ಬೆಂಗಳೂರಿನಲ್ಲಿ ಸೆಪ್ಟೆಂಬರ್ 15 ರಿಂದ 17ರವರೆಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಒಟ್ಟು 3 ದಿನಗಳ ಕಾಲ ಪಂಪಿಂಗ್ ಸ್ಟೇಷನ್‌ಗಳ ನಿರ್ವಹಣಾ ಕಾರ್ಯಗಳಿಂದಾಗಿ ಈ ಅವಧಿಯಲ್ಲಿ ವ್ಯತ್ಯಯ ಉಂಟಾಗಲಿದ್ದು, ನಾಗರಿಕರು ಮುಂಜಾಗ್ರತೆಯಾಗಿ ನೀರು ಸಂಗ್ರಹಿಸಿಡಲು ಬೆಂಗಳೂರು ಜಲಮಂಡಳಿ ಸೂಚಿಸಿದೆ.

ಬೆಂಗಳೂರು (ಸೆ.09): ಬೃಹತ್ ಬೆಂಗಳೂರು ನಗರಕ್ಕೆ ಕಾವೇರಿ ನೀರು ಪೂರೈಸುವ ಪಂಪಿಂಗ್ ಸ್ಟೇಷನ್‌ಗಳ ತುರ್ತು ನಿರ್ವಹಣಾ ಕಾರ್ಯಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15 ರಿಂದ 17ರವರೆಗೆ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಮುಂಜಾಗ್ರತೆಯಾಗಿ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ-ಬಿಡಬ್ಲ್ಯುಎಸ್‌ಎಸ್‌ಬಿ) ನಾಗರಿಕರಿಗೆ ಮನವಿ ಮಾಡಿದೆ.

ನಿರ್ವಹಣಾ ಕಾರ್ಯಗಳ ವಿವರ

ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾದ್ ಮನೋಹರ್ ಅವರು ನೀಡಿರುವ ಹೇಳಿಕೆಯ ಪ್ರಕಾರ, ನಗರಕ್ಕೆ ನಿರಂತರ ನೀರು ಪೂರೈಕೆ ಖಚಿತಪಡಿಸಿಕೊಳ್ಳಲು ಪಂಪಿಂಗ್ ಸ್ಟೇಷನ್‌ಗಳು ಮತ್ತು ಪ್ರಮುಖ ಕೊಳವೆ ಮಾರ್ಗಗಳ ನಿಯಮಿತ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳು ನಡೆಯಲಿವೆ. ಈ ಕಾರಣದಿಂದ ವಿವಿಧ ಹಂತಗಳ ಪಂಪಿಂಗ್ ಸ್ಟೇಷನ್‌ಗಳನ್ನು ಸ್ಥಗಿತಗೊಳಿಸಲಾಗುವುದು.

ಕಾವೇರಿ 5ನೇ ಹಂತದ ಪಂಪಿಂಗ್ ಸ್ಟೇಷನ್: ಸೆಪ್ಟೆಂಬರ್ 15ರ ಬೆಳಿಗ್ಗೆ 1 ಗಂಟೆಯಿಂದ ಸೆಪ್ಟೆಂಬರ್ 17ರ ಮಧ್ಯಾಹ್ನ 1 ಗಂಟೆಯವರೆಗೆ, ಒಟ್ಟು 60 ಗಂಟೆಗಳ ಕಾಲ ಜಲರೇಚಕ ಯಂತ್ರಾಗಾರಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುತ್ತದೆ.

ಹಳದಿ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; 25ರ ಬದಲು 19 ನಿಮಿಷಕ್ಕೊಂದು ರೈಲು ಸಂಚಾರ!

ಕಾವೇರಿ 1, 2, 3, ಮತ್ತು 4ನೇ ಹಂತಗಳ ಪಂಪಿಂಗ್ ಸ್ಟೇಷನ್‌ಗಳು: ಈ ನಾಲ್ಕು ಹಂತಗಳ ಪಂಪಿಂಗ್ ಸ್ಟೇಷನ್‌ಗಳನ್ನು ಸೆಪ್ಟೆಂಬರ್ 16ರ ಬೆಳಿಗ್ಗೆ 6 ಗಂಟೆಯಿಂದ ಸೆಪ್ಟೆಂಬರ್ 17ರ ಬೆಳಿಗ್ಗೆ 6 ಗಂಟೆಯವರೆಗೆ, ಒಟ್ಟು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ.

ಈ ಸ್ಥಗಿತದಿಂದಾಗಿ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ, ಜಲಮಂಡಳಿಯು ನಾಗರಿಕರು ಈ ದಿನಾಂಕಗಳಿಗೆ ಅಗತ್ಯವಿರುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಕೋರಿದೆ. ಈ ನಿರ್ವಹಣಾ ಕಾರ್ಯಗಳು ನೀರು ಸರಬರಾಜು ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಅತ್ಯಗತ್ಯವಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.

ಮುಂದಿನ 3 ದಿನಗಳ ಕಾಲ ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ನಾಗರಿಕರು ವ್ಯಯಕ್ತಿಕ ಹಾಗೂ ದೈನಂದಿನ ಅವಶ್ಯಕತೆಗಳಿಗಾಗಿ ನೀರನ್ನು ಬಳಸುವಂತೆ ಸಲಹೆ ನೀಡಲಾಗಿದೆ.