ಬೆಳಗಾವಿಯ ಸದಾಶಿವ ನಗರದ ಸರ್ಕಾರಿ ವಸತಿ ನಿಲಯದಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಸಮಿತ್ರಾ ಗೋಕಾಕ್ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ, ವಿದ್ಯಾರ್ಥಿನಿ ನಿರಂತರವಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.

ಬೆಳಗಾವಿ (ಸೆ.22): ಇಲ್ಲಿನ ಸದಾಶಿವ ನಗರದಲ್ಲಿರುವ ಅಂಬೇಡ್ಕರ್ ಸರ್ಕಾರಿ ವಸತಿ ನಿಲಯದಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಸಮಿತ್ರಾ ಗೋಕಾಕ (20) ಆತ್ಮಹ*ತ್ಯೆ ಮಾಡಿಕೊಂಡಿದ್ದು, ಪ್ರಕರಣದ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ. ಘಟನಾ ಸ್ಥಳಕ್ಕೆ ಆಗಮಿಸಿದ ವಿದ್ಯಾರ್ಥಿನಿಯ ಕುಟುಂಬಸ್ಥರು, ಮಗಳ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟಿದ್ದಾರೆ.

ಮೃತ ಸಮಿತ್ರಾ ಗೋಕಾಕ ಮೂಲತಃ ಗೋಕಾಕ್‌ನವರಾಗಿದ್ದು, ಬೆಳಗಾವಿಯಲ್ಲಿ ನರ್ಸಿಂಗ್ ಓದುತ್ತಿದ್ದರು. ಘಟನಾ ಸ್ಥಳಕ್ಕೆ ಬಂದ ಸಮಿತ್ರಾಳ ತಂದೆ ದುಂಡಪ್ಪ, ವಾರ್ಡನ್ ಕಾಲಿಗೆ ಬಿದ್ದು, 'ನನ್ನ ಮಗಳಿಗೆ ಏನಾಗಿದೆ ಹೇಳಿ? 25 ಸಾವಿರ ಸಾಲ ಮಾಡಿ ಅವಳನ್ನು ಕಾಲೇಜಿಗೆ ಸೇರಿಸಿದ್ದೆ' ಎಂದು ಬಿಕ್ಕಿ ಬಿಕ್ಕಿ ಅತ್ತರು.

ಪೊಲೀಸರು ಕೋಣೆಯ ಬಾಗಿಲು ತೆರೆಯುತ್ತಿದ್ದಂತೆಯೇ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ವಸತಿ ನಿಲಯದ ಇತರ ವಿದ್ಯಾರ್ಥಿಗಳ ಪ್ರಕಾರ, ಸಮಿತ್ರಾ ಇತ್ತೀಚೆಗೆ ನಿರಂತರವಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಘಟನೆಯ ಹಿಂದೆ ವೈಯಕ್ತಿಕ ಕಾರಣಗಳಿವೆಯೇ ಅಥವಾ ಬೇರೆ ಏನಾದರೂ ಸಮಸ್ಯೆ ಇತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಮಿತ್ರಾ ಅವರ ಮೊಬೈಲ್ ಕರೆಗಳ ವಿವರ ಮತ್ತು ಅವರ ಸ್ನೇಹಿತರ ವಿಚಾರಣೆಯ ನಂತರವೇ ಈ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ. ಈ ಘಟನೆಯು ವಿದ್ಯಾರ್ಥಿ ವಲಯದಲ್ಲಿ ತೀವ್ರ ದುಃಖ ಮೂಡಿಸಿದೆ.