ಯಾರ್‌ ಮಗು ನೀನು? ಅಂತಾ ಕೇಳಿದೆ. ಅದೇ ಮನೆಯ ಹುಡುಗಿ ಅಂತಾ ನನಗೆ ಗೊತ್ತಿರಲಿಲ್ಲ. ಇದನ್ನ ಹೇಳಿದಾಗ ಆಕೆಯ ಅಪ್ಪನನ್ನ ಕರೀಬೇಕು ಅಂತಾ ನನ್ನ ಮಗನ ಕರೆದೆ. ಈ ವೇಳೆ ಯಾರೋ ಬಂದು ಆಕೆಯನ್ನ ಎತ್ತಿಕೊಂಡು ಹೋಗಿಬಿಟ್ರು. ನಾನೂ ಅವರ ಹಿಂದೆ ಓಡಿದೆ. ಮಗುವನ್ನ ಮೊದಲಿಗೆ ಹಾಸ್ಪಿಟಲ್‌ಗೆ ಕರೆದುಕೊಂಡು ಹೋಗ್ಬೇಕು ಅಂತಾ. ನನ್ನ ಗಾಡಿಯಲ್ಲೇ ಹಾಸ್ಪಿಟಲ್‌ಗೆ ಕರೆದುಕೊಂಡು ಹೋಗಿದ್ದೆ. ಅವರ ಅಜ್ಜ, ತಂದೆ, ಅಜ್ಜಿ ಅವರೆಲ್ಲರೂ ನನ್ನ ಜೊತೆ ಬಂದರು. ಹಾಸ್ಪಿಟಲ್‌ಗೆ ಅಡ್ಮಿಟ್‌ ಮಾಡಿ ನಾನು ವಾಪಾಸ್‌ ಬಂದಿದ್ದೆ.

ಹಾಸ್ಪಿಟಲ್‌ಗೆ ಹೋಗುವವರೆಗೂ ಮಗು ಬದುಕಿತ್ತು. ಮಗು ಬದುಕಿತ್ತು ಮಾತ್ರ ಅಲ್ಲ ಆಕೆ ಮಾತನಾಡ್ತಾ ಇದ್ಲು. ಆದರೆ, ಈಗ ಆಗಿರೋದು ಕೇಳಿ ಬಹಳ ದುಃಖ ಅನಿಸ್ತಿದೆ. ಹೀಗೆ ಆಗಬಾರದಿತ್ತು. 'ನಾನು ಬಿದ್ದೆ' ಅಂತಾ ಹೇಳಿದ್ದು ಬಿಟ್ರೆ ಆಕೆ ಬೇರೆ ಮಾತನಾಡ್ಲಿಲ್ಲ. ತುಂಬಾ ನರ್ವಸ್‌ ಆಗಿದ್ದಳು ಕೂಸು. ಪ್ರಜ್ಞೆ ಕೂಡ ಹೋಗುತ್ತಿತ್ತು. ತುಂಬಾ ಸುಸ್ತಾಗಿತ್ತು. ಆಮೇಲೆ ಅವರ ಅಜ್ಜಿಯೇ ಫೋನ್‌ಮಾಡಿ ಮಗು ಬದುಕಲಿಲ್ಲ ಅಂತಾ ಹೇಳಿದ್ರು. ನನಗೂ ಬೇಸರವಾಯ್ತು.

ಯಾವ ಮಗೂಗೂ ಕೂಡ ಹೀಗೆ ಆಗಬಾರದು. ಯಾರೇ ಮಾಡಿದ್ರು ಕೂಡ ಅದು ತಪ್ಪು.ಇದು ಒಳ್ಳೆ ಸ್ವಭಾವ ಅಲ್ಲ. ಇದು ಮಾನವ ಕುಲಕ್ಕೆ ಒಳ್ಳೆಯದಲ್ಲ. ಪಾಪ ಕೂಸಿಗೆ ಆಗಿದ್ದು ಕೇಳಿ ದುಃಖ ಆಗುತ್ತಿದೆ.

ನಾನು ಹೊರಗಡೆ ಹೋಗಿದ್ದೆ. ವಾಪಾಸ್‌ ಬರುವಾಗ ಜಸ್ಟ್‌ ಬಂದು ಆಕೆ ಅಲ್ಲಿ ನಿಂತಿದ್ದಳು. ಅಂಕಲ್‌ ಅಂತಾ ಆಕೆಯೇ ಕೈಕೊಟ್ಟಿದ್ದಳು. ನಾನು ಕೈ ಹಿಡಿದು ಈಚೆಗೆ ಕರೆದುಕೊಂಡೆ. ನಾನು ಬರೋದು 2-3 ನಿಮಿಷ ಲೇಟ್‌ ಆಗಿದ್ದರೆ, ಕೂಸು ಚರಂಡಿಯಲ್ಲಿ ಬಿದ್ದಿರುತ್ತಿದ್ದಳು. ಅದರಲ್ಲಿ ಹರಿದುಕೊಂಡು ಹೋಗ್ತಿದ್ದಳು. ಆ ಪರಿಸ್ಥಿತಿ ಅಲ್ಲಿತ್ತು. ದೇವರ ದಯೆ ಇದ್ದ ಕಾರಣಕ್ಕೆ ಆಕೆ ಈಚೆ ಬಂದುಬಿಟ್ಟಳು. ಆಮೇಲೇ ಏನೂ ಆಕೆ ಮಾತನಾಡಿಲ್ಲ.

ನ್ಯಾಯಾಂಗ ಬಂಧಕ್ಕೆ ಪಾಪಿ ರಾಧಾ: ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ಆರೋಪಿ ರಾಧಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಘಟನೆಯು ಆಸ್ತಿಗಾಗಿ ಸಂಬಂಧಗಳು ಯಾವ ಮಟ್ಟಕ್ಕೆ ಹದಗೆಡಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.