ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆಯ ಆಟೋ ಟಿಪ್ಪರ್ ವಾಹನಗಳ ಹಾಜರಾತಿ ಸಮಯವನ್ನು ಬೆಳಿಗ್ಗೆ 5.30 ರಿಂದ 6.30 ರವರೆಗೆ ಪರಿಷ್ಕರಿಸಲಾಗಿದೆ. ನಿವಾಸಿಗಳು ಕೆಲಸಕ್ಕೆ ಹೊರಡುವ ಮೊದಲು ತ್ಯಾಜ್ಯವನ್ನು ನೀಡಲು ಅನುಕೂಲವಾಗುವಂತೆ ಈ ಬದಲಾವಣೆ ಮಾಡಲಾಗಿದೆ.
ಬೆಂಗಳೂರು (ಆ.25): ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆಯ ಆಟೋ ಟಿಪ್ಪರ್ ವಾಹನಗಳ ಮಸ್ಟರಿಂಗ್ (ಹಾಜರಾತಿ ದಾಖಲೆ) ಸಮಯವನ್ನು ಪರಿಷ್ಕರಿಸಿದ್ದು, ಇಂದಿನಿಂದ ವಾಹನಗಳ ಸ್ಕ್ಯಾನಿಂಗ್ ಸಮಯವನ್ನು ಬೆಳಿಗ್ಗೆ 5.30 ರಿಂದ 6.30 ರವರೆಗೆ ನಿಗದಿಪಡಿಸಲಾಗಿದೆ. ಹೀಗಾಗಿ, ಇನ್ನುಮುಂದೆ ಬೆಳಗ್ಗೆಯೇ ನಿಮ್ಮ ಮನೆ ಬಾಗಿಲಲ್ಲಿ ಕಸವನ್ನು ತೆಗೆದುಕೊಂಡು ಹೋಗುವ ವಾಹನ ಹಾಜರಿರುತ್ತದೆ.
ಬೆಂಗಳೂರು ನಗರದಲ್ಲಿ ಸ್ವಚ್ಛತಾ ಕಾರ್ಯಗಳ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದ ವಿವಿಧ ವಾರ್ಡ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಟೋ ಟಿಪ್ಪರ್ ವಾಹನಗಳ ಮಸ್ಟರಿಂಗ್ (ಹಾಜರಾತಿ ದಾಖಲೆ) ಸಮಯವನ್ನು ಪರಿಷ್ಕರಿಸಲಾಗಿದೆ. ಈ ಹಿಂದೆ ಬೆಳಿಗ್ಗೆ 6.00 ರಿಂದ 7.30 ಸಮಯವನ್ನು ಜಾರಿಯಲ್ಲಿತ್ತು. ಅದನ್ನು ಒಂದು ಗಂಟೆ ಮುಂಚಿತಗೊಳಿಸುವ ಮೂಲಕ ತ್ಯಾಜ್ಯ ಸಂಗ್ರಹಣೆಯನ್ನು ಜನರ ದೈನಂದಿನ ಕಾರ್ಯವೈಖರಿಯ ಜೊತೆಗೆ ಹೊಂದುವಂತೆ ಕ್ರಮ ಕೈಗೊಳ್ಳಲಾಗಿದೆ.
ಈ ಬದಲಾವಣೆಯ ಮೂಲಕ ನಿವಾಸಿಗಳು ಕೆಲಸಕ್ಕೆ ಹೊರಡುವ ಮೊದಲು ತ್ಯಾಜ್ಯವನ್ನು ನೀಡಲು ಅನುಕೂಲವಾಗುವುದರ ಜೊತೆಗೆ, ಸಾರ್ವಜನಿಕರಿಂದ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಪ್ರಕರಣ ಮತ್ತು ಬ್ಲಾಕ್ ಸ್ಪಾಟ್ (Black Spot) ಗಳು ರೂಪುಗೊಳ್ಳುವುದನ್ನು ತಡೆಗಟ್ಟಲಾಗುವುದು. ಈ ಕ್ರಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾರ್ವಜನಿಕರ ಸಹಕಾರವನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕರೀಗೌಡ ಕೋರಿರುತ್ತಾರೆ.
ನಗರದ 77 ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್)ಗಳಲ್ಲಿ ಸ್ವಚ್ಛತಾ ಕಾರ್ಯ
ಬೆಂಗಳೂರು ನಗರದಲ್ಲಿ ಸಾರ್ವಜನಿಕರ ಅನುಕೂಲ ಹಾಗೂ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ನಗರದಲ್ಲಿ ಸ್ಥಾಪಿಸಿರುವ ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್) ಗಳಲ್ಲಿ ಇಂದು ಸ್ವಚ್ಚತಾ ಕಾರ್ಯವನ್ನು ನಡೆಸಲಾಯಿತು. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಕಡೆ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ನಾಗರಿಕರು ಸುಗಮವಾಗಿ ಚಲಿಸಬೇಕೆಂಬ ಉದ್ದೇಶದಿಂದ, ಪಾದಚಾರಿಗಳ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನನಿಬಿಡ ಪ್ರದೇಶ, ಪ್ರಮುಖ ಜಂಕ್ಷನ್, ಬಸ್ ನಿಲ್ದಾಣಗಳು ಸೇರಿದಂತೆ ಇನ್ನಿತರ ಕಡೆ 81 ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ.
