ಅಪ್ರಾಪ್ತೆ ಮೇಲೆ ಅತ್ಯಾ*ಚಾರ ಎಸಗಿದ ತಮಿಳುನಾಡು ಮೂಲದ ಆರೋಪಿಗೆ ಬೆಳಗಾವಿ ಪೋಕ್ಸೋ ನ್ಯಾಯಾಲಯ 30 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಮತ್ತೊಂದು ಪ್ರಕರಣದಲ್ಲಿ, ಪತ್ನಿಯನ್ನು ಕೊಲೆಗೈದ ಪತಿಗೆ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿ ಮಹತ್ವದ ತೀರ್ಪು ನೀಡಿದೆ.
ಬೆಳಗಾವಿ: ಅಪ್ರಾಪ್ತ ಮೇಲಿನ ಅತ್ಯಾ*ಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಜಿಲ್ಲಾ ಫೋಕ್ಕೂ ನ್ಯಾಯಾಲಯ ತಮಿಳುನಾಡು ಮೂಲದ ಅಪರಾಧಿಗೆ 30 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಸೋಮವಾರ ಮಹತ್ವದ ತೀರ್ಪು ನೀಡಿದೆ. ತಮಿಳುನಾಡಿನ ಹಾಲಿ ಕೊಯಮತ್ತೂರು ಜಿಲ್ಲೆ ಪೂನೇರಾಜಪುರಂನ ಮೂಲತಃ ಜಾಲೋರಾ ಜಿಲ್ಲೆಯ ಖಾರಾ ಗ್ರಾಮದ ಸುರೇಶ ಜಾವನರಾಮ ಚೌಧರಿ (35)ಶಿಕ್ಷೆಗೊಳಗಾದ ಅಪರಾಧಿ.
ಅಪ್ರಾಪ್ತ ಎಂದು ಗೊತ್ತಿದ್ದರೂ 2022ರ ಜೂನ್ 20 ರಂದು ಬಾಲಕಿಯ ಪರಿಚಯ ಮಾಡಿಕೊಂಡು ಫೋನ್‌ನಲ್ಲಿ ಮಾತನಾಡಿ ಒಬ್ಬರಿಗೊಬ್ಬರು ಪ್ರೀತಿಸ ತೊಡಗಿದರು. ಒಂದು ದಿನ ಆತ ಬಾಲಕಿಗೆ ಪೋನ್ ಮಾಡಿ ರಾಮದುರ್ಗಕ್ಕೆ ಬರಲು ಹೇಳಿ ಅಲ್ಲಿಯ ಹೋಟೆಲ್ ಗೆ ಬಂದಿದ್ದಾನೆ. ಬೆಳಗ್ಗೆ 8.30 ಕ್ಕೆ ಬಾಡಿಗೆ ಕಾರಿನ ಮೂಲಕ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ತೆರಳಿದ್ದಾನೆ.
ದೇಗುಲದ ಬಳಿಯ ಲಾಡ್ಜ್‌ನಲ್ಲಿ ಲೈಂಗಿಕ ದೌರ್ಜನ್ಯ
ಮೊದಲೇ ಎರಡು ಟಿಕೆಟ್ ಬುಕ್ ಮಾಡಿ ಬೆಂಗಳೂರಿಗೆ ಕರೆದೊಯ್ದು ಬಾಲಕಿಯನ್ನು ಕೊಯಮತ್ತೂರಿಗೆ 2022ರ ಜೂನ್ 28 ರಂದು ಸಂಜೆ ಕರೆದುಕೊಂಡು ಹೋಗಿದ್ದಾನೆ. ಕೊಯಮತ್ತೂರಿನಿಂದ ಸುಮಾರು 15 -20 ಕಿಮೀ ದೂರದ ದೇವಸ್ಥಾನವೊಂದರ ಬಳಿಯ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಹೊರಗೆ ಬಂದ ಆತ ಆಕೆಯ ಫೋನ್ ಸ್ವಿಚ್ ಆಫ್ ಮಾಡಿ ಅದರಲ್ಲಿನ ಸಿಮ್ ತೆಗೆದು ಮುರಿದು ಹಾಕಿದ್ದಾನೆ. ಇಬ್ಬರೂ ಬಸ್ ಮೂಲಕ ಕೇರಳಕ್ಕೆ ಹೋಗಿದ್ದಾರೆ. ಅಲ್ಲಿಂದ ರೈಲ್ವೆ ಮೂಲಕ ಗುಂಡಕಲ್ ಎಂಬಲ್ಲಿಗೆ ಹೋಗಿದ್ದಾರೆ. ನಂತರ ಮುಂಬೈಗೆ ರೈಲ್ವೆ ಮೂಲಕ ಹೋಗುವಾಗ ಸೊಲ್ಲಾಪುರ ಬಳಿ ದೌಂಡ್ ರೈಲ್ವೆ ಸ್ಟೇಷನ್ ನಿಲ್ದಾಣದಲ್ಲಿ ಇವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಬಾಲಕಿಗೆ4 ಲಕ್ಷ ಪರಿಹಾರ ಧನ
