ಬೆಂಗಳೂರಿನಲ್ಲಿ ಟಿಪ್ಪರ್ ಲಾರಿಯೊಂದು 12 ವರ್ಷದ ಬಾಲಕನ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಾಲೆ ಮುಗಿಸಿ ಸ್ನೇಹಿತನ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಚಾಲಕ ಪರಾರಿಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳೀಯರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬೆಂಗಳೂರು (ಸೆ.15): ರಾಜ್ಯಾದ್ಯಂತ ಅರ್ಧವಾರ್ಷಿಕ ಪರೀಕ್ಷೆಗಳು ನಡೆಯುತ್ತಿವೆ. ಎಲ್ಲ ವಿದ್ಯಾರ್ಥಿಗಳು ದಸರಾ ರಜೆಗೂ ಮುನ್ನ ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲೊಬ್ಬ ವಿದ್ಯಾರ್ಥಿ ಶಾಲೆ ಮುಗಿದ ನಂತರ ಅಭ್ಯಾಸದ ಪುಸ್ತಕವನ್ನು ಪಡೆಯುವುದಕ್ಕೆಂದು ಸ್ನೇಹಿತನ ಮನೆಗೆ ಬಂದ ವಿದ್ಯಾರ್ಥಿಯ ಮೇಲೆ ಟಿಪ್ಪರ್ ಲಾರಿಯನ್ನು ಹರಿಸಲಾಗಿದೆ. ಲಾರಿ ಅಡಿಯಲ್ಲಿ ಸಿಲುಕಿದ ಬಾಲಕ ಅಪ್ಪಚ್ಚಿಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಹೌದು ಬೆಂಗಳೂರಿನಲ್ಲಿ ಮತ್ತೆ ರಸ್ತೆ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸುವ ಘಟನೆಯೊಂದು ನಡೆದಿದೆ. ಸೈಕಲ್‌ನಲ್ಲಿ ತೆರಳುತ್ತಿದ್ದ 12 ವರ್ಷದ ಬಾಲಕನೊಬ್ಬ ಟಿಪ್ಪರ್ ಲಾರಿಯಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಮೃತ ಬಾಲಕನನ್ನು ಶಶಾಂಕ್ (12) ಎಂದು ಗುರುತಿಸಲಾಗಿದೆ. ಈ ಘಟನೆ ಇಂದು ಮಧ್ಯಾಹ್ನ 3:15 ರ ಸುಮಾರಿಗೆ ಕಾಮಾಕ್ಷಿಪಾಳ್ಯದ ತೋಟದ ರಸ್ತೆಯ ಸಣ್ಣಕ್ಕಿ ಬೈಲಿನಲ್ಲಿ ಸಂಭವಿಸಿದೆ.

ಸ್ನೇಹಿನ ಭೇಟಿಗೆ ಹೋಗುತ್ತಿದ್ದ ಬಾಲಕ

ಶಶಾಂಕ್ ಶಾಲೆಯನ್ನು ಮುಗಿಸಿ ಮನೆಗೆ ಊಟಕ್ಕೆ ತೆರಳಿದ್ದನು. ನಂತರ ತನ್ನ ಸ್ನೇಹಿತನನ್ನು ಭೇಟಿಯಾಗಲು ಸೈಕಲ್‌ನಲ್ಲಿ ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಮಿನಿ ಟಿಪ್ಪರ್ ಆತನಿಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಕೆಳಗೆ ಬಿದ್ದ ಶಶಾಂಕ್ ತಲೆಯ ಮೇಲೆ ಲಾರಿ ಹತ್ತಿ ಇಳಿದಿದೆ. ಇದರಿಂದ ಬಾಲಕನ ಮೆದುಳು ಭಾಗ ಸಂಪೂರ್ಣವಾಗಿ ಹೊರಗೆ ಬಂದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಅಪಘಾತದ ನಂತರ ಲಾರಿ ಚಾಲಕ ತನ್ನ ಟಿಪ್ಪರ್ ವಾಹನವನ್ನು ಸ್ಥಳದಲ್ಲೇ ಬಿಟ್ಟು, ಪರಾರಿಯಾಗಿದ್ದಾನೆ. ಸಾರ್ವಜನಿಕರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಲಾರಿ ಬಿಟ್ಟು ಚಾಲಕ ಪರಾರಿ:

ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಮತ್ತು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಬಾಲಕನ ಕುಟುಂಬಕ್ಕೆ ವಿಷಯ ತಿಳಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಾರಿಯಾಗಿರುವ ಚಾಲಕನನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.

ಈ ಭೀಕರ ಅಪಘಾತದಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ಲಕ್ಷ್ಯದಿಂದ ಚಾಲನೆ ಮಾಡುವ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.