ಬೆಳಗಾವಿಯ ದೇವಸ್ಥಾನದ ಅರ್ಚಕರ ಮಗ ಸಿದ್ದಾಂತ ಪೂಜಾರಿ (27) ನೇಣಿಗೆ ಶರಣಾಗಿದ್ದಾನೆ. ತಾನು ಅದ್ಧೂರಿ ಜೀವನ ನಡೆಸಲು ಸಾಧ್ಯವಾಗದ ಕಾರಣ ಸಾಯುತ್ತಿರುವುದಾಗಿ, ನನಗೆ ಕಿರುಕುಳ ಕೊಟ್ಟೋರಿಗೆ ಮೇಲೆ ಹೋಗಿ ದೇವರಿಂದ ಹೊಡೆಸುತ್ತೇನೆಂದು ಮೊಬೈಲ್ ಡೆತ್ ನೋಟ್‌ನಲ್ಲಿ ಬರೆದಿದ್ದಾನೆ.
ಬೆಳಗಾವಿ (ಸೆ.24): ನಗರದ ಕಪಿಲೇಶ್ವರ ರಸ್ತೆಯ ಮನೆಯೊಂದರಲ್ಲಿ ಅರ್ಚಕರ ಮಗನೊಬ್ಬ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಈತ 'ನಾನು ಅದ್ಧೂರಿ ಜೀವನ ಮಾಡಲು ಸಾಧ್ಯವಾಗದೇ ನಾನು ಸಾಯುತ್ತಿದ್ದೇನೆ' ಎಂದು ತನ್ನ ಮೊಬೈಲ್‌ನಲ್ಲಿ ಬರೆದಿರುವ ವಿಚಿತ್ರ 'ಡೆತ್ ನೋಟ್' ಬರೆದಿಟ್ಟು ಸಾವಿಗೆ ಶರಣಾಗಿರುವುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಸಿದ್ದಾಂತ ಪೂಜಾರಿ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಸಿದ್ದಾಂತ ಅವರು ಕಪಿಲೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿದ್ದವರ ಮಗ ಎಂದು ತಿಳಿದುಬಂದಿದೆ. ಆತ್ಮಹ*ತ್ಯೆಗೂ ಮುನ್ನ ಮೊಬೈಲ್‌ನಲ್ಲಿ ಬರೆದಿರುವ ಡೆತ್ ನೋಟ್‌ನಲ್ಲಿ, 'ಮೇಲೆ ಹೋದಾಗ ದೇವರು ಸಿಕ್ಕರೆ ನನಗೆ ಕಿರುಕುಳ ಕೊಟ್ಟವರನ್ನು ದೇವರ ಕಡೆಯಿಂದ ಹೊಡೆಸುತ್ತೇನೆ' ಎಂದು ಬರೆದಿದ್ದಾರೆ. ಅಲ್ಲದೆ, 'ನನ್ನ ಅಜ್ಜಿ ಸತ್ತಾಗ ಮಟನ್ ಮಾಡಿದ್ದೀರಿ, ಆದರೆ ನನ್ನ ತಿಥಿ ವೇಳೆ ಮಟನ್ ಮಾಡಬೇಡಿ. ಅದನ್ನು ಬಿಟ್ಟು ಏನು ಬೇಕಾದರೂ ತಿನ್ನಲು ಮಾಡಿ'. ನನಗಾಗಿ ನೀವು ಯಾರೂ ಅಳಬೇಡಿ, ನನ್ನ ಆತ್ಮಕ್ಕೆ ತುಂಬಾ ತ್ರಾಸ ಆಗುತ್ತದೆ ಎಂದು ಕುಟುಂಬಸ್ಥರಿಗೆ ಮನವಿ ಮಾಡಿದ್ದಾರೆ.
ಅದ್ಧೂರಿ ಜೀವನ ಮಾಡೋದಕ್ಕಾಗ್ತಿಲ್ಲ:
ಆತ್ಮಹ*ತ್ಯೆಗೆ ಕಾರಣವನ್ನೂ ಅವರು ವಿಚಿತ್ರವಾಗಿ ವಿವರಿಸಿದ್ದಾರೆ. 'ನಾನು ಯಾವುದೇ ಹುಡುಗಿಗಾಗಿ ಸಾಯುತ್ತಿಲ್ಲ, ಆದರೆ ಅದ್ದೂರಿ ಜೀವನ ಮಾಡಲು ಸಾಧ್ಯವಾಗದೆ ಸಾಯುತ್ತಿದ್ದೇನೆ' ಎಂದು ನೋಟ್‌ನಲ್ಲಿ ತಿಳಿಸಿದ್ದಾರೆ. ಗಣಪತಿ ಹಬ್ಬದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತಾದರೂ, ಹಬ್ಬವನ್ನು ಜೋರಾಗಿ ಮಾಡಿ ಸಾಯಬೇಕು ಎಂದು ಯೋಚಿಸಿ ಅದನ್ನು ಮುಂದೂಡಿದ್ದಾಗಿ ಬರೆದಿದ್ದಾರೆ. ಕಳೆದ 3 ವರ್ಷಗಳ ಹಿಂದೆ ತನ್ನ ಮೇಲೆ ಹಾಕಲಾಗಿದ್ದ ರೇಪ್ ಪ್ರಕರಣದಿಂದಾಗಿ ದೇವಸ್ಥಾನದ ಕೆಲಸ ಕಳೆದುಕೊಂಡು ಜೀವನವೇ ಹಾಳಾಗುತ್ತಾ ಹೋಯಿತು ಎಂದು ಅವರು ಡೆತ್ ನೋಟ್‌ನಲ್ಲಿ ನೋವು ತೋಡಿಕೊಂಡಿದ್ದಾರೆ.
ಈ ಘಟನೆಗಳ ನೋವನ್ನು ನಾನು ಬಾಯಿಯಲ್ಲಿ ಹೇಳಬೇಕಿತ್ತಾದರೂ, ಸತ್ತಿದ್ದೇನೆ ನೀವೇ ಓದಿಕೊಳ್ಳಿ ಎಂದು ಡೆತ್ ನೋಟ್ ಮುಗಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಖಡೇಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


