ಬಾಗಲಕೋಟೆಯ ಆಂಜನೇಯ ದೇವಸ್ಥಾನ: ಮಳೆಹನಿಗಳ ರೂಪದಲ್ಲಿ ಭಂಡಾರ ಬಿದ್ದಿದ್ದು, ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಹೇಳಿಕೆ ನೀಡಿದ ಅಜ್ಜಿ.

ಬಾಗಲಕೋಟೆ: ಆಂಜನೇಯ ದೇವಸ್ಥಾನದ ಪರಿಸರದಲ್ಲಿ ಭಂಡಾರದ ಮಳೆಯಾಗಿದೆ ಎಂದು ಹೆಗ್ಗರೂ ಗ್ರಾಮದ ಗ್ರಾಮಸ್ಥರು ಹೇಳುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೆಗ್ಗೂರು ಗ್ರಾಮದಲ್ಲಿ ಅಚ್ಚರಿ ವಿದ್ಯಮಾನಕ್ಕೆ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ. ಮಳೆಹನಿಗಳ ರೂಪದಲ್ಲಿ ದೇವಸ್ಥಾನದ ಆವರಣ ಸುತ್ತಲೂ ಭಂಡಾರ ಬಿದ್ದಿದೆ. ಇದನ್ನೇ ಗ್ರಾಮಸ್ಥರು ಭಂಡಾರದ ಮಳೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ವಿಷಯ ತಿಳಿದು ದೇವಾಲಯದತ್ತ ಆಗಮಿಸುತ್ತಿರೋ ಜನರು ಆವರಣದಲ್ಲಿ ಬಿದ್ದಿರೋ ಭಂಡಾರವನ್ನು ಹಣೆಗೆ ತಿಲಕವನ್ನಾಗಿ ಹಚ್ಚಿಕೊಳ್ಳುತ್ತಿದ್ದಾರೆ. ಕೆಲವರು ಈ ಭಂಡಾರವನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಿದ್ದಾರೆ.

ಭಂಡಾರದ ಮಳೆ ಬಗ್ಗೆ ದೇವಸ್ಥಾನ ಅರ್ಚಕ ಹೇಳಿದ್ದೇನು?

ಈ ಕುರಿತು ಮಾತನಾಡಿರುವ ದೇವಸ್ಥಾನದ ಅರ್ಚಕ, ಶುಕ್ರವಾರ ಸಂಜೆ 5ರ ವೇಳೆ ಗ್ರಾಮದಲ್ಲಿ ಮಳೆಯಾಗಿತ್ತು. ಇಂದು ಬೆಳಗ್ಗೆ ದೇವಸ್ಥಾನಕ್ಕೆ ಬಂದ ಯುವಕ, ಹನಿಗಳ ರೂಪದಲ್ಲಿ ಭಂಡಾರ ಬಿದ್ದಿರೋದನ್ನು ಗಮನಿಸಿದ್ದಾರೆ. ಕೂಡಲೇ ನನಗೆ ಮಾಹಿತಿ ನೀಡಿದರು. ಬಂದು ನೋಡಿದಾಗ ಮಳೆಹನಿ ರೂಪದಲ್ಲಿ ಭಂಡಾರ ಬಿದ್ದಿರೋದು ನನ್ನ ಗಮನಕ್ಕೂ ಬಂತು. ನಂತರ ಗ್ರಾಮದ ಹಿರಿಯರಿಗೂ ತಿಳಿಸಲಾಯ್ತು. ಇದೀಗ ಎಲ್ಲರೂ ದೇವಸ್ಥಾನದತ್ತ ಬರುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಸುತ್ತಲೂ ಭಂಡಾರ ಬಿದ್ದಿರೋದು ಭಯ ಆಗ್ತಿದೆ ಎಂದ ಮಹಿಳೆ

ಕಳೆದ 20-30 ವರ್ಷಗಳಿಂದ ಈ ಗ್ರಾಮದಲ್ಲಿದ್ದೇನೆ. ಈ ರೀತಿಯ ಭಂಡಾರ ಮಳೆ ನೋಡಿಯೂ ಇಲ್ಲ ಮತ್ತು ಕೇಳಿಯೂ ಇಲ್ಲ. ಸಂಜೆ ಊರಿನಲ್ಲಿ ಮಳೆಯಾಗಿತ್ತು. ಆವಾಗಲೇ ಈ ಭಂಡಾರದ ಮಳೆಯಾಗಿರಬಹುದು. ಬೆಳಗ್ಗೆ ದೇವಸ್ಥಾನಕ್ಕೆ ಬಂದಾಗ ಸುತ್ತಲೂ ಭಂಡಾರ ಬಿದ್ದಿರೋದು ಕಂಡು ಆಶ್ಚರ್ಯ ಆಯ್ತು ಎಂದು ಗ್ರಾಮದ ಮಹಿಳೆ ಹೇಳುತ್ತಾರೆ.

