ಅನನ್ಯಾ ಭಟ್ ನಾಪತ್ತೆ ಪ್ರಕರಣದಲ್ಲಿ ಸುಜಾತ ಭಟ್ ಅವರ ಹೇಳಿಕೆಯನ್ನು ದಾಖಲಿಸಲು ಎಸ್‌ಐಟಿ ಅವರ ನಿವಾಸಕ್ಕೆ ಭೇಟಿ ನೀಡಲಿದೆ. ಆರೋಗ್ಯ ಮತ್ತು ವಯಸ್ಸಿನ ಕಾರಣದಿಂದಾಗಿ ಸುಜಾತ ಭಟ್ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಕಾನೂನು ಪ್ರಕಾರ, ಎಸ್‌ಐಟಿ ಅವರ ಮನೆಯಲ್ಲಿಯೇ ಹೇಳಿಕೆ ದಾಖಲಿಸಲಿದೆ.

ಬೆಂಗಳೂರು (ಆ.23): ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಪ್ರಕರಣದ ಪ್ರಮುಖ ವ್ಯಕ್ತಿ ಸುಜಾತ ಭಟ್ ಅವರ ಹೇಳಿಕೆಯನ್ನು ದಾಖಲಿಸಲು ವಿಶೇಷ ತನಿಖಾ ತಂಡ (ಎಸ್ಐಟಿ) ಅವರ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. 70 ವರ್ಷ ಮೇಲ್ಪಟ್ಟಿರುವ ಸುಜಾತ ಭಟ್ ಅವರು ಆರೋಗ್ಯ ಮತ್ತು ಮಾನಸಿಕ ಸಮಸ್ಯೆಯ ಕಾರಣ ನೀಡಿ, ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರಿದ್ದರು.

ಈ ಹಿಂದೆ ಎಸ್ಐಟಿ, ಬಿಎನ್ಎಸ್ 131 ಸೆಕ್ಷನ್ ಅಡಿಯಲ್ಲಿ ಸುಜಾತ ಭಟ್ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಅವರು ತಮ್ಮ ವಯಸ್ಸು ಮತ್ತು ಆರೋಗ್ಯದ ಕಾರಣ ನೀಡಿ ಹಾಜರಾಗಿರಲಿಲ್ಲ. ಅಲ್ಲದೆ, ಇತ್ತೀಚೆಗೆ ಮಾಧ್ಯಮದವರಿಂದ ಕಿರುಕುಳವಾಗಿದೆ ಎಂದು ಆರೋಪಿಸಿ ಅವರು ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ವೈರಲ್ ಆಗಿತ್ತು. ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ, ಎಸ್ಐಟಿ ಈಗ ಕಾನೂನು ಪ್ರಕಾರ ಅವರ ಹೇಳಿಕೆಯನ್ನು ಅವರ ಮನೆಯಲ್ಲಿಯೇ ದಾಖಲಿಸಲು ಮುಂದಾಗಿದೆ.

ಕಾನೂನು ಪ್ರಕಾರ ನಿವಾಸದಲ್ಲೇ ಹೇಳಿಕೆ ದಾಖಲು

ಬಿಎನ್ಎಸ್ 180 ಕಾಯ್ದೆಯ ಪ್ರಕಾರ, ದೂರುದಾರರು ಅಥವಾ ಸಾಕ್ಷಿದಾರರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಅಥವಾ 18 ವರ್ಷದ ಒಳಗಿನವರಾಗಿದ್ದರೆ, ತನಿಖಾ ತಂಡವು ಅವರ ನಿವಾಸಕ್ಕೆ ತೆರಳಿ ಹೇಳಿಕೆಗಳನ್ನು ದಾಖಲಿಸಬಹುದು. ಈ ಕಾನೂನಿನ ಅನ್ವಯ, ಬನಶಂಕರಿಯ ಸುಜಾತ ಭಟ್ ನಿವಾಸದಲ್ಲಿ ಅವರ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮೂಲಕ ದಾಖಲಿಸಿಕೊಳ್ಳಲು ಎಸ್ಐಟಿ ಸಿದ್ಧತೆ ನಡೆಸಿದೆ. ಇದು ಪ್ರಕರಣದ ಮುಂದಿನ ತನಿಖೆಗೆ ನಿರ್ಣಾಯಕ ಹೆಜ್ಜೆಯಾಗಲಿದೆ.

ಮನೆಗೆ ಬಿಗಿ ಭದ್ರತೆ: ಅನನ್ಯಾ ಭಟ್ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್.ಐ.ಟಿ ತಂಡವು ಸುಜಾತ ಭಟ್ ಅವರ ಹೇಳಿಕೆ ದಾಖಲಿಸಲು ಅವರ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ, ಬನಶಂಕರಿ ಬಳಿ ಇರುವ ಅವರ ಮನೆಗೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಮಾಧ್ಯಮದವರ ಮತ್ತು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲು ಸುಜಾತ ಭಟ್ ಅವರ ನಿವಾಸದ ಮುಂದೆ ಬ್ಯಾರಿಕೇಡ್‌ಗಳನ್ನು ಹಾಕಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಬನಶಂಕರಿ ಇನ್ಸ್‌ಪೆಕ್ಟರ್ ಕೊಟ್ರೇಶ್ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ ಮಹಿಳಾ ಪೊಲೀಸ್ ಪೇದೆಗಳೂ ಇದ್ದು, ಅವರನ್ನು ಮನೆಯ ಒಳಗೂ ಭದ್ರತೆಗಾಗಿ ನಿಯೋಜಿಸಲಾಗಿದೆ.

ಸುಜಾತ ಭಟ್ ಅವರು ವಯಸ್ಸು ಮತ್ತು ಆರೋಗ್ಯದ ಕಾರಣ ನೀಡಿ, ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರಿದ್ದ ಹಿನ್ನೆಲೆಯಲ್ಲಿ, ಎಸ್‌ಐಟಿ ತಂಡವು ಅವರ ಮನೆಯಲ್ಲಿಯೇ ಹೇಳಿಕೆ ದಾಖಲಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಭದ್ರತೆಯನ್ನು ಹೆಚ್ಚಿಸಲಾಗಿದೆ.