ಬೆಂಗಳೂರಿನ ಓಕಳಿಪುರಂ ಅಂಡರ್‌ಪಾಸ್ ಬಳಿಯ ಪುಟ್ಪಾತ್, ಪೌರಕಾರ್ಮಿಕರು, ಎನ್‌ಜಿಓ ಮತ್ತು ನಾಗರಿಕರ ಸಹಯೋಗದಿಂದ ಸಂಪೂರ್ಣ ಸ್ವಚ್ಛಗೊಂಡಿದೆ. ಹಿಂದೆ ಕಸದ ರಾಶಿಯಿಂದ ತುಂಬಿದ್ದ ಈ ಮಾರ್ಗವು ಇದೀಗ ಸುರಕ್ಷಿತ ಮತ್ತು ಸುಂದರ ಪಾದಚಾರಿ ದಾರಿಯಾಗಿ ಬದಲಾಗಿದೆ.
ಬೆಂಗಳೂರು ನಗರದಲ್ಲಿ ಪೌರಕಾರ್ಮಿಕರು, ಎನ್‌ಜಿಓ ಸಂಸ್ಥೆ ಹಾಗೂ ನಾಗರಿಕರು ಒಟ್ಟಿಗೆ ಕೈಜೋಡಿಸಿದ ಶ್ಲಾಘನೀಯ ಕಾರ್ಯ ಇದೀಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ವರ್ಷಗಳಿಂದ ಗಲೀಜಿನಿಂದ ತುಂಬಿ ಕಾಲಿಡಲು ಸಹ ಸಾಧ್ಯವಾಗದಿದ್ದ ಓಕಳಿಪುರಂ ಅಂಡರ್‌ಪಾಸ್ ಹತ್ತಿರದ ಪುಟ್ಪಾತ್ ಮಾರ್ಗ ಈಗ ಸಂಪೂರ್ಣ ಬದಲಾಗಿದ್ದು, ಕಾಲ್ನಡಿಗೆ ಸಂಚಾರಕ್ಕೆ ಸುರಕ್ಷಿತ ಹಾಗೂ ಸ್ವಚ್ಛವಾದ ಪಾದಚಾರಿ ದಾರಿ ಆಗಿದೆ.
ವೈರಲ್ ಆದ Before–After ವಿಡಿಯೋ
ಈ ಪ್ರದೇಶದ ಸ್ವಚ್ಛತಾ ಅಭಿಯಾನದ ಮೊದಲು ಹಾಗೂ ನಂತರದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಿಂದೆ ಕಸದ ರಾಶಿ, ಚರಂಡಿ ನೀರು ಹಾಗೂ ಯಾವುದೇ ಸೌಕರ್ಯ ಇಲ್ಲದೆ ಕಸ, ಗಿಡಗಂಟಿಗಳಿಂದ ತುಂಬಿದ್ದ ಈ ದಾರಿಯಲ್ಲಿ ಈಗ ಜನರು ಬರಿಗಾಲಲ್ಲಿ ಸಹ ಸುಲಭವಾಗಿ ನಡೆಯಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಿಂದೆ ಈ ಪ್ರದೇಶದ ದುಸ್ಥಿತಿ ಕುರಿತು ಕೆನಡಾ ಮೂಲದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ, ಬೆಂಗಳೂರು ಪುಟ್ಪಾತ್‌ಗಳ ಕೆಟ್ಟ ನಿರ್ವಹಣೆ ಮತ್ತು ಅಪಾಯಕಾರಿ ಸ್ಥಿತಿಯನ್ನು ತೀವ್ರವಾಗಿ ಟೀಕಿಸಿದ್ದರು. ಈ ವಿಡಿಯೋ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
ಕೆನಡಾ ಮೂಲದ ವ್ಯಕ್ತಿಯೂ ಈ ಮಾರ್ಗದ ವಿಡಿಯೋ ಮಾಡಿ ಟೀಕಿಸಿದ್ದ. ಬೆಂಗಳೂರು ಪುಟ್ಪಾತ್ ಎಷ್ಟು ಅಪಾಯಕಾರಿ, ಎಷ್ಟು ಕೆಟ್ಟ ನಿರ್ವಹಣೆ ಎಂದು ಕಾಮೆಂಟ್ ಮಾಡಿದ್ದ. ಅದಾದ ಬಳಿಕಯೂ ಈ ಜಾಗ ಸ್ವಚ್ಚವಾಗಿರಲಿಲ್ಲ. ಕೇಂದ್ರ ನಗರ ಪಾಲಿಕೆ ಕಮೀಷನರ್ ಮೆಜೆಸ್ಟಿಕ್ ಪುಟ್ಪಾತ್ ಮಾತ್ರ ಕ್ಲೀನ್ ಮಾಡಿ ರಸ್ತೆಯಲ್ಲಿ ಕೂತು ತಿಂಡಿ ಸವಿದಿದ್ದರು. ಈ ಅಭಿಯಾನವೇ ಇಂದು ಪ್ರೇರಣೆ ನೀಡಿದೆ.
