ಐದು ವರ್ಷಗಳ ಪ್ರೀತಿಗೆ ಮೋಸ ಹೋದ ಯುವತಿ, ನ್ಯಾಯಕ್ಕಾಗಿ ಪ್ರಿಯಕರನ ಮನೆ ಮುಂದೆ ಧರಣಿ. ಜಾತಿ ಅಡ್ಡಿಯಿಂದ ಮದುವೆ ನಿರಾಕರಿಸಿದ ಯುವಕ, ಕುಟುಂಬ ಸಮೇತ ಪರಾರಿ.

ಪ್ರೀತಿಯಲ್ಲಿ ಮೋಸಕ್ಕೊಳಗಾದ ಯುವತಿ, ನ್ಯಾಯಕ್ಕಾಗಿ ಹಗಲು-ರಾತ್ರಿ ಎನ್ನದೆ ಯುವಕನ ಮನೆಯ ಮುಂದೆ ಧರಣಿ ಕುಳಿತಿರುವ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಹೊಸ ನೆಲ್ಲುಡಿ ಗ್ರಾಮದ ನಂದೀಶ್ ಮತ್ತು ಕೊಟ್ಟಾಲ್ ಗ್ರಾಮದ ಯುವತಿ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ ನಂದೀಶ್, ಯುವತಿಯನ್ನು ಹಾಸನದಿಂದ ಕರೆದುಕೊಂಡು ಬಂದು, ಕಂಪ್ಲಿಯಲ್ಲಿ ಒಂದು ದಿನ ತಿರುಗಾಡಿಸಿದ್ದಾನೆ. ಮನೆಯವರಿಂದ ನಂದೀಶ್ ಪೋನ್ ಬಂದ ಕೂಡಲೇ ಯುವತಿಯನ್ನು ಬಿಟ್ಟು ಹೋಗಿದ್ದಾನೆ. ಮನೆಯವರ ಒತ್ತಡಕ್ಕೆ ತುತ್ತಾಗಿ ಬಿಟ್ಟು ಹೋಗಿದ್ದಾನೆ.

ಮನೆಯವರ ವಿರೋಧಕ್ಕೆ ಕಾರಣ ಜಾತಿ ಅಡ್ಡಿ ಬಂದಿದೆ. ಯುವತಿ ಭೋವಿ (ಎಸ್ಸಿ) ಸಮಾಜಕ್ಕೆ ಸೇರಿದ್ದರೆ, ನಂದೀಶ್ ಲಿಂಗಾಯತ ಜಂಗಮ ಸಮಾಜಕ್ಕೆ ಸೇರಿದವನು. ಪ್ರೀತಿ ಮಾಡುವಾಗ ಜಾತಿ ಅಡ್ಡಿಯಾಗದಿದ್ದರೂ, ಮದುವೆಯ ವಿಷಯದಲ್ಲಿ ವಿರೋಧ ವ್ಯಕ್ತವಾಗಿದೆ ಎಂದು ಯುವತಿ ಆರೋಪಿಸಿದ್ದಾರೆ.

ಈ ಘಟನೆ ಬಳಿಕ ನಂದೀಶ್‌ ಕುಟುಂಬ ಮನೆಗೆ ಬೀಗ ಹಾಕಿ ಪಲಾಯನ ಮಾಡಿದೆ. ಮದುವೆ ಮಾಡುವವರೆಗೂ ಹೋರಾಟ ಮುಂದುವರಿಸುವುದಾಗಿ ಯುವತಿ ಎಚ್ಚರಿಕೆ ನೀಡಿದ್ದಾರೆ. ನ್ಯಾಯ ಸಿಗುವವರೆಗೆ ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಯುವತಿಯ ಪ್ರತಿಭಟನೆ ಹಿನ್ನೆಲೆ ನಂದೀಶ್ ಕುಟುಂಬ ಮನೆಗೆ ಬೀಗ ಹಾಕಿ ಹೋಗಿದ್ದಾರೆ.