ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆಯ ರೇಡಿಯಾಲಜಿಸ್ಟ್ ಡಾ. ಶಶಿ ಎಸ್.ಎಲ್. ಅವರನ್ನು ಭ್ರೂಣ ಲಿಂಗ ಪತ್ತೆ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಭ್ರೂಣ ಲಿಂಗ ಪತ್ತೆ ನಂತರ ಭ್ರೂಣ ಹತ್ಯೆ ಮಾಡಿರುವುದು ದೃಢಪಟ್ಟಿದೆ. ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣ ತೆಗೆಸಿದ್ದು, ಸರ್ಕಾರಿ ವೈದ್ಯೆ ಪಾತ್ರ ಬೆಳಕಿಗೆ ಬಂದಿದೆ.

ಬೆಂಗಳೂರು (ಸೆ.01): ಭ್ರೂಣ ಲಿಂಗ ಪತ್ತೆ ಮಾಡಿದ್ದ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆಯ ರೇಡಿಯಾಲಜಿಸ್ಟ್ ಡಾ. ಶಶಿ ಎಸ್.ಎಲ್. ಅವರನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದಲ್ಲಿ ಭ್ರೂಣ ಲಿಂಗ ಪತ್ತೆ ಹಚ್ಚಿ, ನಂತರ ಭ್ರೂಣ ಹತ್ಯೆ ಮಾಡಿರುವುದು ದೃಢಪಟ್ಟಿದೆ.

ಆಗಸ್ಟ್ 23 ರಂದು, ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾಸ್ಪತ್ರೆಯ ಸ್ಕ್ಯಾನಿಂಗ್ ಕೊಠಡಿಯನ್ನು ಸೀಜ್ ಮಾಡಿದ್ದರು. ಈ ತನಿಖೆಯಿಂದ ಹರ್ಷಿತಾ ಎಂಬ ಮಹಿಳೆಗೆ ಭ್ರೂಣ ಲಿಂಗ ಪತ್ತೆ ಮಾಡಲಾಗಿದ್ದು, ಇದರಲ್ಲಿ ಡಾ. ಶಶಿ ಭಾಗಿಯಾಗಿರುವುದು ಕಂಡುಬಂದಿದೆ. ಹರ್ಷಿತಾ ಅವರು ಮಧ್ಯವರ್ತಿಯ ಮೂಲಕ ಜಿಲ್ಲಾಸ್ಪತ್ರೆಯಲ್ಲಿ ಈ ಕಾರ್ಯ ಮಾಡಿಸಿಕೊಂಡಿದ್ದರು.

ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಹಚ್ಚಿದ ನಂತರ, ಹರ್ಷಿತಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಭ್ರೂಣ ಹತ್ಯೆ ಮಾಡಿಕೊಂಡಿದ್ದರು. ಆದರೆ, ಭ್ರೂಣ ಹತ್ಯೆಯ ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ, ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವೈದ್ಯಕೀಯ ದಾಖಲೆಗಳು ಮತ್ತು ಹರ್ಷಿತಾ ಅವರ ಹೇಳಿಕೆಗಳ ಆಧಾರದ ಮೇಲೆ, ಜಿಲ್ಲಾಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ನಡೆದಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಡಾ. ಶಶಿ ಎಸ್.ಎಲ್. ಅವರನ್ನು ತಕ್ಷಣವೇ ಅಮಾನತುಗೊಳಿಸಿ ತನಿಖೆಗೆ ಒಳಪಡಿಸಲಾಗಿದೆ.

ಕೇಂದ್ರ ಸರ್ಕಾರದ 'ಪ್ರಿಕ್ಲಬ್‌' ಕಾಯ್ದೆಯು ಭ್ರೂಣ ಲಿಂಗ ಪತ್ತೆ ಮಾಡುವುದು ಮತ್ತು ಭ್ರೂಣ ಹತ್ಯೆ ಮಾಡುವುದನ್ನು ಗಂಭೀರ ಅಪರಾಧವೆಂದು ಪರಿಗಣಿಸುತ್ತದೆ. ಈ ಪ್ರಕರಣದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ನೇರವಾಗಿ ಭಾಗಿಯಾಗಿರುವುದು ಆಘಾತಕಾರಿ ಸಂಗತಿಯಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.