ಜಿಬಿಎ ಪೌರಕಾರ್ಮಿಕರಿಂದ ಉದ್ಘಾಟನೆ
ಈ ಬಾರಿ ವಿಶೇಷವೆಂದರೆ ಪೌರಕಾರ್ಮಿಕರೇ ಸ್ವತಃ ಪುಟ್ಪಾತ್ ಕ್ಲೀನ್ ಮಾಡಿ, ಪುನರ್‌ಸ್ಥಾಪನೆ ಮಾಡಿದ್ದು, ಅದೇ ದಾರಿಯನ್ನು ತಾವೇ ಉದ್ಘಾಟಿಸಿದ್ದಾರೆ. ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಪೌರಕಾರ್ಮಿಕರು, ಎನ್‌ಜಿಓ ಸಂಸ್ಥೆಯ ಸಹಯೋಗದಲ್ಲಿ ಈ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಹೊಸ ಕಲ್ಲುಹಾಸು ಹಾಗೂ ಬೆಳಕು ವ್ಯವಸ್ಥೆ ಮಾಡಿದ್ದಾರೆ. ಉದ್ಘಾಟನೆ ಸಂದರ್ಭದಲ್ಲಿ ಕಾರ್ಮಿಕರು ಖುಷಿಯಿಂದ ಕುಣಿದು ಸಂಭ್ರಮಿಸಿದರು. ಅವರ Before–After ಕೆಲಸದ ವಿಡಿಯೋ. ಎಲ್ಲೆಡೆ ವೈರಲ್ ಆಗುತ್ತಿದೆ.
ನಗರದ ಎಲ್ಲೆಡೆ ಇಂತಹ ಕಾರ್ಯ ನಡೆಯಲಿ ಎಂಬ ಜನರ ಮೆಚ್ಚುಗೆ
ಈ ಅಭಿಯಾನಕ್ಕೆ ನಾಗರಿಕರಿಂದ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನಗರದ ಹಲವೆಡೆ ಇಂತಹ ಗಲೀಜು ತುಂಬಿದ, ಮುರಿದುಹೋಗಿರುವ ಪಾದಚಾರಿ ಮಾರ್ಗಗಳಿವೆ. ಜಿಬಿಎ ಹಾಗೂ ಸಂಬಂಧಿತ ಇಲಾಖೆ ಎಲ್ಲೆಡೆ ಇದೇ ಮಾದರಿಯಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಈ ಉದಾಹರಣೆ ನಗರದ ಸೌಂದರ್ಯ ಹಾಗೂ ಸಾರ್ವಜನಿಕ ಸುರಕ್ಷತೆ ಎರಡನ್ನೂ ಹೆಚ್ಚಿಸಲು ಸಂಯುಕ್ತ ಪ್ರಯತ್ನಗಳೇ ಪರಿಣಾಮಕಾರಿಯ ಮಾರ್ಗ ಎಂಬುದನ್ನು ಸ್ಪಷ್ಟಪಡಿಸಿದೆ.