ಅಚ್ಚರಿ ವಿದ್ಯಮಾನು ಒಳ್ಳೆಯದಕ್ಕೋ ಕೆಟ್ಟದಕ್ಕೋ ಗೊತ್ತಿಲ್ಲ

ಮಳೆ‌ ಹನಿಯ ಹಳದಿ ಕಲೆಗಳ ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಒಳ್ಳೆಯದಕ್ಕೋ ಕೆಟ್ಟದಕ್ಕೋ ಗೊತ್ತಿಲ್ಲ. ಯಾವ ಕಾರಣ ಗೊತ್ತಿಲ್ಲ ಆದರೆ ಮಳೆ ಹನಿಗಳು ಭಂಡಾರದ ಬಣ್ಣದಿಂದ ಕೂಡಿವೆ. ಹಿಂದೆ ಎಂದೂ ಈ ರೀತಿ ಆಗಿಲ್ಲ. ದೇವಸ್ಥಾನದ ಸುತ್ತ ಹದಿನೈದು ಅಡಿ ವ್ಯಾಪ್ತಿ ಈ ತರಹ ಹಳದಿ ಕಲೆಗಳು ಕಾಣಿಸಿಕೊಂಡಿವೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸುತ್ತಿದೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: BMTCಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್, ನೂತನ ಮಾರ್ಗದಲ್ಲಿ ಸಂಚರಿಸಲಿದೆ ಬಸ್

ಗ್ರಾಮಸ್ಥರಿಗೆ ಹೇಳಿಕೆ ನೀಡಿದ ಅಜ್ಜಿ

ಇದೇ ವೇಳೆ ದೇವಸ್ಥಾನಕ್ಕೆ ಆಗಮಿಸಿದ ಅಜ್ಜಿ ಮೇಲೆ ದೇವರ ಆಹ್ವಾನೆಯಾಗಿ ಕೆಲ ಹೇಳಿಕೆ ನೀಡಿದರು. ಭಂಡಾರ ಮಳೆಯಾಗಿದ್ದಕ್ಕೆ ಯಾವುದೇ ಭಯ ಬೇಡ. ಹೊಳೆ ದಾಟಿ ಬಂದ ನಂತರ ಇಲ್ಲಿನ ಎಲ್ಲರಿಗೂ ಸುಖವಿದೆ. ಭಂಡಾರ ಮಳೆ ಒಳ್ಳೆಯದರ ಸುಳಿವು ಎಂದು ಹೇಳಿಕೆ ನುಡಿದಿದ್ದಾರೆ. ಈ ಮೂಲಕ ಗ್ರಾಮಸ್ಥರಲ್ಲಿದ್ದ ಭಯವನ್ನು ನಿವಾರಿಸೋ ಪ್ರಯತ್ನ ಮಾಡಲಾಯ್ತು.

ಆದರೂ ಒಂದಿಷ್ಟು ಅನುಮಾನ?

ಮಳೆಯಾಗಿದ್ರೆ ಭಂಡಾರ ಹರಿದು ಹೋಗಬೇಕಿತ್ತು. ಮಳೆ ಕಡಿಮೆಯಾದ್ಮೇಲೆ ಯಾರಾದ್ರೂ ಭಂಡಾರ ಎಸೆದಿರೋ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದ್ರೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಗ್ರಾಮಸ್ಥರು ಮಾತ್ರ ಭಂಡಾರ ಮಳೆಯಾಗಿರೋದು ಒಳ್ಳೆಯ ಸಂಕೇತ ಎಂದು ನಂಬುತ್ತಿದ್ದಾರೆ. ಇಂದು ಶನಿವಾರ ಆಗಿರೋ ಕಾರಣ ಆಂಜನೇಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಸಹಜವಾಗಿಯೇ ಹೆಚ್ಚಿರುತ್ತದೆ. ಈ ವಿದ್ಯಮಾನದ ಬಳಿಗ ಹೆಗ್ಗೂರು ಆಂಜನೇಯ ದೇವಸ್ಥಾನಕ್ಕೆ ಆಗಮಿಸುತ್ತಿರೋ ಭಕ್ತರ ಸಂಖ್ಯೆ ಏರಿಕೆಯಾಗಿದೆ.

ಇದನ್ನೂ ಓದಿ: ಒಳಮೀಸಲು ಹೊಸ ನಿಯಮಗಳನ್ವಯ ನ್ಯಾಯ ಬೆಲೆ ಅಂಗಡಿಗಳ ಹಂಚಿಕೆ, ಈ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