ಪಾಲಿಕೆಯ ಎಲ್ಲಾ 8 ವಲಯಗಳಲ್ಲಿಯೂ ಪಾದಚಾರಿ ಮೇಲ್ಸೇತುವೆಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕರೀಗೌಡ ರವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ. ಅದರಂತೆ ಇಂದು ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಪೌರಕಾರ್ಮಿಕರ ಮೂಲಕ ಸ್ವಚ್ಛತಾ ಕಾರ್ಯವನ್ನು ನಡೆಸಿದ್ದಾರೆ. ಪಾದಚಾರಿ ಮೇಲ್ಸೇತುವೆಗಳ ಮೆಟ್ಟಿಲುಗಳು, ಪಾದಚಾರಿಗಳು ಓಡಾಡುವ ಮೆಲ್ಭಾಗ, ಲಿಪ್ಟ್ ಗಳು, ಸ್ಕೈವಾಕ್ ಗಳಿಗೆ ಅಂಟಿಸಿರುವ ಬಿತ್ತಿ ಪತ್ರಗಳು, ಸುತ್ತಮುತ್ತಲಿನ ಸ್ಥಳದಲ್ಲಿ ಬಿದ್ದಿರುವ ತ್ಯಾಜ್ಯ, ಧೂಳನ್ನು ಸ್ವಚ್ಛಗೊಳಿಸಲಾಗಿದೆ.
77 ಸ್ಕೈವಾಕ್‌ಗಳಲ್ಲಿ ಸ್ವಚ್ಛತೆ: ನಗರದ ವಿವಿದೆಡೆ ಅಂದರೆ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ, ಹೊಸೂರು ರಸ್ತೆ, ಹಳೆ ಮದ್ರಾಸ್ ರಸ್ತೆ, ಮಣಿಪಾಲ್ ಆಸ್ಪತ್ರೆ, ಮಾಗಡಿ ರಸ್ತೆ, ನಾಗರಭಾವಿ ಮುಖ್ಯ ರಸ್ತೆ, ಮೈಸೂರು ರಸ್ತೆ, ಟಿನ್ ಪ್ಯಾಕ್ಟರಿ, ಬೆಳ್ಳಂದೂರು ಸಿಂಗಸಂದ್ರ ಸೇರಿದಂತೆ 77 ಸೈವಾಕ್‌ಗಳಲ್ಲಿ ಸ್ವಚ್ಛತಾ ಕಾರ್ಯಚರಣೆ ನಡೆಸಲಾಗಿದೆ. ಪಾದಚಾರಿ ಮೇಲ್ಸೇತುವೆಗಳನ್ನು ಬಳಸುವ ನಾಗರಿಕರು, ಸ್ವಚ್ಚತೆ ಕಾಪಾಡಬೇಕು. ಪ್ಲಾಸ್ಟಿಕ್ ಕವರ್, ಬಾಟಲ್, ಉಗುಳುವುದು, ಬಿತ್ತಿಪತ್ರಗಳನ್ನು ಅಂಟಿಸಬಾರದು. ಸ್ಕೈವಾಕ್‌ಗಳು ಸ್ವಚ್ಛವಾಗಿರಬೇಕಾದರೆ ನಾಗರಿಕರ ಸಹಕಾರ ಅತ್ಯವಶ್ಯಕವಾಗಿದ್ದು, ಕಸ ಹಾಕದೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವಂತೆ ಕೋರಿದೆ.
ಸ್ಕೈವಾಕ್‌ಗಳ ನಿರ್ವಹಣೆಗೆ ಸೂಚನೆ: ನಗರದಲ್ಲಿ ಪಾದಚಾರಿ ಮೇಲ್ಸೇತುವೆಗಳನ್ನು ಬಿಬಿಎಂಪಿ ಟ್ರಾಫಿಕ್ ಇಂಜಿನಿಯರಿಂಗ್ ಸೆಲ್ ವತಿಯಿಂದ ಸ್ಥಾಪಿಸಲಾಗುತ್ತಿದೆ. ಈ ಪೈಕಿ ಪಾಲಿಕೆಯ ಟಿಇಸಿ ವಿಭಾಗದಿಂದ 16 ಹಾಗೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿಯಲ್ಲಿ 65 ಸ್ಕೈವಾಕ್‌ಗಳಿದ್ದು, ಎಲ್ಲಾ ಸ್ಕೈವಾಕ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಸೂಚನೆ ನೀಡಲಾಗಿದೆ.
