ಬೆಂಗಳೂರಿನ ಆಸ್ಟಿನ್ ಟೌನ್‌ನಲ್ಲಿ ಜಾತಿ ಸಮೀಕ್ಷೆ ನಡೆಸುತ್ತಿದ್ದ ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಸಮೀಕ್ಷೆಗಾಗಿ ಮನೆಯಲ್ಲಿದ್ದ ಮಹಿಳೆಯ ಫೋಟೋ ತೆಗೆದಿದ್ದಕ್ಕೆ ಆಕೆಯ ಪತಿ ಮತ್ತು ಅತ್ತೆ ಸೇರಿ ಸಿಬ್ಬಂದಿಗೆ ಥಳಿಸಿದ್ದು, ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು (ಅ.23): ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ ಕಾರ್ಯದ ವೇಳೆ ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಂಗಳೂರಿನ ಆಸ್ಟಿನ್ ಟೌನ್‌ನಲ್ಲಿ ವರದಿಯಾಗಿದೆ. ಸಮೀಕ್ಷೆಗಾಗಿ ಮನೆಯ ಮಹಿಳೆಯ ಫೋಟೋ ತೆಗೆದಿದ್ದಕ್ಕೆ ಸಿಟ್ಟಿಗೆದ್ದ ಪತಿ ಮತ್ತು ಆತನ ತಾಯಿ, ಸಮೀಕ್ಷಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಟಿನ್ ಟೌನ್‌ನಲ್ಲಿ ಸಮೀಕ್ಷೆ ಕಾರ್ಯದಲ್ಲಿ ನಿರತರಾಗಿದ್ದ ಸಿಬ್ಬಂದಿ ಅಭಿಷೇಕ್ ಮತ್ತು ಜಿಬಿಎ ಸಿಬ್ಬಂದಿ, ಅಲ್ಲಿನ ಮನೆಯೊಂದರ ಬಳಿ ಹೋಗಿ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದರು. ಆ ವೇಳೆ ಮನೆಯಲ್ಲಿ ಒಬ್ಬರೇ ಇದ್ದ ಮನೆಯ ಒಡತಿಯಿಂದ ಸಮೀಕ್ಷೆಗೆ ಬೇಕಾದ ಎಲ್ಲಾ ಮಾಹಿತಿಯನ್ನು ಸಿಬ್ಬಂದಿ ಪಡೆದುಕೊಂಡಿದ್ದರು.

ಮಾಹಿತಿ ಸಂಗ್ರಹಿಸಿದ ಬಳಿಕ ಸಮೀಕ್ಷಾ ಆ್ಯಪ್‌ಗೆ ಅಪ್‌ಲೋಡ್ ಮಾಡಲು ಅಗತ್ಯವಿದ್ದ ಕಾರಣ, ಸಿಬ್ಬಂದಿ ಆ ಮಹಿಳೆಯ ಫೋಟೋವನ್ನು ಕ್ಲಿಕ್ ಮಾಡಿ ಆ್ಯಪ್‌ಗೆ ಅಪ್‌ಲೋಡ್ ಮಾಡಿದ್ದರು. ಇದಾದ ಸ್ವಲ್ಪ ಸಮಯದ ನಂತರ ಮನೆಗೆ ಬಂದ ಮನೆಯ ಯಜಮಾನ ಸ್ಟೀಪನ್ (ಅಲಿಯಾಸ್ ಅನಿಲ್), ಸಮೀಕ್ಷೆ ಬಗ್ಗೆ ಪತ್ನಿಯನ್ನು ವಿಚಾರಿಸಿದ್ದಾರೆ. ಈ ವೇಳೆ, ಸಿಬ್ಬಂದಿ ಮಾಹಿತಿ ಜೊತೆಗೆ ತಮ್ಮ ಫೋಟೋ ಸಹ ತೆಗೆದುಕೊಂಡಿದ್ದಾರೆ ಎಂದು ಪತ್ನಿ ತಿಳಿಸಿದ್ದಾರೆ.

ಫೋಟೋ ತೆಗೆದಿದ್ದಕ್ಕೆ ಕೆಂಡಾಮಂಡಲ, ಹಲ್ಲೆ:

ಪತ್ನಿ ಫೋಟೋ ತೆಗೆದುಕೊಂಡಿದ್ದಾರೆ ಎಂದು ತಿಳಿದ ಕೂಡಲೇ ಪತಿ ಸ್ಟೀಪನ್ ಕೆಂಡಾಮಂಡಲನಾಗಿದ್ದಾನೆ. ತನ್ನ ಅನುಮತಿ ಇಲ್ಲದೆ ಪತ್ನಿಯ ಫೋಟೋ ಹೇಗೆ ತೆಗೆದುಕೊಂಡಿರಿ ಎಂದು ಅದೇ ಸಿಟ್ಟಿನಿಂದ ಸಮೀಕ್ಷೆದಾರರನ್ನು ಹುಡುಕಿಕೊಂಡು ಹೊರಟಿದ್ದಾನೆ. ಅದೇ ಏರಿಯಾದಲ್ಲಿ ಸರ್ವೆ ಮಾಡುತ್ತಿದ್ದ ಸಮೀಕ್ಷೆ ಸಿಬ್ಬಂದಿ ಬಳಿ ತೆರಳಿದ ಸ್ಟೀಪನ್ ಕಿರಿಕ್ ತೆಗೆದಿದ್ದಾನೆ.

ಪರಿಸ್ಥಿತಿ ತಿಳಿಗೊಳಿಸಲು ಸಿಬ್ಬಂದಿ ಸಮಾಧಾನದಿಂದ ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ ಕೇಳದ ಸ್ಟೀಪನ್, ಸಿಬ್ಬಂದಿ ಅಭಿಷೇಕ್ ಹಾಗೂ ಜಿಬಿಎ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಗೆ ಸ್ಟೀಪನ್‌ನ ತಾಯಿ ಗೀತಾ ಮಾರ್ಗರೇಟ್ ಕೂಡ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರಿ ಅಧಿಕಾರಿಗಳು ಅನ್ನೋದನ್ನು ಲೆಕ್ಕಿಸದೇ ತಾಯಿ-ಮಗ ಇಬ್ಬರೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕ್ರೌರ್ಯ ಪ್ರದರ್ಶಿಸಿದ್ದಾರೆ.

ಘಟನೆ ಕುರಿತು ಸಮೀಕ್ಷಾ ಸಿಬ್ಬಂದಿ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಹಲ್ಲೆಕೋರರ ವಿರುದ್ಧ ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಅಡಿಯಲ್ಲಿ (U/s-132, 115(2), 352, 351(2), r/w 3(5)) ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.