ಬೆಂಗಳೂರಿನ ಶ್ರೀರಾಂಪುರದಲ್ಲಿ, ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕಾಗಿ 20 ವರ್ಷದ ಬಿ.ಫಾರ್ಮ್ ವಿದ್ಯಾರ್ಥಿನಿ ಯಾಮಿನಿ ಪ್ರಿಯಾಳನ್ನು ಆಕೆಯ ಪರಿಚಿತನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪೊಲೀಸರು ಮುಖ್ಯ ಆರೋಪಿ ವಿಘ್ನೇಶ್ ಮತ್ತು ಆತನ ಸ್ನೇಹಿತ ಹರೀಶ್‌ನನ್ನು ಬಂಧಿಸಿದ್ದಾರೆ.
ಬೆಂಗಳೂರು (ಅ.17): ನಗರದ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ (ಅ.16) ನಡೆದ 20 ವರ್ಷದ ಬಿ.ಫಾರ್ಮ್ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಆಕೆಯ ಪರಿಚಿತನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
ಈ ಘಟನೆ ಕುರಿತು ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕೊಲೆಯಾದ 20 ವರ್ಷದ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ, ಬಿ.ಫಾರ್ಮ್ ಓದುತ್ತಿದ್ದರು. ವಿಘ್ನೇಶ್ @ ಸಂಜಯ್ ಎಂಬಾತ ಯಾಮಿನಿ ಪ್ರಿಯಾಳನ್ನು ಮದುವೆಯಾಗಲು ಬಲವಂತ ಮಾಡುತ್ತಿದ್ದ. ಆಕೆಯು ವಿಘ್ನೇಶ್‌ನ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡ ಆತ, ಆಕೆಯ ಕುತ್ತಿಗೆ ಮತ್ತು ಮುಖಕ್ಕೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.
ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ, ಪೊಲೀಸರು ವಿಘ್ನೇಶ್ ಮತ್ತು ಕೊಲೆಗೆ ಸಹಕಾರ ನೀಡಿದ ಆತನ ಸ್ನೇಹಿತ ಹರೀಶ್ ಎಂಬಾತನನ್ನು ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಕೊಲೆಯ ಕೃತ್ಯವನ್ನು ವಿಘ್ನೇಶ್ ಮಾತ್ರ ಮಾಡಿದ್ದಾನೆ. ಆದರೆ, ಹರೀಶ್ ಈತನಿಗೆ ಸ್ಥಳಕ್ಕೆ ಡ್ರಾಪ್ ಮಾಡುವುದು ಮತ್ತು ಕೃತ್ಯದ ನಂತರ ಪಿಕ್ ಮಾಡುವುದಕ್ಕೆ ಸಹಾಯ ಮಾಡಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಸದ್ಯ ಇಬ್ಬರು ಆರೋಪಿಗಳ ವಿಚಾರಣೆ ನಡೆಯುತ್ತಿದೆ.
ಬಂಧಿತನ ಹಿನ್ನೆಲೆ: ಹಳೆ ಅಪರಾಧಿ:
- ಹಳೆಯ ದೂರು: ವಿಘ್ನೇಶ್‌ನ ಬಲವಂತದ ಕುರಿತು ಯಾಮಿನಿ ಪ್ರಿಯಾ ಈ ಹಿಂದೆ ಒಮ್ಮೆ ಶ್ರೀರಾಂಪುರ ಪೊಲೀಸರಿಗೆ ದೂರು ನೀಡಿದ್ದಳು. ಆಗ ಪೊಲೀಸರು ಇಬ್ಬರ ಮುಚ್ಚಳಿಕೆ ಬರೆಸಿಕೊಂಡು, ಎಚ್ಚರಿಕೆ ನೀಡಿ ಕಳುಹಿಸಿದ್ದರು.
- ವೃತ್ತಿ/ಉದ್ಯೋಗ: ಆರೋಪಿ ವಿಘ್ನೇಶ್‌ಗೆ ಯಾವುದೇ ನಿರ್ದಿಷ್ಟ ಉದ್ಯೋಗ ಇರಲಿಲ್ಲ. ಆದರೆ, ಆತನಿಗೆ ಸಹಾಯ ಮಾಡಿದ ಹರೀಶ್ ಫ್ಯಾಬ್ರಿಕ್ ಕೆಲಸ ಮಾಡುತ್ತಿದ್ದನು.
- ಅಪರಾಧದ ಇತಿಹಾಸ: ವಿಘ್ನೇಶ್ ಅಪರಾಧ ಹಿನ್ನೆಲೆಯನ್ನು ಹೊಂದಿದ್ದು, 2022 ರಲ್ಲಿ ಈತ ಬಿಬಿಎಂಪಿ ಮಾರ್ಷಲ್ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಪ್ರಕರಣ ಕೂಡ ಆತನ ಮೇಲಿತ್ತು.
- ಆಯುಧ ಖರೀದಿ: ಕೊಲೆಗೆ ಬಳಸಲಾದ ಚಾಕುವನ್ನು ವಿಘ್ನೇಶ್ ಒಂದು ಶಾಪ್‌ನಲ್ಲಿ ಖರೀದಿ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಯಾಮಿನಿ ಪ್ರಿಯಾ ಮತ್ತು ವಿಘ್ನೇಶ್ ನಡುವೆ ಪ್ರೀತಿಯ ಸಂಬಂಧ ಇತ್ತೇ ಅಥವಾ ಕೇವಲ ಪರಿಚಯ ಇತ್ತೇ ಎಂಬ ಕುರಿತು ಹಾಗೂ ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿರುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬಲವಂತದ ಪ್ರೀತಿಗೆ ಬಲಿಯಾದ ವಿದ್ಯಾರ್ಥಿನಿಯ ಸಾವಿಗೆ ಇಡೀ ಶ್ರೀರಾಂಪುರ ಮತ್ತು ಕಾಲೇಜು ಸಮುದಾಯ ಆಘಾತ ವ್ಯಕ್ತಪಡಿಸಿದೆ.