ಈ ಅಪರಾಧಕ್ಕೆ ಸಂಬಂಧಿಸಿ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐ.ರ್ಆ. ಪಟ್ಟಣಶೆಟ್ಟಿ ತನಿಖೆ ಮಾಡಿ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕೋ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಸಿ.ಎಂ. ಪುಷ್ಪಲತಾ ಪ್ರಕರಣದ ವಿಚಾರಣೆ ನಡೆಸಿ ಒಟ್ಟು 8 ಸಾಕ್ಷಿಗಳ ವಿಚಾರಣೆ, 54 ದಾಖಲೆ ಮತ್ತು 13 ಮುದ್ದೆ ಮಾಲುಗಳ ಆಧಾರದ ಮೇಲೆ ಆರೋಪಿ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ. ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 4 ಲಕ್ಷ ಪರಿಹಾರ ಧನ ಪಡೆಯಲು ಆದೇಶಿಸಿದ್ದಾರೆ ಮತ್ತು ಪರಿಹಾರದ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಐದು ವರ್ಷಗಳವರೆಗೆ ಠೇವಣಿಯಾಗಿ ಇಡಲು ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್. ವಿ.ಪಾಟೀಲ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.
ಪತ್ನಿ ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ
ಬೆಳಗಾವಿ: ಪತ್ನಿಯನ್ನು ಕೊಲೆಗೈದ ಪತಿಗೆ ಬೆಳಗಾವಿಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ಕಠಿಣ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಮೂಲತಃ ವಿಜಯಪುರ ಜಿಲ್ಲೆ ತಾಳಿಕೋಟೆಯ ಪರಶುರಾಮ ಗಣಪತಿ ಪೀಸೆ (40)ಶಿಕ್ಷೆಗೊಳಗಾದ ಆರೋಪಿ. ಬೆಳಗಾವಿಯ ವಿಜಯನಗರ ಅತವಾಡಕರ್‌ಲೇಔಟ್ ಪ್ಲಾಟ್ ನಂ.123 ರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. 2020 ರ ಫೆಬ್ರವರಿ 13 ರಂದು ಮಧ್ಯಾಹ್ನ 1 ರಿಂದ 1.30 ರ ಸುಮಾರಿಗೆ ಈತ ತನ್ನ ಪತ್ನಿ ಕವಿತಾ ಅವರೊಂದಿಗೆ ತನ್ನ ಸಣ್ಣ ಮಕ್ಕಳನ್ನು ಎತ್ತಿಕೊಳ್ಳುವ ವಿಚಾರದಲ್ಲಿ ತಂಟೆ ತೆಗೆದು ಅದೇ ಸಿಟ್ಟಿನಿಂದ ಅವರ ಕುತ್ತಿಗೆ ಹಿಚುಕಿ ಉಸಿರುಗಟ್ಟಿಸಿ ಕೊಲೆಗೈದಿದ್ದ. ಈ ಬಗ್ಗೆ ಕವಿತಾ ಅವರ ತಂದೆ ಕಲಬುರ್ಗಿಯ ಸುನಿಲ್ ಕುಮಾರ್ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಈ ಪ್ರಕರಣದ ತನಿಖೆ ನಡೆಸಿದ ಅಂದಿನ ಕ್ಯಾಂಪ್ ಪೊಲೀಸ್ ಠಾಣೆಯ ಪಿ ಐ ಡಿ.ಸಂತೋಷ ಕುಮಾರ್‌ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ಐದನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್. ಎಸ್.ಮಂಜುನಾಥ ಅವರು ಶಿಕ್ಷೆಯ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಏ. ಎಂ.ಮಠಪತಿ ವಾದ ಮಂಡಿಸಿದ್ದರು.
