ಬೆಂಗಳೂರಿನಲ್ಲಿ ನಿರಂತರ ಮಳೆಯಿಂದ ತಂಪಾದ ವಾತಾವರಣವಿದ್ದರೂ, ರಸ್ತೆ ಗುಂಡಿಗಳು ಸವಾರರಿಗೆ ಸಂಕಷ್ಟ ತಂದೊಡ್ಡಿವೆ. ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಗುಂಡಿಗಳಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದ್ದು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು: ಮಂಜಿನ ನಗರಿಯಾದ ಬೆಂಗಳೂರು ಈಗ ಮಳೆ-ಮೋಡದ ವಾತಾವರಣದಿಂದ ಆವರಿಸಿಕೊಂಡಿದೆ. ಒಂದೆಡೆ ಜಿಟಿಜಿಟಿ ಮಳೆಯ ಅನುಭವ ಹಾಗೂ ತಂಪಾದ ಹವಾಮಾನದಿಂದ ನಗರಕ್ಕೆ ಹೊಸ ರಂಗ ತುಂಬಿದರೂ, ಮತ್ತೊಂದೆಡೆ ರಸ್ತೆ ಗುಂಡಿಗಳ ತೊಂದರೆಗಳಿಂದ ವಾಹನ ಸವಾರರು ಹಾಗೂ ಸಾಮಾನ್ಯ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ಮಳೆ-ಮೋಡದ ಹವಾಮಾನ ಮುಂದುವರಿಕೆ

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದಿನ ಮೂರು-ನಾಲ್ಕು ದಿನಗಳವರೆಗೆ ನಿರಂತರವಾಗಿ ಸುರಿಯುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಸೂಚಿಸಿದೆ. ಸೆಪ್ಟೆಂಬರ್ 23ರವರೆಗೆ ರಾಜ್ಯದಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

  • ನಿನ್ನೆ ಸಂಜೆಯಿಂದಲೇ ಬೆಂಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯ ಪ್ರಮಾಣ 66.0 ಮಿಮೀ ದಾಖಲಾಗಿದೆ.
  • ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ದಾಖಲೆ 130 ಮಿಮೀ,
  • ಬೀದರ್ ಜಿಲ್ಲೆಯಲ್ಲಿ 112 ಮಿಮೀ ಮಳೆ ದಾಖಲಾಗಿದೆ.

ಸೆಪ್ಟೆಂಬರ್ 24ರವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಕಲಬುರಗಿ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಮಳೆ ಸಂತಸ, ಆದರೆ ರಸ್ತೆ ಗುಂಡಿಗಳ ಬೇಸರ

ಮಳೆಯ ತಂಪು ಸಂತಸ ನೀಡುತ್ತಿದ್ದರೂ, ನಗರ ರಸ್ತೆಗಳಲ್ಲಿ ಉಂಟಾದ ಗುಂಡಿಗಳು ವಾಹನ ಸವಾರರ ಜೀವಕ್ಕೆ ಅಪಾಯವಾಗಿವೆ. ಮಳೆಯ ನೀರು ತುಂಬಿಕೊಂಡಿರುವ ಗುಂಡಿಗಳಿಂದಾಗಿ ವಾಹನ ಸಂಚಾರ ಅಸಾಧ್ಯವಾಗಿದ್ದು, ಅಸಹನೆ ವ್ಯಕ್ತವಾಗುತ್ತಿದೆ. ಸ್ಥಳೀಯರು ವ್ಯಂಗ್ಯವಾಗಿ, "ಈ ರಸ್ತೆಗಳಲ್ಲಿ ಈಗ ರೈತರು ಬಂದು ಬೆಳೆ ಬೆಳೆದರೆ ಬೆಳೆಹಾನಿ ಇಲ್ಲ, ಖರ್ಚು ವೆಚ್ಚವೂ ಇಲ್ಲ" ಎಂದು ಟೀಕಿಸಿದ್ದಾರೆ.

ಜನರ ಆಕ್ರೋಶ

ಕಾಮಾಕ್ಷಿಪಾಳ್ಯ ಸೇರಿ ಅನೇಕ ಭಾಗಗಳಲ್ಲಿ ರಸ್ತೆ ಗುಂಡಿಗಳಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು, ಸಾಮಾನ್ಯ ಜನರು ಬೇಸತ್ತು ಹೋಗಿದ್ದಾರೆ.

“ದಿನವೂ ಕೆಲಸಕ್ಕೆ ಆಟೋದಲ್ಲಿ ಹೋಗಿ ಬರೋದು, ಬಾಡಿಗೆ ಕೊಡೋದು ನಮ್ಮ ಜೀವನ. ಆದರೆ ರಸ್ತೆ ಗುಂಡಿಗಳಿಂದ ಪ್ರತಿದಿನ ಆಸ್ಪತ್ರೆಗೆ ಖರ್ಚು ಮಾಡೋದು ನಮಗಾಗುವುದಿಲ್ಲ,” ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಅನೇಕ ಬಾರಿ ರಸ್ತೆ ಸರಿಪಡಿಸಲು ಮನವಿ ಮಾಡಿದ್ದೇವೆ. ಆದರೆ ಯಾವ ಪ್ರಯೋಜನವೂ ಆಗಿಲ್ಲ. ಜನಪ್ರತಿನಿಧಿಗಳ ಮನೆ ಮುಂದೆ ನಿಂತರೂ ಪ್ರತಿಕ್ರಿಯೆ ಇಲ್ಲ,” ಎಂದು ಮತ್ತೊಬ್ಬರು ಬೇಸರ ಹಂಚಿಕೊಂಡರು.

“ಇಲ್ಲೆ ಹುಟ್ಟಿ ಬೆಳೆದಿನಿಂದ ಈ ರಸ್ತೆಯ ಪರಿಸ್ಥಿತಿ ಇದೇ ರೀತಿಯೇ ಇದೆ. ಡಿಸಿಎಂ ಡೆಡ್ಲೈನ್ ಕೊಟ್ಟರೂ ರಸ್ತೆಯ ಕನಸು ಇನ್ನೂ ನನಸಾಗಿಲ್ಲ,” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ನಿರ್ಲಕ್ಷ್ಯಕ್ಕೆ ಜನರ ಪ್ರಶ್ನೆ

ನಿರಂತರ ಮಳೆಯಿಂದಾಗಿ ರಸ್ತೆಗಳ ಸ್ಥಿತಿ ದಿನೇದಿನೇ ಹದಗೆಡುತ್ತಿದೆ. ಆದರೆ, ಸಂಬಂಧಿಸಿದ ಇಲಾಖೆಯಿಂದ ಯಾವುದೇ ತುರ್ತು ಕ್ರಮ ಕಂಡುಬರದಿರುವುದು ಜನರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. "ಸರ್ಕಾರಕ್ಕೆ ನಮ್ಮ ಕಷ್ಟ ಗೋಚರಿಸುತ್ತಿಲ್ಲ. ನಮ್ಮ ಮಾತು ಕೇಳುವುದಿಲ್ಲ. ಆಗಲೇ ರೈತರನ್ನು ಕರೆಸಿ ರಸ್ತೆಯ ಮೇಲೆಯೇ ಬೆಳೆ ಬೆಳೆಸಲಿ" ಎಂದು ವ್ಯಂಗ್ಯವಾಡುತ್ತಿದ್ದಾರೆ.