ಜೋಶಿ, ತೇಜಸ್ವಿ ಸೂರ್ಯ, ಸುಧಾ ಮೂರ್ತಿ ಅವರಂತಹ ಗಣ್ಯರು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿರೋಧಿಸಿರುವುದರಿಂದ ಬಿಜೆಪಿಯ ಮನಸ್ಥಿತಿ ಜನರಿಗೆ ಅರ್ಥವಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಬೆಂಗಳೂರು (ಅ.20): ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರಂತಹ ಗಣ್ಯರು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿರೋಧಿಸಿರುವುದರಿಂದ ಬಿಜೆಪಿಯ ಮನಸ್ಥಿತಿ ಜನರಿಗೆ ಅರ್ಥವಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು. ಅವರನ್ನು ಜನರು ನೋಡುತ್ತಿರುತ್ತಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವುದು ಬರೀ ಹಿಂದುಳಿದ ವರ್ಗದವರಿಗೆ ನಡೆಸುತ್ತಿರುವ ಸಮೀಕ್ಷೆ ಅಲ್ಲ ಅಥವಾ ಒಂದು ಸಮುದಾಯ, ವರ್ಗಕ್ಕೆ ನಡೆಸುತ್ತಿರುವ ಸಮೀಕ್ಷೆಯೂ ಅಲ್ಲ. ಏಳು ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ನಡೆಸುತ್ತಿರುವ ಸಮೀಕ್ಷೆ. ರಾಜ್ಯದ ಶೈಕ್ಷಣಿಕ ಪ್ರಗತಿ, ಸಾಮಾಜಿಕ ಪ್ರಗತಿ ಎಷ್ಟಿದೆ ಎಂಬಿತ್ಯಾದಿ ಅಂಶಗಳನ್ನೂ ಒಳಗೊಂಡಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು. ಸಮೀಕ್ಷೆ ವಿಚಾರದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ, ಹೌದು, ಇದು ಒಳ್ಳೆಯದಲ್ಲ. ಮುಂದೆ ಕೇಂದ್ರ ಸರ್ಕಾರವೂ ಸಮೀಕ್ಷೆ ನಡೆಸುತ್ತದೆ. ನಾವೂ ಬಿಜೆಪಿಯವರಂತೆ ರಾಜಕಾರಣ ಮಾಡಲು ಆಗುತ್ತಾ? ಕಾಂಗ್ರೆಸ್‌ನವರು ಆ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಲಾಗುತ್ತಾ ಎಂದು ಪ್ರಶ್ನಿಸಿದರು.

ಬಿಜೆಪಿಯಿಂದ ಸಮಾಜ ಒಡೆಯುವ ಕೆಲಸ

ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ನಗರದಲ್ಲಿ ಎರಡು ಸಾವಿರ ಕೋಟಿ ರು. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ರಾಜ್ಯದಲ್ಲಿ ಹಿಂದುಳಿದವರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯುವ ಉದ್ದೇಶದಿಂದ ಸರ್ಕಾರದಿಂದ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ. ಆದರೆ ಇದಕ್ಕೆ ಕೆಲವು ಶ್ರೀಮಂತರು ಮತ್ತು ಬಲಾಢ್ಯರ ವಿರೋಧ ಇದೆ. ಬಡವರಿಂದ ಈ ಸಮೀಕ್ಷೆ ಕಾರ್ಯಕ್ಕೆ ವಿರೋಧ ಇಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ತುಳಿತಕ್ಕೆ ಒಳಗಾದ, ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳು ತಲುಪಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯ. ಆದರೆ ನಾವು ಯಾವುದೇ ಷಡ್ಯಂತ್ರಕ್ಕೆ ಬಗ್ಗುವುದಿಲ್ಲ. ರಾಜ್ಯದಲ್ಲಿ ಈಗಾಗಲೇ ಶೇ. 75ರಷ್ಟು ಸಮೀಕ್ಷ ಕಾರ್ಯ ಪೂರ್ಣಗೊಂಡಿದೆ. ಅದರಲ್ಲೂ ನನ್ನ ಉಸ್ತುವಾರಿ ಜಿಲ್ಲೆಯಾದ ಕೊಪ್ಪಳದಲ್ಲಿ ಶೇ. 98ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ವಿಪಕ್ಷ ನಾಯಕರು ಆರೋಪ ಮಾಡುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ₹2,000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬೊಕ್ಕಸ ಖಾಲಿಯಾಗಿದ್ದರೆ, ಇಷ್ಟು ದೊಡ್ಡ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಾಧ್ಯವೇ? ಎಂದರು.