ಅಂಗನವಾಡಿ ಶಾಲೆ ಬಳಿ ಆಲದ ಮರ ಕುಸಿತ: ಗರ್ಭಿಣಿ ಸಾವು, 4 ಮಕ್ಕಳಿಗೆ ಗಾಯ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಆಲದ ಮರ ಕುಸಿದು ಐದು ತಿಂಗಳ ಗರ್ಭಿಣಿ ಮಹಿಳೆ ಸಾವಿಗೀಡಾಗಿದ್ದು, ಐದು ಮಕ್ಕಳು ಗಾಯಗೊಂಡಿದ್ದಾರೆ. ಡೊಮಗೇರಿ-ಕಿರವತ್ತಿಯಲ್ಲಿ ನಡೆದ ಈ ದುರ್ಘಟನೆಯಲ್ಲಿ ಮರ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಹೆಸ್ಕಾಂ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿದರು.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಡೊಮಗೇರಿ-ಕಿರವತ್ತಿಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಅಂಗನವಾಡಿಯಿಂದ ಮನೆಗೆ ಮರಳುತ್ತಿದ್ದಾಗ ಏಕಾಏಕಿ ಆಲದ ಮರ ಕುಸಿದು ಬಿದ್ದ ಪರಿಣಾಮ 5 ತಿಂಗಳ ಗರ್ಭಿಣಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 5 ಮಕ್ಕಳು ಸೇರಿದಂತೆ ಹಲವರಿಗೆ ಗಾಯಗಳಾಗಿವೆ.
ದುರಂತದ ವಿವರಗಳು
ಡೊಮಗೇರಿ-ಕಿರವತ್ತಿ ಗ್ರಾಮದ '28 ವರ್ಷದ ಸಾವಿತ್ರಿ ಬಾಬು ಖರಾತ್' ಎಂಬ ಗರ್ಭಿಣಿ ಅಂಗನವಾಡಿಯಲ್ಲಿದ್ದ ಕೆಲಸವನ್ನು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದರು. ಈ ವೇಳೆ ರಸ್ತೆಯ ಬದಿಯಲ್ಲಿದ್ದ ಹಳೆಯ ಆಲದ ಮರವೊಂದು ಇದ್ದಕ್ಕಿದ್ದಂತೆ ಅವರ ಮೇಲೆ ದೊಪ್ಪನೆ ಕುಸಿದು ಬಿದ್ದಿದೆ.
ಮರದಡಿ ಸಿಲುಕಿದ ಸಾವಿತ್ರಿ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾವಿತ್ರಿ ಅವರ ಮೇಲೆಯೇ ಮರದ ಕೊಂಬೆಯಿಂದ ಬಿದ್ದಿದ್ದು, ಅದರಡಿ ಸಿಲುಕಿ ಅಪ್ಪಚ್ಚಿ ಆಗಿದ್ದಾರೆ. ಇನ್ನು ಅವರ ಹೊಟ್ಟೆಯಲ್ಲಿದ್ದ ಮಗುವೂ ಕೂಡ ಸ್ಥಳದಲ್ಲಿಯೇ ಅಸುನೀಗಿದೆ.
ಗಾಯಾಳುಗಳು ಮತ್ತು ಪರಿಹಾರ ಕಾರ್ಯಗಳು:
ಸಾವಿತ್ರಿ ಅವರೊಂದಿಗೆ ಇದ್ದ ಇನ್ನೂ 4 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದ ಮೂವರು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರ ಗಾಯಗೊಂಡವರಲ್ಲಿ ಸ್ವಾತಿ ಬಾಬು ಖರಾತ್ (17), ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2), ಮತ್ತು ಶಾಂಭವಿ ಬಾಬು ಖರಾತ್ (4) ಸೇರಿದ್ದಾರೆ.
ಅವರನ್ನು ಕೂಡಲೇ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪ್ರಾಥಮಿಕ ಚಿಕಿತ್ಸೆಯ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಸಾನ್ವಿ ಬಾಬು ಕೊಕರೆ (5), ವಿನಯ ಲಕ್ಕು ಕೊಕರೆ (5) ಮತ್ತು ಅನುಶ್ರೀ ಮಾಂಬು ಕೊಕರೆ (5) ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಪಿಐ ರಮೇಶ್ ಹಾನಾಪುರ ಅವರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಸಿದ ಮರ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ಹೆಸ್ಕಾಂ ಸಿಬ್ಬಂದಿಯೂ ಸ್ಥಳಕ್ಕೆ ಧಾವಿಸಿ ತುರ್ತು ಕಾರ್ಯಚರಣೆ ನಡೆಸಿದರು. ಈ ದುರ್ಘಟನೆ ಇಡೀ ಗ್ರಾಮದಲ್ಲಿ ದುಃಖದ ವಾತಾವರಣವನ್ನು ಸೃಷ್ಟಿಸಿದೆ. ಅಧಿಕಾರಿಗಳು ಮೃತರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.